ಸ್ವಾತಂತ್ರ್ಯದ ಹಕ್ಕಿನೊಳಗೇ ವಿದೇಶ ಪ್ರಯಾಣ ಹಕ್ಕು ಮಿಳಿತ: ಪಾಸ್‌ಪೋರ್ಟ್‌ ಮಂಜೂರಾತಿಗೆ ಹೈಕೋರ್ಟ್‌ ಕದತಟ್ಟಿದ ಮುಫ್ತಿ

ಸ್ಥಿತಿಗತಿ ಪರಿಶೀಲನಾ ಅರ್ಜಿಯ ಪ್ರಕಾರ ಪೊಲೀಸ್ ಪರಿಶೀಲನಾ ವರದಿಯನ್ನು ಪಾಸ್‌ಪೋರ್ಟ್ ಅಧಿಕಾರಿಗೆ ಇಲ್ಲಿಯವರೆಗೆ ರವಾನಿಸಲಾಗಿಲ್ಲ. ಇದನ್ನು ಪೂರ್ಣಗೊಳಿಸಲು ನಿಗದಿತ ಗಡುವು ಮುಗಿದಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
Mehbooba Mufti
Mehbooba Mufti

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೆ (ಪಿಡಿಪಿ) ಮೆಹಬೂಬ ಮುಫ್ತಿ ಅವರು ಪಾಸ್‌ಪೋರ್ಟ್‌ ನವೀಕರಣಕ್ಕಾಗಿ ತಾವು ನೀಡಿದ್ದ ಅರ್ಜಿಯನ್ನು ನಿಗದಿತ ಅವಧಿ ಮೀರಿದರೂ ನವೀಕರಿಸದೆ ಇರುವ ಸಂಬಂಧ ತಕರಾರು ಎತ್ತಿ ತಮಗೆ ಪಾಸ್‌ಪೋರ್ಟ್‌ ನೀಡುವಂತೆ ಸರ್ಕಾರ ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಕೋರಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ‌ ಮೆಟ್ಟಿಲೇರಿದ್ದಾರೆ (ಮೆಹಬೂಬ ಮುಫ್ತಿ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು).

ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಿನೊಳಗೆ ವಿದೇಶ ಪ್ರಯಾಣದ ಹಕ್ಕೂ ಸಹ ಮಿಳಿತಗೊಂಡಿದೆ. ಕಾನೂನಾನತ್ಮಕ ನಿಯಮಗಳನ್ನು ಹೊರತುಪಡಿಸಿ ಅದನ್ನು ನಿರ್ಬಂಧಿಸಲಾಗದು ಎಂದು ಮುಫ್ತಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

“ಅರ್ಜಿದಾರರಿಗೆ ಪಾಸ್‌ಪೋರ್ಟ್‌ ನೀಡದೇ ತಡ ಮಾಡಿರುವುದು ಹಾಗೂ ಅವರು ವಿದೇಶಕ್ಕೆ ತೆರಳದಂತೆ ತಡೆಯುವುದು ಕಾನೂನುಬಾಹಿರ ಮಾತ್ರವಲ್ಲ ಭಾರತದ ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಆದೇಶದ ನಿರ್ಭೀತ ಉಲ್ಲಂಘನೆಯಾಗಿದೆ” ಎಂದು ಜಹಾಂಗೀರ್‌ ಗನಯ್‌ ಕಾನೂನು ಸಂಸ್ಥೆ ಮೂಲಕ ಸಲ್ಲಿಸಲಾದ ಮನವಿಯಲ್ಲಿ ವಿವರಿಸಲಾಗಿದೆ.

ಪೊಲೀಸ್‌ ಪರಿಶೀಲನೆಯ ಅಗತ್ಯತೆಯ ನೆಪವೊಡ್ಡಿ ತನಗೆ ಪಾಸ್‌ಪೋರ್ಟ್‌ ನಿರಾಕರಿಸಿರುವ ಕೇಂದ್ರ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಪಾಸ್‌ಪೋರ್ಟ್‌ ನೀಡುವಂತೆ ನಿರ್ದೇಶಿಸುವಂತೆ ಹೈಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ಮುಫ್ತಿ ಮನವಿ ಮಾಡಿದ್ದಾರೆ.

Also Read
ವ್ಯಕ್ತಿಯ ಹಕ್ಕುಗಳಿಗಿಂತ ಮಾಧ್ಯಮಗಳ ವಾಕ್ ಸ್ವಾತಂತ್ರ್ಯ ಮಿಗಿಲಲ್ಲ: ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯ

2019ರ ಮೇ 31ರಂದು ಮುಫ್ತಿ ಅವರ ಪಾಸ್‌ಪೋರ್ಟ್‌ ಅವಧಿ ಮುಗಿದಿತ್ತು. ಈ ಹಿನ್ನೆಲೆಯಲ್ಲಿ ಅವರು ಪಾಸ್‌ಪೋರ್ಟ್‌ ನವೀಕರಿಸುವ ಸಂಬಂಧ ಮನವಿ ಸಲ್ಲಿಸಿದ್ದು, ಪಾಸ್‌ಪೋರ್ಟ್‌ ಅಧಿಕಾರಿಯು ಕಳೆದ ವರ್ಷದ ಡಿಸೆಂಬರ್‌ 11ರಂದು ಅದನ್ನು ಸ್ವೀಕರಿಸಿದ್ದಾರೆ. ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಪಾಸ್‌ಪೋರ್ಟ್‌ ಅಧಿಕಾರಿಯು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮತ್ತು ಶ್ರೀನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಿಂದ ಪೊಲೀಸ್‌ ಪರಿಶೀಲನೆ ಕೋರಿದ್ದಾರೆ. ಇಡೀ ತಿಂಗಳು ಪೊಲೀಸ್‌ ಪರಿಶೀಲನೆ ನಡೆಯದೇ ಇರುವುದರಿಂದ ಮುಫ್ತಿ ಅವರು ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ 21 ದಿನಗಳ ಒಳಗೆ ಪೊಲೀಸ್‌ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಎಸ್‌ಎಸ್‌ಪಿಗೆ ಮನವಿ ಸಲ್ಲಿಸಿದ್ದಾರೆ.

ಎಸ್‌ಎಸ್‌ಪಿಯವರು ಫೆಬ್ರವರಿ 13ರಂದು ತಮ್ಮ ಮನವಿ ಸ್ವೀಕರಿಸಿರುವುದಾಗಿ ಮುಫ್ತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸ್ಥಿತಿಗತಿ ಪರಿಶೀಲನಾ ಅರ್ಜಿಯ ಪ್ರಕಾರ ಪೊಲೀಸ್ ಪರಿಶೀಲನಾ ವರದಿಯನ್ನು ಪಾಸ್‌ಪೋರ್ಟ್ ಅಧಿಕಾರಿಗೆ ಇಲ್ಲಿಯವರೆಗೆ ರವಾನಿಸಲಾಗಿಲ್ಲ. ಆದರೆ ಅದಕ್ಕೆ ನೀಡಲಾಗಿದ್ದ ನಿಗದಿತ ಗಡುವು ಮುಗಿದಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪಾಸ್‌ಪೋರ್ಟ್‌ ನೀಡಲು ವಿಳಂಬ ನೀತಿ ಅನುಸರಿಸುವ ಮೂಲಕ ಮುಫ್ತಿ ಅವರ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರುವುದರ ಜೊತೆಗೆ ಸಾಂವಿಧಾನಿಕ ಆದೇಶ ಮತ್ತು ಪಾಸ್‌ಪೋರ್ಟ್‌ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಲಾಗದೆ ಎಂದು ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com