ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ ಡಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ತನ್ನ ಸುದೀರ್ಘ ಅನುಪಸ್ಥಿತಿಯಲ್ಲಿ ನಡೆಸಿರುವ ತನಿಖಾ ವರದಿಯನ್ನು ಪರಿಶೀಲಿಸುವುದಿಲ್ಲ ಎಂದು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಸಿ ಡಿ ಹಗರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಮನವಿಗಳನ್ನು ಒಟ್ಟಿಗೆ ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಂಜಯ್ ಗೌಡ ನೇತೃತ್ವದ ವಿಭಾಗೀಯ ಪೀಠಕ್ಕೆ ಎಸ್‌ಐಟಿ ಪರ ವಕೀಲರು ಸೌಮೇಂದು ಮುಖರ್ಜಿ ಅವರ ನಿಲುವನ್ನು ತಿಳಿಸಿದರು.
“ಸೌಮೇಂದು ಮುಖರ್ಜಿ ಅವರ ಅನುಪಸ್ಥಿತಿಯಲ್ಲಿ ಯಾವುದೇ ಅಧಿಕಾರಿಗೆ ಎಸ್‌ಐಟಿ ಜವಾಬ್ದಾರಿ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿಲ್ಲ. ಜೂನ್ 16ರಂದು ಸೌಮೇಂದು ಮುಖರ್ಜಿ ಅವರು ವೈಯಕ್ತಿಕವಾಗಿ ತನಿಖೆಯ ಮೇಲೆ ನಿಗಾ ಇಡಲಾಗುತ್ತಿಲ್ಲ. ಹೀಗಾಗಿ, ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಅನುಮತಿಸಿರುವುದಾಗಿ ಹೇಳಿದ್ದಾರೆ. ಎಸ್‌ಐಟಿ ಮುಖ್ಯಸ್ಥರು ತನಿಖೆಯ ಮೇಲ್ವಿಚಾರಣೆ ಮಾಡಿದ್ದಾರೆಯೇ ಎಂಬುದನ್ನು ತಿಳಿಯುವುದಕ್ಕಾಗಿ ಪ್ರಶ್ನೆ ಹಾಕಿದ್ದು, ಎಸ್‌ಐಟಿ ಮುಖಸ್ಥರು ತನಿಖೆಯ ಮೇಲ್ವಿಚಾರಣೆ ನಡೆಸಿಲ್ಲ ಎಂದು ಒಪ್ಪಿಕೊಂಡಿದ್ದಾರೆ” ಎಂದು ಪೀಠ ಆದೇಶದಲ್ಲಿ ದಾಖಲಿಸಿದೆ.
“ಎಸ್‌ಐಟಿ ರಚಿಸುವ ಸಂಬಂಧ ಗೃಹ ಸಚಿವರು ಹೊರಡಿಸಿರುವ ಆದೇಶದ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಸಿಂಧುತ್ವ ಸೇರಿದಂತೆ ಹಲವು ವಿಚಾರಗಳನ್ನು ಮನವಿಯಲ್ಲಿ ಎತ್ತಲಾಗಿದೆ. ಈ ಎಲ್ಲಾ ವಿಚಾರಗಳನ್ನು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಾಗುವುದು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ಓಕಾ ಅವರು “ಏಪ್ರಿಲ್ 28ರಿಂದ ಜುಲೈ 29ರ ವರೆಗೆ ಸುದೀರ್ಘವಾಗಿ ವೈದ್ಯಕೀಯ ರಜೆಯಲ್ಲಿದ್ದ ಸೌಮೇಂದು ಮುಖರ್ಜಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಎಸ್‌ಐಟಿ ವರದಿಯನ್ನು ಪರಿಶೀಲಿಸಲು ಅಥವಾ ಪರಿಶೀಲಿಸದಿರಲು ನಿರ್ಧರಿಸಿದ್ದಾರೆಯೇ? ಎಂಬುದಕ್ಕೆ ಸ್ಪಷ್ಟ ಉತ್ತರ ಬಯಸುತ್ತಿರುವುದಾಗಿ ಹೇಳಿದರು.
ಆಗ ಎಸ್‌ಐಟಿ ಪರ ವಕೀಲ ಪ್ರಸನ್ನಕುಮಾರ್ ಅವರು “ಈ ಸಂಬಂಧ ಸೌಮೇಂದು ಮುಖರ್ಜಿ ಅವರು ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಿದ್ದು, ಅದರಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ” ಎಂದರು. ಈ ನಡುವೆ ನ್ಯಾಯಾಲಯವು ಸೌಮೇಂದು ಮುಖರ್ಜಿ ಅವರ ಹೇಳಿಕೆಯನ್ನು ಆದೇಶದಲ್ಲಿ ದಾಖಲಿಸಿಕೊಳ್ಳಲಾಗುತ್ತಿರುವುದರಿಂದ ಎಸ್‌ಐಟಿ ಮುಖ್ಯಸ್ಥರಾಗಿ ಅವರು ತನಿಖೆಯನ್ನು ಸರಿಯಾಗಿ ನಡೆಸಲಾಗಿದೆಯೇ ಎಂಬುದನ್ನು ಪರಿಶೀಲಿಸಿದ್ದಾರೆಯೇ? ಇಲ್ಲವಾದರೆ ಎಸ್‌ಐಟಿ ಮುಖ್ಯಸ್ಥರಾಗುವ ಔಚಿತ್ಯವೇನು? ಹೀಗಾಗಿ, ಈ ಕುರಿತು ಅವರ ಸ್ಪಷ್ಟ ನಿಲುವನ್ನು ಅವರಿಗೆ ಫೋನ್ ಮಾಡಿ ಖಚಿತಪಡಿಸಿಕೊಳ್ಳುವಂತೆ ಎಸ್‌ಐಟಿ ಪರ ವಕೀಲರಿಗೆ ಆದೇಶಿಸಿ, ಹತ್ತು ನಿಮಿಷಗಳ ಕಾಲ ವಿಚಾರಣೆ ಮುಂದೂಡಿತ್ತು.
ವಿಚಾರಣೆ ಪುನಾರಂಭವಾದಾಗ ಎಸ್‌ಐಟಿ ಪರ ವಕೀಲರು “ಹೆಚ್ಚುವರಿ ಆಕ್ಷೇಪಣೆಯಲ್ಲಿ ಉಲ್ಲೇಖಿಸಿರುವ ಹೇಳಿಕೆಗೆ ಸೌಮೇಂದು ಮುಖರ್ಜಿ ಬದ್ಧರಾಗಿದ್ದು, ತಮ್ಮ ಅನುಪಸ್ಥಿತಿಯಲ್ಲಿ ಸಲ್ಲಿಸಿರುವ ಎಸ್‌ಐಟಿ ವರದಿಯನ್ನು ಪರಿಶೀಲಿಸುವ ಇಚ್ಛೆ ಹೊಂದಿಲ್ಲ” ಎಂದರು.
ಆಗ ಮುಖ್ಯ ನ್ಯಾಯಮೂರ್ತಿ ಓಕಾ ಅವರು “ಇದು ಗಂಭೀರ ಊಹೆಗಳಿಗೆ ಕಾರಣವಾಗಬಹುದು” ಎಂದರು. ಈ ನಡುವೆ ಮಧ್ಯಪ್ರವೇಶಿಸಿದ ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ಅವರು “ಎಸ್‌ಐಟಿ ಮುಖ್ಯಸ್ಥರ ಹೇಳಿಕೆ, ಬಳಸಲಾದ ಭಾಷೆ ಸ್ಪಷ್ಟವಾಗಿದ್ದು, ನ್ಯಾಯಾಲಯವು ಊಹೆಗಳನ್ನು ಮಾಡಹುದಾಗಿದೆ. ಒಂದು ಕಡೆ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ ಎನ್ನುತ್ತಾರೆ. ಮತ್ತೊಂದು ಕಡೆ ಸಂಬಂಧಪಟ್ಟ ತನಿಖಾಧಿಕಾರಿ ತನಿಖೆ ಕೈಗೊಂಡಿದ್ದಾರೆ ಎಂದು ಹೇಳುತ್ತಾರೆ” ಎಂದರು.
ಆಗ ಪೀಠವು “ಇದು ಗಂಭೀರ ಪರಿಣಾಮಕ್ಕೆ ಕಾರಣವಾಗಬಹುದು. ಇದಕ್ಕಾಗಿ ನಾವು ಪದೇಪದೇ ಈ ಪ್ರಶ್ನೆ ಕೇಳುತ್ತಿದ್ದೇವೆ. ಅವರು ತಮ್ಮ ಹೇಳಿಕೆ ಬದ್ಧವಾಗಿರುವುದಾಗಿ ಹೇಳಿದರೆ ಅದನ್ನೇ ಆದೇಶದಲ್ಲಿ ದಾಖಲಿಸಲಾಗುವುದು. ಮತ್ತೊಮ್ಮೆ ಮಾತನಾಡಲು ಬಯಸಿದರೆ ನೀವು ಅವರ ಜೊತೆ ಮಾತನಾಡಬಹುದು” ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಐಟಿ ಪರ ವಕೀಲರು “ಸೌಮೇಂದು ಮುಖರ್ಜಿ ಅವರನ್ನು ಈ ಕುರಿತು ನಾಲ್ಕೈದು ಬಾರಿ ಪ್ರಶ್ನಿಸಿದ್ದೇನೆ. ಆದರೆ, ಅವರು ಹೆಚ್ಚುವರಿ ಆಕ್ಷೇಪಣೆಯಲ್ಲಿ ಉಲ್ಲೇಖಿಸಿರುವುದಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಎಸ್‌ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಅಧಿಕಾರಿಗಳು ತಂಡ ತನಿಖೆ ನಡೆಸಿ, ವರದಿ ಸಲ್ಲಿಸಿದ್ದಾರೆ. ಈಗ ಮುಖರ್ಜಿ ಅವರು ತನಿಖಾ ತಂಡವನ್ನು ಕೂಡಿಕೊಂಡಿದ್ದಾರೆ. ಮುಖರ್ಜಿ ಅನುಪಸ್ಥಿತಿಯಲ್ಲಿ ತನಿಖೆ ದುರ್ಬಲವಾಗಿಲ್ಲ” ಎಂದರು. ಆಗ ಪೀಠವು “ಇಂಥ ಸೂಕ್ಷ್ಮವಾದ ಪ್ರಕರಣಗಳು ನ್ಯಾಯಾಲಯದ ಮುಂದಿದ್ದಾಗ ನ್ಯಾಯಾಲಯ ಅಥವಾ ಸರ್ಕಾರ ತಂತಾನೆ ಹಿರಿಯ ಅಧಿಕಾರಿ ತನಿಖಾ ವರದಿಯನ್ನು ಪರಿಶೀಲಿಸುವಂತೆ ಹೇಳುತ್ತದೆ. ಇದು ಹಲವು ಸಂದರ್ಭದಲ್ಲಿ ನಡೆದಿದೆ” ಎಂದರು.
ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು “ನ್ಯಾಯಾಲಯ ಆದೇಶ ಮಾಡುವವರೆಗೆ ಎಸ್‌ಐಟಿ ಅಂತಿಮ ವರದಿ ಸಲ್ಲಿಸದಂತೆ ಆದೇಶಿಸಬೇಕು” ಎಂದರು. ಆಗ ಪೀಠವು ಹಾಗೆ ಮಾಡಲು ಬರುವುದಿಲ್ಲ ಎಂದಿತು. ರಮೇಶ್ ಜಾರಕಿಹೊಳಿ ಪರ ಹಿರಿಯ ವಕೀಲ ಸಿ ವಿ ನಾಗೇಶ್ ವಿಚಾರಣೆಯಲ್ಲಿ ಭಾಗಿಯಾಗಿದ್ದರು.
ಪ್ರಕರಣದ ಕುರಿತು ಸಲ್ಲಿಕೆಯಾಗಿರುವ ಇತರೆ ಅರ್ಜಿಗಳಲ್ಲಿನ ಬಹುತೇಕ ವಿಚಾರಗಳನ್ನು ಉಲ್ಲೇಖಿಸಿ ಎಸ್ ಉಮೇಶ್ ಎಂಬವರು ವಕೀಲ ಬಿ ವಿ ಶಂಕರನಾರಾಯಣ ರಾವ್ ಅವರ ಮೂಲಕ ಸಲ್ಲಿಸಿದ್ದ ಪುನರಾವರ್ತಿತ ಕೋರಿಕೆಗಳನ್ನು ವಜಾ ಮಾಡಿ, ನಿರ್ದಿಷ್ಟ ಕೋರಿಯನ್ನು ಮಾತ್ರ ಪೀಠವು ಉಳಿಸಿ ಮನವಿಯನ್ನು ಪ್ರತ್ಯೇಕಗೊಳಿಸಿತು. ಈ ಮನವಿಯ ವಿಚಾರಣೆಯನ್ನು ಸೆಪ್ಟೆಂಬರ್ 1ರಂದು ನಡೆಸುವುದಾಗಿ ನ್ಯಾಯಾಲಯ ಹೇಳಿತು.