AG Prabhuling Navadagi, Senior Lawyer C V Nagesh and Karnataka HC 
ಸುದ್ದಿಗಳು

[ಜಾರಕಿಹೊಳಿ ಪ್ರಕರಣ] ವರದಿ ಒಪ್ಪುವುದು, ಮರು ತನಿಖೆಗೆ ಆದೇಶಿಸುವುದು ವಿಚಾರಣಾಧೀನ ನ್ಯಾಯಾಲಯಕ್ಕೆ ಬಿಟ್ಟ ವಿಚಾರ: ಎಜಿ

ಅಭಿನಂದನ್‌ ಝಾ ಪ್ರಕರಣದಲ್ಲಿ ಸುಪ್ರೀಂ ಕಾನೂನನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ. ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಎಸ್‌ಐಟಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದ ಸರ್ಕಾರ.

Siddesh M S

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸಿ ಡಿ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಪ್ರತಿನಿಧಿಸಿರುವ ಪ್ರಖ್ಯಾತ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ಅಂತಿಮ ವರದಿ ಸಲ್ಲಿಸುವುದಕ್ಕೆ ನಿರ್ಬಂಧ ವಿಧಿಸಿರುವುದು ಸೇರಿದಂತೆ ಮಧ್ಯಂತರ ಆದೇಶಗಳನ್ನು ಮುಂದುವರಿಸಲು ಆದೇಶಿಸಿದ್ದು, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್‌ 14ಕ್ಕೆ ಕರ್ನಾಟಕ ಹೈಕೋರ್ಟ್‌ ಮುಂದೂಡಿದೆ.

ಜಾರಕಿಹೊಳಿ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಬದಲಿಗೆ ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ತನಿಖೆ ವರ್ಗಾಯಿಸುವಂತೆ ಕೋರಿ ಗೀತಾ ಮಿಶ್ರಾ ಎಂಬವರು ವಕೀಲ ಜಿ ಆರ್‌ ಮೋಹನ್‌ ಮೂಲಕ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದಾರೆ. ಎಸ್‌ಐಟಿ ವಜಾ ಮಾಡಿ, ಮರು ತನಿಖೆಗೆ ಆದೇಶಿಸುವಂತೆ ಕೋರಿ ಸಂತ್ರಸ್ತೆಯು ಮತ್ತೊಂದು ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಇಂದಿರಾ ಜೈಸಿಂಗ್‌ ಪ್ರತಿನಿಧಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿ ಆರೋಪಿ ರಮೇಶ ಜಾರಕಿಹೊಳಿ ದಾಖಲಿಸಿರುವ ದೂರನ್ನು ವಜಾ ಮಾಡುವಂತೆ ಸಂತ್ರಸ್ತೆಯು ವಕೀಲ ಸಂಕೇತ್‌ ಏಣಗಿ ಅವರ ಮೂಲಕ ಸಲ್ಲಿಸಿರುವ ಪ್ರತ್ಯೇಕವಾದ ಮೂರೂ ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಸುಪ್ರೀಂ ಕೋರ್ಟ್‌ ಅಭಿನಂದನ್‌ ಝಾ ವರ್ಸಸ್‌ ಇತರರು ಮತ್ತು ದಿನೇಶ್‌ ಮಿಶ್ರಾ ಪ್ರಕರಣದಲ್ಲಿ ಕಾನೂನನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದು, ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಎಸ್‌ಐಟಿಗೆ ಅವಕಾಶ ಮಾಡಿಕೊಡಬೇಕು. ಆ ಮೂಲಕ ಕಾನೂನು ತನ್ನ ಕೆಲಸ ಮಾಡಲು ಅನುವು ಮಾಡಬೇಕು” ಎಂದು ಮನವಿ ಮಾಡಿದರು.

“ಅಭಿನಂದನ್‌ ಝಾ ಪ್ರಕರಣದಲ್ಲಿ ಹೇಳಿರುವಂತೆ ವಿಚಾರಣಾಧೀನ ನ್ಯಾಯಾಲಯದ ಮುಂದೆ ಎಸ್‌ಐಟಿ ಅಂತಿಮ ವರದಿ ಸಲ್ಲಿಸಿದಾಗ ವಿಚಾರಣಾಧೀನ ನ್ಯಾಯಾಲಯಕ್ಕೆ ಮೂರು ಅವಕಾಶಗಳಿರುತ್ತವೆ. ತನಿಖಾ ಸಂಸ್ಥೆ ಸಲ್ಲಿಸಿದ ವರದಿಯನ್ನು ಯಥಾಸ್ಥಿತಿಯಲ್ಲಿ ಒಪ್ಪಿಕೊಳ್ಳುವುದು. ವರದಿಯಲ್ಲಿ ಸಮಸ್ಯೆ ಕಾಣಿಸಿದರೆ ಮರು ತನಿಖೆ ಅಥವಾ ಹೆಚ್ಚಿನ ತನಿಖೆಗೆ ಆದೇಶಿಸಬಹುದು. ಇಲ್ಲವೇ ನೇರವಾಗಿ ವರದಿಯನ್ನು ನ್ಯಾಯಾಲಯವು ಪರಿಗಣಿಸಬಹುದಾಗಿದೆ” ಎಂದರು.

“ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮೂರು ಮನವಿಗಳಲ್ಲೂ ಎಫ್‌ಐಆರ್‌ ದಾಖಲಿಸಿರುವುದನ್ನು ಪ್ರಶ್ನಿಸಲಾಗಿದೆ. ತನಿಖೆಗೆ ಸಂಬಂಧಿಸಿದಂತೆ ಅಹವಾಲು ಎತ್ತಿರುವುದು ಕಾಣುತ್ತದೆ. ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ರಚಿಸಲಾಗಿದ್ದು, ಅದರ ಮುಖ್ಯಸ್ಥರಾಗಿದ್ದ ಸೌಮೇಂದು ಮುಖರ್ಜಿ ಅವರು ದೀರ್ಘ ರಜೆ ಮೇಲೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರು ವಿಚಾರಣೆಯ ಜವಾಬ್ದಾರಿಯನ್ನು ಜಂಟಿ ಪೊಲೀಸ್‌ ಆಯುಕ್ತರಾದ ಸಂದೀಪ್‌ ಪಾಟೀಲ್‌ ಅವರಿಗೆ ವಹಿಸಿದ್ದರು. ಈಗ ಪ್ರಕರಣದ ವಿಚಾರಣೆ ಮುಕ್ತಾಯವಾಗಿದೆ” ಎಂದು ಪುನರುಚ್ಚರಿಸಿದರು.

“ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ, ಕಬ್ಬನ್‌ ಪಾರ್ಕ್‌ ಮತ್ತು ಆರ್‌. ಟಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯನ್ನು ಬೆಂಗಳೂರು ಪೊಲೀಸ್‌ ಆಯುಕ್ತರು ನೇಮಿಸಿದ್ದರು. ತನಿಖಾಧಿಕಾರಿಗಳು ಪ್ರಕರಣದ ತನಿಖೆ ನಡೆಸಿದ್ದು, ಹೈಕೋರ್ಟ್‌ ಪ್ರಕರಣದ ಮೇಲೆ ನಿಗಾ ಇಟ್ಟಿರುವುದರಿಂದ ತನಿಖಾ ವರದಿಯನ್ನು ಪೊಲೀಸರು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಮೇಲಿಂದ ಮೇಲೆ ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ತನಿಖೆಯ ಮಾಹಿತಿಯನ್ನು ಸಲ್ಲಿಸಲಾಗಿದೆ. ಇದನ್ನು ನ್ಯಾಯಾಲಯವು ಪರಿಶೀಲಿಸಿದೆ. ಅಂತಿಮ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ” ಎಂದು ಹೇಳಿದರು.

“ಎಸ್‌ಐಟಿ ರಚಿಸಿದ ನಂತರ ಇಡೀ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಸಂತ್ರಸ್ತೆಯು ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಎಸ್‌ಐಟಿ ತನಿಖೆಯನ್ನು ಪ್ರಶ್ನಿಸಿ ಮನವಿ ಸಲ್ಲಿಸಿದ್ದಾರೆ. ಎಸ್‌ಐಟಿಯ ತನಿಖೆಯ ಸಾರಾಂಶ ನಮಗೇ ತಿಳಿದಿಲ್ಲ. ಇಡೀ ತನಿಖೆಯ ಮೇಲೆ ಹೈಕೋರ್ಟ್‌ ನಿಗಾ ಇಟ್ಟಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿನಂದನ್‌ ಝಾ ಪ್ರಕರಣದಲ್ಲಿ ಸ್ಪಷ್ಟವಾಗಿ ಕಾನೂನು ರೂಪಿಸಲಾಗಿದೆ” ಎಂದು ಹೇಳಿದರು. ಈ ಸಂಬಂಧ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಇಂದಿರಾ ಜೈಸಿಂಗ್‌ ತಕರಾರು ಎತ್ತಿದ್ದರು. ಆಗ ಪೀಠವು ಮಾಧ್ಯಮ ವರದಿಯನ್ನು ಒಳಗೊಂಡ ಅಫಿಡವಿಟ್‌ ಸಲ್ಲಿಸುವಂತೆ ಆದೇಶಿಸಿತ್ತು.

ಈ ಹಂತದಲ್ಲಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಪರವಾಗಿ ಅವರ ಸಹಾಯಕರು “ಜೈಸಿಂಗ್‌ ತೀವ್ರ ಜ್ವರದಿಂದ ಬಳಲುತ್ತಿರುವುದರಿಂದ ಪ್ರಕರಣವನ್ನು ಒಂದು ವಾರ ಮುಂದೂಡಬೇಕು” ಎಂದು ನ್ಯಾಯಾಲಯಕ್ಕೆ ವಿನಂತಿಸಿದರು.

ಆಗ ಪೀಠವು “ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆ ಯಾರಾದರೂ ಏನನ್ನಾದರೂ ಹೇಳುವುದು ಇದೆಯಾ” ಎಂದು ಪ್ರಶ್ನಿಸಿತು. ಈ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಪಿಐಎಲ್‌ ದಾಖಲಿಸಿರುವ ಅರ್ಜಿದಾರೆ ಗೀತಾ ಮಿಶ್ರಾ ಪ್ರಕರಣದಲ್ಲಿ ದೂರುದಾರರೂ ಅಲ್ಲ, ಆರೋಪಿಯೂ ಅಲ್ಲ. ಪ್ರಾಸಿಕ್ಯೂಷನ್‌ ಸಾಕ್ಷಿಯೂ ಅಲ್ಲ. ಇಡೀ ಪ್ರಕರಣದಲ್ಲಿ ಅವರು ಏನೂ ಅಲ್ಲ. ನ್ಯಾಯಾಲಯದ ಮಧ್ಯಂತರ ಆದೇಶವನ್ನು ಬಳಸಿಕೊಂಡು ಎಸ್‌ಐಟಿ ವರದಿ ಸಲ್ಲಿಸದಂತೆ ತಡೆಯುತ್ತಿದ್ದಾರೆ. ಹೀಗಾಗಿ, ಅವರ ಪಿಐಎಲ್‌ ನಿರ್ವಹಣೆಗೆ ಅರ್ಹವಾಗಿಲ್ಲ” ಎಂದು ಪುನರುಚ್ಚರಿಸಿ “ಶೀಘ್ರದಲ್ಲೇ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಬೇಕು” ಎಂದು ಮನವಿ ಮಾಡಿದರು.

ಕಳೆದ ವಿಚಾರಣೆಯ ಸಂದರ್ಭದಲ್ಲಿ ಪೀಠವು “ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಪಸ್ಥಿತಿಯಲ್ಲಿ ಯಾವುದೇ ಅಧಿಕಾರಿಗೆ ಎಸ್‌ಐಟಿ ಜವಾಬ್ದಾರಿ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿಲ್ಲ. ಜೂನ್‌ 16ರಂದು ಸೌಮೇಂದು ಮುಖರ್ಜಿ ವೈಯಕ್ತಿಕವಾಗಿ ತನಿಖೆಯ ಮೇಲೆ ನಿಗಾ ಇಡಲಾಗುತ್ತಿಲ್ಲ. ಹೀಗಾಗಿ, ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರಿಗೆ ಅನುಮತಿಸಿರುವುದಾಗಿ ಹೇಳಿದ್ದಾರೆ. ಎಸ್‌ಐಟಿ ಮುಖ್ಯಸ್ಥರು ತನಿಖೆಯ ಮೇಲ್ವಿಚಾರಣೆ ಮಾಡಿದ್ದಾರೆಯೇ ಎಂಬುದನ್ನು ತಿಳಿಯುವುದಕ್ಕಾಗಿ ಪ್ರಶ್ನೆ ಹಾಕಿದ್ದು, ಎಸ್‌ಐಟಿ ಮುಖಸ್ಥರು ತನಿಖೆಯ ಮೇಲ್ವಿಚಾರಣೆ ನಡೆಸಿಲ್ಲ ಎಂದು ಒಪ್ಪಿಕೊಂಡಿದ್ದಾರೆ” ಎಂದು ಪೀಠ ಆದೇಶದಲ್ಲಿ ದಾಖಲಿಸಿತ್ತು.

“ಎಸ್‌ಐಟಿ ರಚಿಸುವ ಸಂಬಂಧ ಗೃಹ ಸಚಿವರು ಹೊರಡಿಸಿರುವ ಆದೇಶದ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಸಿಂಧುತ್ವ ಸೇರಿದಂತೆ ಹಲವು ವಿಚಾರಗಳನ್ನು ಮನವಿಯಲ್ಲಿ ಎತ್ತಲಾಗಿದೆ. ಈ ಎಲ್ಲಾ ವಿಚಾರಗಳನ್ನು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಾಗುವುದು” ಎಂದು ಪೀಠ ಹೇಳಿತ್ತು.

ಇದಕ್ಕೂ ಮುನ್ನ ಪೀಠವು “ಏಪ್ರಿಲ್‌ 28ರಿಂದ ಜುಲೈ 29ರ ವರೆಗೆ ಸುದೀರ್ಘವಾಗಿ ವೈದ್ಯಕೀಯ ರಜೆಯಲ್ಲಿದ್ದ‌ ಸೌಮೇಂದು ಮುಖರ್ಜಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಎಸ್‌ಐಟಿ ವರದಿಯನ್ನು ಪರಿಶೀಲಿಸಲು ಅಥವಾ ಪರಿಶೀಲಿಸದಿರಲು ನಿರ್ಧರಿಸಿದ್ದಾರೆಯೇ? ಎಂಬುದಕ್ಕೆ ಸ್ಪಷ್ಟ ಉತ್ತರ ಬಯಸುತ್ತಿರುವುದಾಗಿ ಹೇಳಿತ್ತು.

ಆಗ ಎಸ್‌ಐಟಿ ಪರ ವಕೀಲ ಪ್ರಸನ್ನಕುಮಾರ್‌ ಅವರು “ಈ ಸಂಬಂಧ ಸೌಮೇಂದು ಮುಖರ್ಜಿ ಅವರು ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಿದ್ದು, ಅದರಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ” ಎಂದರು. ಈ ನಡುವೆ ನ್ಯಾಯಾಲಯವು ಸೌಮೇಂದು ಮುಖರ್ಜಿ ಅವರ ಹೇಳಿಕೆಯನ್ನು ಆದೇಶದಲ್ಲಿ ದಾಖಲಿಸಿಕೊಳ್ಳಲಾಗುತ್ತಿರುವುದರಿಂದ ಎಸ್‌ಐಟಿ ಮುಖ್ಯಸ್ಥರಾಗಿ ಅವರು ತನಿಖೆಯನ್ನು ಸರಿಯಾಗಿ ನಡೆಸಲಾಗಿದೆಯೇ ಎಂಬುದನ್ನು ಪರಿಶೀಲಿಸಿದ್ದಾರೆಯೇ? ಇಲ್ಲವಾದರೆ ಎಸ್‌ಐಟಿ ಮುಖ್ಯಸ್ಥರಾಗುವ ಔಚಿತ್ಯವೇನು? ಹೀಗಾಗಿ, ಈ ಕುರಿತು ಅವರ ಸ್ಪಷ್ಟ ನಿಲುವನ್ನು ಅವರಿಗೆ ಫೋನ್‌ ಮಾಡಿ ಖಚಿತಪಡಿಸಿಕೊಳ್ಳುವಂತೆ ಎಸ್‌ಐಟಿ ಪರ ವಕೀಲರಿಗೆ ಆದೇಶಿಸಿ, ಹತ್ತು ನಿಮಿಷಗಳ ಕಾಲ ವಿಚಾರಣೆ ಮುಂದೂಡಿತ್ತು.

ವಿಚಾರಣೆ ಪುನಾರಂಭವಾದಾಗ ಎಸ್‌ಐಟಿ ಪರ ವಕೀಲರು “ಹೆಚ್ಚುವರಿ ಆಕ್ಷೇಪಣೆಯಲ್ಲಿ ಉಲ್ಲೇಖಿಸಿರುವ ಹೇಳಿಕೆಗೆ ಸೌಮೇಂದು ಮುಖರ್ಜಿ ಬದ್ಧರಾಗಿದ್ದು, ತಮ್ಮ ಅನುಪಸ್ಥಿತಿಯಲ್ಲಿ ಸಲ್ಲಿಸಿರುವ ಎಸ್‌ಐಟಿ ವರದಿಯನ್ನು ಪರಿಶೀಲಿಸುವ ಇಚ್ಛೆ ಹೊಂದಿಲ್ಲ” ಎಂದರು.

ಆಗ ಪೀಠವು “ಇದು ಗಂಭೀರ ಊಹೆಗಳಿಗೆ ಕಾರಣವಾಗಬಹುದು” ಎಂದಿತು. ಈ ನಡುವೆ ಮಧ್ಯಪ್ರವೇಶಿಸಿದ್ದ ವಕೀಲ ಜಿ ಆರ್‌ ಮೋಹನ್‌ ಅವರು “ಎಸ್‌ಐಟಿ ಮುಖ್ಯಸ್ಥರ ಹೇಳಿಕೆ, ಬಳಸಲಾದ ಭಾಷೆ ಸ್ಪಷ್ಟವಾಗಿದ್ದು, ನ್ಯಾಯಾಲಯವು ಊಹೆಗಳನ್ನು ಮಾಡಹುದಾಗಿದೆ. ಒಂದು ಕಡೆ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ ಎನ್ನುತ್ತಾರೆ. ಮತ್ತೊಂದು ಕಡೆ ಸಂಬಂಧಪಟ್ಟ ತನಿಖಾಧಿಕಾರಿ ತನಿಖೆ ಕೈಗೊಂಡಿದ್ದಾರೆ ಎಂದು ಹೇಳುತ್ತಾರೆ” ಎಂದು ದ್ವಂದ್ವಗಳನ್ನು ಎತ್ತಿ ತೋರುವ ಪ್ರಯತ್ನ ಮಾಡಿದ್ದರು.

ಆಗ ಪೀಠವು “ಇದು ಗಂಭೀರ ಪರಿಣಾಮಕ್ಕೆ ಕಾರಣವಾಗಬಹುದು. ಇದಕ್ಕಾಗಿ ನಾವು ಪದೇಪದೇ ಈ ಪ್ರಶ್ನೆ ಕೇಳುತ್ತಿದ್ದೇವೆ. ಅವರು ತಮ್ಮ ಹೇಳಿಕೆ ಬದ್ಧವಾಗಿರುವುದಾಗಿ ಹೇಳಿದರೆ ಅದನ್ನೇ ಆದೇಶದಲ್ಲಿ ದಾಖಲಿಸಲಾಗುವುದು. ಮತ್ತೊಮ್ಮೆ ಮಾತನಾಡಲು ಬಯಸಿದರೆ ನೀವು ಅವರ ಜೊತೆ ಮಾತನಾಡಬಹುದು” ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಐಟಿ ಪರ ವಕೀಲರು “ಸೌಮೇಂದು ಮುಖರ್ಜಿ ಅವರನ್ನು ಈ ಕುರಿತು ನಾಲ್ಕೈದು ಬಾರಿ ಪ್ರಶ್ನಿಸಿದ್ದೇನೆ. ಆದರೆ, ಅವರು ಹೆಚ್ಚುವರಿ ಆಕ್ಷೇಪಣೆಯಲ್ಲಿ ಉಲ್ಲೇಖಿಸಿರುವುದಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ” ಎಂದಿದ್ದರು.

ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು “ನ್ಯಾಯಾಲಯ ಆದೇಶ ಮಾಡುವವರೆಗೆ ಎಸ್‌ಐಟಿ ಅಂತಿಮ ವರದಿ ಸಲ್ಲಿಸದಂತೆ ಆದೇಶಿಸಬೇಕು” ಎಂದರು. ನ್ಯಾಯಾಲಯದ ಅನುಮತಿಯಿಲ್ಲದೇ ಎಸ್‌ಐಟಿ ವರದಿ ಸಲ್ಲಿಸಲಾಗದು ಎಂದು ಪೀಠ ಹೇಳಿತ್ತು.