Supreme Court, Jammu and Kashmir
Supreme Court, Jammu and Kashmir 
ಸುದ್ದಿಗಳು

ಶಾಶ್ವತ ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು ಕಾಶ್ಮೀರ ಉಳಿಯದು: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಭರವಸೆ

Bar & Bench

ಜಮ್ಮು ಕಾಶ್ಮೀರವನ್ನು ತಾತ್ಕಾಲಿಕ ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದ್ದು ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯುತ್ತದೆಯಾದರೂ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ  [ಸಂವಿಧಾನದ 370 ನೇ ವಿಧಿಗೆ ಸಂಬಂಧಿಸಿದ ಪ್ರಕರಣ ].

ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ದೊರಕಿಸಿಕೊಡಲು ಮಾರ್ಗಸೂಚಿ ರೂಪಿಸುವಂತೆ ಮತ್ತು ಕಾಲಮಿತಿ ನಿಗದಿಪಡಿಸುವ ಸಂಬಂಧ ಅಧಿಕೃತ ಹೇಳಿಕೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರಿದ್ದ ಸಾಂವಿಧಾನಿಕ ಪೀಠ ಈ ಸಂದರ್ಭದಲ್ಲಿ ತಿಳಿಸಿತು.

"ನಮಗೆ ಈ ಬಗ್ಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಹೇಳಿಕೆ ಬೇಕು. ಈ ಬಗ್ಗೆ ಸಮಯ ಮಿತಿಯನ್ನೇನಾದರೂ ಇರಿಸಿಕೊಂಡಿದ್ದೀರಾ ಹೇಗೆ? ಪ್ರಜಾಪ್ರಭುತ್ವದ ಮರುಸ್ಥಾಪನೆ ನಮ್ಮ ರಾಷ್ಟ್ರದ ಪ್ರಮುಖ ಅಂಶವಾಗಿದೆ. ಇದಕ್ಕೆ ಮಾರ್ಗಸೂಚಿ ಏನು ಎಂದು ದಯವಿಟ್ಟು ನಮಗೆ ತಿಳಿಸಿ" ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ಶೀಘ್ರದಲ್ಲೇ ಪೂರಕ ಹೇಳಿಕೆ ನೀಡಲಾಗುವುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣದ ಹನ್ನೆರಡನೇ ದಿನದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದರು.

“ನಾನು (ಕೇಂದ್ರದಿಂದ) ಸೂಚನೆಗಳನ್ನು ಪಡೆದಿದ್ದು ಆ ಪ್ರಕಾರ ಕೇಂದ್ರಾಡಳಿತ ಪ್ರದೇಶ ಶಾಶ್ವತ ಲಕ್ಷಣವಲ್ಲ. ನಾಳೆ ನಾನು ಸಕಾರಾತ್ಮಕವಾದ ಹೇಳಿಕೆ ನೀಡುತ್ತೇನೆ. ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯಲಿದೆ. ಆದರೆ ಜಮ್ಮು ಕಾಶ್ಮೀರದ ಬಗ್ಗೆ ಮಾತ್ರ ನಾವು ಪ್ರಸ್ತುತ ಪ್ರಸ್ತಾಪಿಸುತ್ತಿದ್ದೇವೆ” ಎಂದು ಅವರು ವಿವರಿಸಿದರು.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿಯ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಎಸ್‌ಜಿ ಈ ವಾದ ಮಂಡಿಸಿದ್ದಾರೆ.

ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಲು ಸಂಸತ್ತು ಅಧಿಕಾರ ಹೊಂದಿದೆಯೇ ಎಂದು ಸಿಜೆಐ ಚಂದ್ರಚೂಡ್ ಇಂದು ಪ್ರಶ್ನಿಸಿದರು.

ಈ ನಿಟ್ಟಿನಲ್ಲಿ ಎಸ್‌ಜಿ ಅವರು ಜಮ್ಮು ಕಾಶ್ಮೀರ ಮರುಸಂಘಟನೆ ಕಾಯಿದೆಯನ್ನು ಉಲ್ಲೇಖಿಸಿದಾಗ, ಸಿಜೆಐ ಅವರು ಕೇಂದ್ರಾಡಳಿತದ ಸ್ಥಾನಮಾನವು ಶಾಶ್ವತವಾಗಿ ಉಳಿಯಲಿದೆಯೇ ಎಂದು ಕೇಳಿದರು. ಆಗ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವುದು ಮತ್ತು ಚುನಾವಣೆಗಳನ್ನು ನಡೆಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಎಸ್‌ಜಿ ತಿಳಿಸಿದರು.  

ಈ ಹಂತದಲ್ಲಿ ನ್ಯಾಯಮೂರ್ತಿ ಕೌಲ್ ನಂತರ ಅಸ್ಸಾಂನ ಒಂದು ಭಾಗವನ್ನು ಸಹ ಬೇರ್ಪಡಿಸಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬಹುದೇ ಎಂದು ಪ್ರಶ್ನೆ ಎಸೆದರು. ಇದು ತುಂಬಾ ಅತಿರೇಕದ ಉದಾಹರಣೆಯಾಗುತ್ತದೆ. ವಿಧಿ 3ರ ಅಡಿಯಲ್ಲಿ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲು ಸಾಧ್ಯವಿಲ್ಲ ಏಕೆಂದರೆ ಪ್ರತ್ಯೇಕತೆಯ ಕೂಗು ಕೇಳಿ ಬಂದಿರಬೇಕು ಎಂದು ಅವರು ಹೇಳಿದರು.

ನಂತರ ಸಿಜೆಐ ಚಂಡೀಗಢ ಹೇಗೆ ಜನ್ಮತಾಳಿತು ಎಂಬುದನ್ನು ಉದಾಹರಣೆಯಾಗಿ ನೀಡುತ್ತಾ ಮೊದಲು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಒಂದು ಹಂತದ ಬಳಿಕ ಅದನ್ನು ರಾಜ್ಯವನ್ನಾಗಿ ಪರಿವರ್ತಿಸಲು ಸಂಸತ್ತಿಗೆ ಹೆಚ್ಚಿನ ಅವಕಾಶ ಇಲ್ಲವೇ ಎಂದು ಪ್ರಶ್ನಿಸಿದರು.

ಆದರೂ ಜಮ್ಮು ಕಾಶ್ಮೀರಕ್ಕೆ ಮತ್ತೆ ಯಾವಾಗ ರಾಜ್ಯದ ಸ್ಥಾನಮಾನ ನೀಡಲಾಗುತ್ತದೆ ಹಾಗೂ ಅಲ್ಲಿ ಎಂದು ಚುನಾವಣೆ ನಡೆಯಲಿದೆ ಎಂಬುದನ್ನು ಸ್ಪಷ್ಟಪಡಿಸುವುದು ಕೇಂದ್ರಕ್ಕೆ ನಿರ್ಣಾಯಕ ವಿಚಾರವಾಗಬೇಕು ಎಂದು ಸಿಜೆಐ ನುಡಿದರು.