Electric Tower 
ಸುದ್ದಿಗಳು

ವಿದ್ಯುದಾಘಾತಕ್ಕೊಳಗಾದ ಯುವಕನಿಗೆ ₹20 ಲಕ್ಷ ಪರಿಹಾರ ನೀಡುವಂತೆ ಕಾಶ್ಮೀರ ಹೈಕೋರ್ಟ್ ಆದೇಶ

ವಿದ್ಯುದಾಘಾತದಿಂದಾಗಿ ಶೇ 78 ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿರುವ ಆತನಿಗೆ, ಇಂದಿಗೂ ಪರಿಹಾರ ದೊರೆತಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

Bar & Bench

ಸುಮಾರು ಎರಡು ದಶಕಗಳ ಹಿಂದೆ ಅಂದರೆ 2007ರಲ್ಲಿ ವಿದ್ಯುದಾಘಾತಕ್ಕೊಳಗಾಗಿ ಶೇ 78 ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿದ್ದ ಯುವಕನೊಬ್ಬನಿಗೆ ₹ 20 ಲಕ್ಷ ಪಾವತಿಸುವಂತೆ ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್ ಈಚೆಗೆ ಆದೇಶಿಸಿದೆ [ ಅಬ್ರಾರ್ ಅಹ್ಮದ್ ತಂತ್ರಾಯ್  ಮತ್ತು ಕಾಶ್ಮೀರ ಸರ್ಕಾರ ನಡುವಣ ಪ್ರಕರಣ].

ಯುವಕನಿಗೆ ಯಾವುದೇ ಪರಿಹಾರ ನೀಡಿಲ್ಲ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ವಿನೋದ್ ಚಟರ್ಜಿ ಕೌಲ್ ಜುಲೈ 22 ರಂದು ಈ ತೀರ್ಪು ನೀಡಿದ್ದಾರೆ.

ಪರಿಹಾರ ಕುರಿತು ಜಮ್ಮು ಮತ್ತು ಕಾಶ್ಮೀರ ವಿದ್ಯುತ್ ಇಲಾಖೆ ಎತ್ತಿದ ಆಕ್ಷೇಪಗಳನ್ನು ನ್ಯಾಯಾಲಯ ಇದೇ ವೇಳೆ ತಿರಸ್ಕರಿಸಿತು.

ಮಾರ್ಚ್ 9, 2007ರಂದು ಎಂಟು ವರ್ಷ ವಯಸ್ಸಿನವನಿದ್ದಾಗ ವಿದ್ಯುತ್‌ ಆಘಾತದಿಂದಾಗಿ ಶೇ 78 ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿರುವುದರಲ್ಲಿ ಯಾವುದೇ ವಿವಾದವಿಲ್ಲ… ಪ್ರತಿವಾದಿ ಹೇಳಿರುವಂತೆ ಅರ್ಜಿದಾರ ಪರಿಹಾರಕ್ಕೆ ಅರ್ಹನಲ್ಲ ಎನ್ನಲಾಗದು ಎಂದು ನ್ಯಾಯಾಲಯ ತಿಳಿಸಿತು.

2018ರಲ್ಲಿ 21 ವರ್ಷದ ಅಬ್ರಾರ್ ಅಹ್ಮದ್ ತಂತ್ರಾಯ್ ಅರ್ಜಿ ಸಲ್ಲಿಸಿದ್ದರು. ಆಟವಾಡುತ್ತಿದ್ದ ವೇಳೆ ವಿದ್ಯುತ್‌ ತಂತಿ ತಗುಲಿ ಆಘಾತಕ್ಕೆ ತುತ್ತಾಗಿದ್ದೆ. ಹೀಗಾಗಿ ತನಗೆ ಸರ್ಕಾರಿ ಉದ್ಯೋಗ ನೀಡುವಂತೆ ನಿರ್ದೇಶಿಸಬೇಕೆಂದು ಅವರು ಕೋರಿದ್ದರು.

ವಿದ್ಯುತ್‌ ಆಘಾತವಾಗಿರುವುದನ್ನು  ಅಧಿಕಾರಿಗಳು ಒಪ್ಪಿಕೊಂಡಿದ್ದರಾದರೂ ಘಟನೆ ನಡೆದು ಒಂಬತ್ತು ವರ್ಷಗಳ ಬಳಿಕ ಪರಿಹಾರ ಕೋರಲಾಗಿದೆ ಎಂಬ ಕಾರಣಕ್ಕೆ ಆತನ ಅರ್ಜಿ ತಿರಸ್ಕರಿಸಿದ್ದರು.

ಮಾನವೀಯ ಆಧಾರದಲ್ಲಿಯಾದರೂ ಪರಿಹಾರ ನೀಡುವಂತೆ ಇಂಧನ ಇಲಾಖೆಯ ಅಭಿವೃದ್ಧಿ ಆಯುಕ್ತರಿಗೆ ಮನವಿ ಮಾಡಲಾಗಿತ್ತಾದರೂ ಪರಿಹಾರ ದೊರೆತಿಲ್ಲ ಎಂಬುದನ್ನು ತಿಳಿದ ನ್ಯಾಯಾಲಯ ಅರ್ಜಿ ಸಲ್ಲಿಸಿದ ದಿನದಿಂದ (2018) ಪರಿಹಾರ ಪಾವತಿಸುವವರೆಗೆ ವಾರ್ಷಿಕ ಶೇ 6ರಷ್ಟು ಬಡ್ಡಿಯಂತೆ ₹20 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.