Ramesh Jarakiholi and Karnataka High Court

 
ಸುದ್ದಿಗಳು

[ಜಾರಕಿಹೊಳಿ ಸಿ ಡಿ ಪ್ರಕರಣ] ಮನವಿಗಳ ವ್ಯಾಪ್ತಿ ಪರಿಶೀಲಿಸಿ ವಿಚಾರಣೆ ಬಗ್ಗೆ ನಿರ್ಧರಿಸಲಿರುವ ಏಕಸದಸ್ಯ ಪೀಠ

ಎಸ್‌ಐಟಿ ಸಿಂಧುತ್ವ ಪ್ರಶ್ನಿಸಿರುವ ಮನವಿಯಲ್ಲಿ ಪ್ರಮುಖ ವಿಷಯಗಳಿರುವುದರಿಂದ ಆ ಮನವಿಯನ್ನೇ ಈಗ ಆಲಿಸಿ. ಬ್ಲ್ಯಾಕ್‌ಮೇಲ್‌ ಆರೋಪ ಒಳಗೊಂಡಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿರುವ ಮನವಿಯನ್ನು ಈಗ ಆಲಿಸುವುದು ಬೇಡ ಎಂದ ಜೈಸಿಂಗ್.

Bar & Bench

“ಸಿ ಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಹಾಲಿ ಶಾಸಕರಾಗಿದ್ದಾರೆ. ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸಲು ವಿಶೇಷ ಪೀಠವಿದೆ. ಹೀಗಾಗಿ, ಸದರಿ ಮನವಿಯು ನನ್ನ ವ್ಯಾಪ್ತಿಗೆ ಬರಲಿದೆಯೇ ಎಂಬುದನ್ನು ಪರಿಶೀಲಿಸಿಕೊಂಡು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮನವಿಗಳನ್ನು ಆಲಿಸಲಾಗುವುದು” ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಮಂಗಳವಾರ ಹೇಳಿದರು.

ಸುಪ್ರೀಂ ಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮಾರ್ಚ್‌ 10ರಂದು ಇತ್ಯರ್ಥಪಡಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠವು ಸಿ ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದರ ಸಿಂಧುತ್ವ ಮತ್ತು ಬೆಂಗಳೂರಿನ ಸದಾಶಿವನಗರದಲ್ಲಿ ಜಾರಕಿಹೊಳಿ ಅವರು ತಮ್ಮ ಆಪ್ತರ ಮೂಲಕ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಆರೋಪ ಒಳಗೊಂಡಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಸಲ್ಲಿಸಿರುವ ಪ್ರತ್ಯೇಕ ಮನವಿಗಳನ್ನು ರೋಸ್ಟರ್‌ ಪೀಠಕ್ಕೆ ವರ್ಗಾಯಿಸಿತ್ತು. ಹೀಗಾಗಿ, ಸದರಿ ಮನವಿಗಳು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಮುಂದೆ ಇಂದು ವಿಚಾರಣೆಗೆ ಬಂದಿದ್ದವು.

ವಿಚಾರಣೆ ಆರಂಭವಾಗುತ್ತಿದ್ದಂತೆ ಸಂತ್ರಸ್ತೆಯನ್ನು ಪ್ರತಿನಿಧಿಸಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ಪ್ರಕರಣದ ಹಿನ್ನೆಲೆ ವಿವರಿಸಲಾರಂಭಿಸಿದರು.

ಆಗ ಮಧ್ಯಪ್ರವೇಶಿಸಿದ ನ್ಯಾ. ನಾಗಪ್ರಸನ್ನ ಅವರು “ಜಾರಕಿಹೊಳಿ ಅವರು ಹಾಲಿ ಶಾಸಕರಾಗಿದ್ದಾರೆ. ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸಲು ವಿಶೇಷ ಪೀಠವಿದೆ. ಹೀಗಾಗಿ, ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ” ಎಂದರು.

ಆಗ ಇಂದಿರಾ ಜೈಸಿಂಗ್‌ ಅವರು “ಸಿ ಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿರುವುದರ ಸಿಂಧುತ್ವ ಪ್ರಶ್ನಿಸಿರುವ ಮನವಿಯಲ್ಲಿ ಜಾರಕಿಹೊಳಿ ಅವರು ಪ್ರತಿವಾದಿಯಾಗಿಲ್ಲ. ಸಂಬಂಧಿತ ಮನವಿಯಲ್ಲಿ ಜಾರಕಿಹೊಳಿ ಪ್ರತಿವಾದಿಯಾಗಿದ್ದಾರೆ. ಎಸ್‌ಐಟಿ ಸಿಂಧುತ್ವ ಪ್ರಶ್ನಿಸಿರುವ ಮನವಿಯಲ್ಲಿ ಪ್ರಮುಖ ವಿಷಯಗಳಿರುವುದರಿಂದ ಆ ಮನವಿಯನ್ನೇ ಈಗ ಆಲಿಸಿ. ಉಳಿದಂತೆ ಜಾರಕಿಹೊಳಿ ಅವರು ತಮ್ಮ ಆಪ್ತರ ಮೂಲಕ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಆರೋಪ ಒಳಗೊಂಡಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿರುವ ಮನವಿಯನ್ನು ನೀವು ಈಗ ಆಲಿಸುವುದು ಬೇಡ” ಎಂದರು.

ಇದಕ್ಕೆ ನ್ಯಾಯಮೂರ್ತಿಗಳು “ಇಂದಿನ ವಿಚಾರಣೆಯ ಅವಧಿ ಮುಗಿದಿದೆ. ಮಾರ್ಚ್‌ 25ರ ಮಧ್ಯಹ್ನ 2.30ಕ್ಕೆ ಸದರಿ ಮನವಿಗಳನ್ನು ನಾನು ಆಲಿಸಬಹುದೇ ಎಂಬುದನ್ನು ಪರಿಶೀಲಿಸಿಕೊಂಡು ವಿಚಾರಣೆ ನಡೆಸುತ್ತೇನೆ” ಎಂದು ಅರ್ಜಿ ವಿಚಾರಣೆ ಮುಂದೂಡಿದರು.