ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಜಿತೇಂದ್ರ ನಾರಾಯಣ್ ತ್ಯಾಗಿ (ಹಿಂದಿನ ಹೆಸರು ಸೈಯದ್ ವಸೀಮ್ ರಿಜ್ವಿ) ವಿರುದ್ಧ ಬಾಕಿ ಉಳಿದಿದ್ದ ಕ್ರಿಮಿನಲ್ ವಿಚಾರಣೆಗೆ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ತಡೆ ನೀಡಿದೆ [ಜಿತೇಂದ್ರ ನಾರಾಯಣ್ ತ್ಯಾಗಿ ಅಲಿಯಾಸ್ ಸಯ್ಯದ್ ವಜೀಮ್ ರಿಜ್ವಿ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ತ್ಯಾಗಿ ಅವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರು ಮಧ್ಯಂತರ ಆದೇಶ ಪ್ರಕಟಿಸಿದರು.
ತ್ಯಾಗಿ ವಿರುದ್ಧದ ಪ್ರಕರಣವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸುವ ಮೊದಲು ಪೂರ್ವಾನುಮತಿ ಪಡೆದಿರಲಿಲ್ಲ ಎಂದು ನ್ಯಾಯಮೂರ್ತಿ ಭಾರ್ತಿ ಹೇಳಿದರು. ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅಪರಾಧ ಪ್ರಕ್ರಿಯಾ ಸಂಹಿತೆಯ (ಪ್ರಸ್ತುತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ) ಸೆಕ್ಷನ್ 196ರ ಅಡಿಯಲ್ಲಿ ಅಗತ್ಯವಿರುವಂತೆ ಕಾಶ್ಮೀರದಲ್ಲಿ ಪೂರ್ವಭಾವಿಯಾಗಿ ಸರ್ಕಾರಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂಬ ತ್ಯಾಗಿ ಅವರ ವಾದದಲ್ಲಿ ಮೇಲ್ನೋಟಕ್ಕೆ ಹುರುಳಿದೆ ಎಂದು ಹೈಕೋರ್ಟ್ ಹೇಳಿತು.
ಅಂತೆಯೇ ತ್ಯಾಗಿ ವಿರುದ್ಧದ ವಿಚಾರಣೆಗೆ ಅದು ತಡೆ ನೀಡಿತು. ಪ್ರಕರಣ ರದ್ದುಗೊಳಿಸುವಂತೆ ಅವರು ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಜುಲೈ 7 ರಂದು ನಡೆಯಲಿದೆ.
ತ್ಯಾಗಿ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದ ಡ್ಯಾನಿಶ್ ಹಸನ್ ದರ್ ಅವರಿಂದಲೂ ನ್ಯಾಯಾಲಯ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೇಳಿದೆ.
ತ್ಯಾಗಿ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ, ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡುವ ಸರಣಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದರ್ ಆರೋಪಿಸಿದ್ದರು. ತ್ಯಾಗಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ದರ್ ಅವರು ನಂತರ ಸಿಜೆಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಇದೀಗ ಹೈಕೋರ್ಟ್ ತಡೆ ನೀಡಿದೆ.
ತ್ಯಾಗಿ ಪರ ವಕೀಲರು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ, ದರ್ ಅವರ ಖಾಸಗಿ ದೂರು ಪೊಲೀಸ್ ತನಿಖೆಗೆ ಪ್ರೇರೇಪಿಸುವ ಉದ್ದೇಶವನ್ನು ಹೊಂದಿದ್ದು ವಿಚಾರಣಾ ನ್ಯಾಯಾಲಯ ತಕ್ಷಣವೇ ವಿಚಾರಣೆಗೆ (ನ್ಯಾಯಾಂಗ ಸೂಚನೆ) ತೆಗೆದುಕೊಳ್ಳುವಂತೆ ಮಾಡಬಾರದಿತ್ತು ಎಂದು ವಾದಿಸಿದ್ದರು. ವಾದದಲ್ಲಿ ಮೇಲ್ನೋಟಕ್ಕೆ ಹುರುಳಿದೆ ಎಂದ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ತಡೆ ನೀಡಿತು.