High Court of J&K and Ladakh, Jammu 
ಸುದ್ದಿಗಳು

ಬೇರೆ ಜಾತಿಯವರನ್ನು ಮದುವೆಯಾದ ಕಾರಣಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ದೊರೆಯದ ಮಹಿಳೆಗೆ ಕಾಶ್ಮೀರ ಹೈಕೋರ್ಟ್ ಅಭಯ

ಅನ್ಯ ಜಾತಿಯವರನ್ನು ಮದುವೆಯಾದರೂ ಕೂಡ, ಎಸ್‌ಸಿ/ಎಸ್‌ಟಿ ವ್ಯಕ್ತಿ ಆ ಜಾತಿಯ ಸದಸ್ಯನಾಗಿಯೇ ಮುಂದುವರಿಯುತ್ತಾನೆ ಎಂದು ಗೃಹ ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.

Bar & Bench

ಪಾಡ್ರಿ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಅನ್ಯ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿದ್ದಕ್ಕಾಗಿ ಆಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರ ನಿರಾಕರಿಸಿದ್ದ ತಮ್ಮ ನಿರ್ಧಾರ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ [ಶಿವೇತಾ ರಾಣಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]

ಪರಿಶಿಷ್ಟ ಜಾತಿ (ಎಸ್‌ಸಿ) ಅಥವಾ ಎಸ್‌ಟಿ ವ್ಯಕ್ತಿ ಜಾತಿಯಚೆಗೆ ವಿವಾಹವಾದರೂ ಸಹ ಆ ಜಾತಿಯ ಸದಸ್ಯರಾಗಿ ಮುಂದುವರಿಯುತ್ತಾರೆ ಎಂದು ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ವಾಸಿಂ ಸಾದಿಕ್ ನರ್ಗಲ್ ಈ ಆದೇಶ ಹೊರಡಿಸಿದರು.

ಈ ಸ್ಪಷ್ಟೀಕರಣದ ಹಿನ್ನೆಲೆಯಲ್ಲಿ ಪರಿಹಾರ ನೀಡುವುದು ಪ್ರತಿಕೂಲವಾಗದು ಎಂದು ಈ ಮೊದಲು ಜಾತಿ ಪ್ರಮಾಣಪತ್ರ ನಿರಾಕರಿಸಿದ್ದ ಅಧಿಕಾರಿಗಳ ಪರ ವಾದ ಮಂಡಿಸಿದ ವಕೀಲರು ಎಂದು ತಿಳಿಸಿದರು.

ಅರ್ಜಿದಾರರಿಗೆ ಎಸ್‌ಟಿ ಪ್ರಮಾಣಪತ್ರಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ನೀಡುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಬಹುದು ಎಂದು ಸರ್ಕಾರದ ಪರ ವಕೀಲೆ, ಹಿರಿಯ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಮೋನಿಕಾ ಕೊಹ್ಲಿ ತಿಳಿಸಿದರು.

ಆದರೆ ನಾಗರಿಕ ಸೇವಾ ಪರೀಕ್ಷೆ ಬರೆಯಲು ಮಹಿಳೆ ಅರ್ಜಿ ಸಲ್ಲಿಸಲಿರುವುದರಿಂದ ಹೆಚ್ಚು ಸಮಯ ಇಲ್ಲ ಎಂದು ಆಕೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆಗ ಪೀಠ,  ಅರ್ಜಿದಾರರು ಪ್ರಮಾಣಪತ್ರಕ್ಕಾಗಿ ಮತ್ತೆ ಅರ್ಜಿ ಸಲ್ಲಿಸುವಂತೆ ಮಾಡದೆ, ತನ್ನ ಹಿಂದಿನ ನಿರ್ಧಾರ ಮರುಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿತು.

ಅರ್ಜಿದಾರರು ಸಕಾಲದಲ್ಲಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವಂತೆ ಫೆಬ್ರವರಿ 11 ರೊಳಗೆ ತನ್ನ ನಿರ್ಧಾರವನ್ನು ತಿಳಿಸುವಂತೆ ಅಧಿಕಾರಿಗಳಿಗೆ ಅದು ಸೂಚಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Shiveta_Rani_Vs_UoI.pdf
Preview