ಹಿರಿಯ ವಕೀಲ ನಜೀರ್ ಅಹ್ಮದ್ ರೋಂಗಾ ಅವರ ಬಂಧನ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಜಮ್ಮು ಕಾಶ್ಮೀರ ಸರ್ಕಾರಕ್ಕೆ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ನ್ಯಾಯಮೂರ್ತಿ ಪುನೀತ್ ಗುಪ್ತಾ ಅವರು ನವೆಂಬರ್ 20ಕ್ಕೆ ಪ್ರಕರಣ ಮುಂದೂಡಿದರು.
ಜಮ್ಮು ಮತ್ತು ಕಾಶ್ಮೀರ ಮುಂಜಾಗ್ರತಾ ಬಂಧನ ಕಾಯಿದೆಯಡಿ ಹಿರಿಯ ವಕೀಲ ಎನ್ ಎ ರೋಂಗಾ ಅವರನ್ನು ಕಳೆದ ಜುಲೈನಲ್ಲಿ ಬಂಧಿಸಲಾಗಿತ್ತು.
ಬಂಧನದ ವೇಳೆ ಕಾಯಿದೆಯಡಿ ರೋಂಗಾ ಅವರನ್ನು ಬಂಧಿಸಲಾಗಿದೆ ಎಂದು ಅವರ ಕುಟುಂಬಕ್ಕೆ ಪೊಲೀಸರು ತಿಳಿಸಿರಲಿಲ್ಲ. ಪೊಲೀಸ್ ತಂಡದ ಆಗಮನ ಹಾಗೂ ರೋಂಗಾ ಬಂಧನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಅಕ್ರಮವಾಗಿ ಅವರನ್ನು ಬಂಧಿಸಲಾಗಿದ್ದು ಚಿತ್ರಹಿಂಸೆ ನೀಡಲಾಗಿದೆ. ಹೀಗಾಗಿ ಅವರನ್ನು ಬಿಡುಗಡೆ ಮಾಡಬೇಕು ಮತ್ತು ₹ 60 ಲಕ್ಷ ಪರಿಹಾರ ನೀಡಬೇಕು ಎಂದು ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿತ್ತು.
ಡಿ ಕೆ ಬಸು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಅನುಸಾರ ಈ ಬಂಧನ ನಡೆದಿಲ್ಲ ಎಂದು ವಕೀಲ ಬಿ ಎ ಖಾನ್ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ತಿಳಿಸಲಾಗಿತ್ತು.
ಈ ಹಿಂದೆ ನ್ಯಾಯಮೂರ್ತಿ ಸಂಜಯ್ ಧರ್ ಅವರನ್ನೊಳಗೊಂಡ ಪೀಠ ಮೂರು ವಾರಗಳ ಸಮಯಾವಕಾಶ ನೀಡಿತ್ತಾದರೂ ಶುಕ್ರವಾರ ಮತ್ತೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ.
ರೋಂಗಾ ಅವರು ಹಲವು ಬಾರಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2023ರಲ್ಲಿ, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಒಂದು ದಿನದ ಮೊದಲು ಪ್ರತಿಭಟನೆ ನಡೆಯಬಹುದು ಎಂಬ ಮುಂಜಾಗ್ರತಾ ಕ್ರಮವಾಗಿ ಜಮ್ಮು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿಯಲ್ಲಿ ಬಂಧನಕ್ಕೊಳಗಾದ ಅನೇಕ ನಾಯಕರುಗಳಲ್ಲಿ ರೋಂಗಾ ಕೂಡ ಒಬ್ಬರು.