High Court of Jammu & Kashmir and Ladakh, Jammu Wing 
ಸುದ್ದಿಗಳು

ಸರ್ಕಾರಿ ಬಂಗಲೆ ತೊರೆಯದ ಮಾಜಿ ಸಚಿವರು, ಶಾಸಕರು: ರಾಜ್ಯ ಸರ್ಕಾರಕ್ಕೆ ಕಾಶ್ಮೀರ ಹೈಕೋರ್ಟ್ ತರಾಟೆ

ಜಮ್ಮು ಕಾಶ್ಮೀರದ ಮಾಜಿ ಸಚಿವರು ಹಾಗೂ ಶಾಸಕರು ಸರ್ಕಾರಿ ಬಂಗಲೆಗಳನ್ನು ಅನಧಿಕೃತವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ಯಾವುದೇ ಹುದ್ದೆಯಲ್ಲಿ ಇಲ್ಲದಿದ್ದರೂ ಮಾಜಿ ಸಚಿವರು ಸೇರಿದಂತೆ ವಿವಿಧ ರಾಜಕೀಯ ವ್ಯಕ್ತಿಗಳು ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿರುವುದೇಕೆ? ಅಲ್ಲದೆ ಅವರು ವಾಸವಿರುವ ಅವಧಿಗೆ ವಾಣಿಜ್ಯ ಬಾಡಿಗೆ ದರ ಏಕೆ ವಿಧಿಸುತ್ತಿಲ್ಲ ಎಂಬ ಬಗ್ಗೆ ರಾಜ್ಯ ಸರ್ಕಾರ ವಿವರಣೆ ನೀಡಬೇಕು ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಈಚೆಗೆ ತಾಕೀತು ಮಾಡಿದೆ [ಪ್ರೊ. ಎಸ್‌ ಕೆ ಭಲ್ಲಾ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಇನ್ನಿತರರ ನಡುವಣ ಪ್ರಕರಣ].

ಕಾನೂನುಬದ್ಧ ಅರ್ಹತೆ ಕಳೆದುಕೊಂಡ ನಂತರವೂ ಅನಧಿಕೃತವಾಗಿ ವಾಸಿಸುತ್ತಿರುವವರಿಗೆ ವಸತಿ ತೆರವುಗೊಳಿಸುವಂತೆ (ಆದೇಶ ನೀಡದೆ) ಕೇವಲ ಮನವಿ ಮಾಡಿರುವುದು ವಿಚಿತ್ರವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ತಾಶಿ ರಬ್ಸ್ತಾನ್ ಮತ್ತು ನ್ಯಾಯಮೂರ್ತಿ ಎಂ ಎ ಚೌಧರಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

"ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ನಂತರವೂ ಕಾನೂನು ಅಧಿಕಾರವಿಲ್ಲದೆ ಅನಧಿಕೃತವಾಗಿ ವಾಸಿಸುತ್ತಿರುವವರನ್ನು ಅವರಿರುವ ಬಂಗಲೆಗಳಿಂದ ಹೊರಹಾಕಲು ಏಕೆ ಆದೇಶಿಸಿಲ್ಲ ಎಂದು ಸ್ಥಿರಾಸ್ತಿ ಇಲಾಖೆ ಸ್ಪಷ್ಟವಾಗಿ ತಿಳಿಸಿಲ್ಲ”ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಜಮ್ಮು ಕಾಶ್ಮೀರದ ಮಾಜಿಸ ಸಚಿವರು ಹಾಗೂ ಶಾಸಕರು ಸರ್ಕಾರಿ ಬಂಗಲೆಗಳನ್ನು ಅನಧಿಕೃತವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ  (ಪಿಐಎಲ್‌) ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಒಟ್ಟು  33 ಮಂದಿ ಸರ್ಕಾರಿ ಬಂಗಲೆಗಳನ್ನು ಆಕ್ರಮಿಸಿಕೊಂಡಿರುವುದು ಕಂಡು ಬಂದಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ್ದು ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇಬ್ಬರನ್ನು ಹೊರತುಪಡಿಸಿ ಉಳಿದಷ್ಟೂ ಮಂದಿಗೆ ಬಂಗಲೆ ಇಲ್ಲವೇ ಮನೆಗಳನ್ನು ತೆರವುಗೊಳಿಸುವಂತೆ ಕೇಳಲಾಗಿತ್ತು ಎಂದಿತ್ತು.

ಇದೇ ವೇಳೆ ನಾಲ್ವರು ಈಗಾಗಲೇ ವಸತಿ ತೆರವುಗೊಳಿಸಿದ್ದು ಇತರರಿಗೆ ವಿನಂತಿ ಮಾಡಲಾಗಿದೆ ಎಂಬ ಸರ್ಕಾರಿ ವಕೀಲರ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ಬದಲಿಗೆ ವಿವಿಧ ಪ್ರಶ್ನೆಗಳನ್ನು ಕೇಳಿರುವ ಅದು ಸ್ಥಿರಾಸ್ತಿ ಇಲಾಖೆಯ ಕಮಿಷನರ್/ಕಾರ್ಯದರ್ಶಿಗಳು ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 12ರಂದು ನಡೆಯಲಿದೆ.