Jantar Mantar event, Preet Singh
Jantar Mantar event, Preet Singh  
ಸುದ್ದಿಗಳು

[ಜಂತರ್ ಮಂತರ್‌ ಪ್ರಕರಣ] ಹಿಂದೂ ದೇಶದ ಬೇಡಿಕೆ ಐಪಿಸಿ ಸೆಕ್ಷನ್ 153ಎ ವ್ಯಾಪ್ತಿಯಡಿ ಬಾರದು: ಆರೋಪಿ ಪರ ವಕೀಲರ ವಾದ

Bar & Bench

ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್ ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾಗಿದ್ದ ಆರೋಪಿ ಪ್ರೀತ್ ಸಿಂಗ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ದೆಹಲಿ ಹೈಕೋರ್ಟ್ ಬುಧವಾರ ಕಾಯ್ದಿರಿಸಿತು. (ಪ್ರೀತ್ ಸಿಂಗ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ).

ಪ್ರೀತ್ ಸಿಂಗ್ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ಮತ್ತು ರಾಜ್ಯ ಸರ್ಕಾರದ ಪರವಾಗಿ ವಕೀಲ ತರಂಗ್ ಶ್ರೀವಾಸ್ತವ ಅವರ ವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಆದೇಶಗಳನ್ನು ಕಾಯ್ದಿರಿಸಿದರು.

ಹಿಂದೂ ರಾಷ್ಟ್ರದ ಪರವಾಗಿ ಸಿಂಗ್‌ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರೂ ಅದು ಹೇಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ವ್ಯಾಪ್ತಿಗೆ ಬರುವುದಿಲ್ಲ ಎಂಬುದರ ಮೇಲೆ ಜೈನ್‌ ಅವರ ವಾದ ಗಣನೀಯವಾಗಿ ಕೇಂದ್ರೀಕೃತವಾಗಿತ್ತು.

ರಾಜ್ಯ ಸರ್ಕಾರದ ಪ್ರಕಾರ ಇದು ಪ್ರಚೋದನಕಾರಿ ಹೇಳಿಕೆಯಾದರೂ ಹಿಂದೂ ರಾಷ್ಟ್ರದ ಬೇಡಿಕೆ ಸೆಕ್ಷನ್‌ 153 ಎ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಪ್ರತಿಪಾದಿಸಿದರು. “ಹಿಂದೂ ರಾಷ್ಟ್ರದ ಬೇಡಿಕೆಯು ಸೆಕ್ಷನ್ 153 ಎ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯ ಭಾವಿಸಿದರೆ, ಜಾಮೀನಿಗೆ ಒತ್ತಾಯಿಸುವುದಿಲ್ಲ!”ಎಂದು ಕೂಡ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಈ ಹಂತದಲ್ಲಿ ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾಲಯ “ನೀವು ಭಾಷಣ ಮಾಡುವ ವೇದಿಕೆ ಮೇಲೆ ಇಲ್ಲ. ನೀವು ಇದೇ ವಿಚಾರವನ್ನು ಪದೇ ಪದೇ ಹೇಳುವಂತಿಲ್ಲ. ದಯವಿಟ್ಟು ವಕೀಲರಂತೆ ಮಾತನಾಡಿ” ಎಂದಿತು.

ವಕೀಲ ಜೈನ್‌ ಮುಂದುವರೆದು, ಸಾಮ್ನಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ಬಾಂಬೆ ಹೈಕೋರ್ಟ್‌ ಸೆಕ್ಷನ್ 153 ಎ ವ್ಯಾಪ್ತಿಯಡಿ ತಂದಿರಲಿಲ್ಲ ಎಂದು ತಿಳಿಸಿದರು. ಸೆಕ್ಷನ್ 153 ಎ ಹೊರತುಪಡಿಸಿ, ಸಿಂಗ್ ವಿರುದ್ಧದ ಆರೋಪಗಳೆಲ್ಲವೂ ಜಾಮೀನು ಪಡೆಯಬಹುದಾದ ಆರೋಪಗಳಾಗಿವೆ ಎಂದು ಅವರು ಹೇಳಿದರು. ಸಿಂಗ್‌ ಯಾವುದೇ ಪ್ರಚೋದನಕಾರಿ ಭಾಷಣ ಮಾಡುವುದರಲ್ಲಿ ಅಥವಾ ವ್ಯಕ್ತಿ ಇಲ್ಲವೇ ಸಮುದಾಯದ ವಿರುದ್ಧ ಯಾವುದೇ ಘೋಷಣೆ ಕೂಗುವುದರಲ್ಲಿ ಭಾಗಿಯಾಗಿರಲಿಲ್ಲ ಎಂದರು.

ಇದೇ ವೇಳೆ ವಕೀಲ ಶ್ರೀವಾಸ್ತವ ಅವರು ವಾದ ಮಂಡಿಸಿ ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಕೆಟ್ಟದ್ದನ್ನು ಬಯಸುವ ಸಾಮಾನ್ಯ ಉದ್ದೇಶ ಸಿಂಗ್‌ ಮತ್ತು ಸಹ ಆರೋಪಿಗಳಿಗೆ ಇತ್ತು ಎಂದರು. ಅವರು ನೀಡಿದ ಸಂದರ್ಶನ ಮತ್ತು ಸಹ ಆರೋಪಿಯೊಬ್ಬ ಅಪ್‌ಲೋಡ್‌ ಮಾಡಿದ ಫೇಸ್‌ ಬುಕ್‌ ನೇರಪ್ರಸಾರ ಕಾರ್ಯಕ್ರಮದ ದಾಖಲೆಗಳಿಂದ ಇದು ಸ್ಪಷ್ಟವಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಪಿಂಕಿ ಚೌಧರಿ ಆನ್‌ಲೈನ್‌ ಸಂದರ್ಶನ ನೀಡಿದಾಗಲೂ ಸಿಂಗ್‌ ಹಾಜರಿದ್ದರು. ಈ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಲಾಗಿತ್ತು ಎಂದು ತಿಳಿಸಿದರು.

ಸಿಂಗ್ ಅವರ ಜಾಮೀನು ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಆಂಟಿಲ್ ಅವರು ಆಗಸ್ಟ್ 27ರಂದು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದರು. ಆಗಸ್ಟ್ 8 ರಂದು ದೆಹಲಿಯಲ್ಲಿ ನಡೆದ ಭಾರತ್ ಜೊಡೊ ಚಳುವಳಿ ವೇಳೆ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪ ಪ್ರೀತ್ ಸಿಂಗ್ ಅವರ ಮೇಲಿದೆ. ಈ ಸಂಬಂಧ ಈ ತಿಂಗಳ ಆರಂಭದಲ್ಲಿ ನೋಟಿಸ್‌ ನೀಡಿತ್ತು.