Nikhil Kumaraswamy and Karnataka HC 
ಸುದ್ದಿಗಳು

ಚುನಾವಣಾ ಅಕ್ರಮ ತಡೆಗೆ ನಿಖಿಲ್‌ ಕುಮಾರಸ್ವಾಮಿ ಮನವಿ: ಆಕ್ಷೇಪಣೆ ಸಲ್ಲಿಸಲು ಆಯೋಗಕ್ಕೆ ಎರಡು ವಾರ ಕಾಲಾವಕಾಶ

ವಿಧಾನಸಭೆ ಚುನಾವಣೆ ವೇಳೆ ಗ್ಯಾರಂಟಿ ಕಾರ್ಡ್‌ ನೀಡಿ ಆಮಿಷ ಒಡ್ಡಲಾಗಿದೆ. ಈಗ ಆಧುನಿಕ ತಂತ್ರಜ್ಙಾನ ಬಳಸಿ ಆಮಿಷ ಒಡ್ಡಲಾಗುತ್ತಿದೆ. ಇದೆಲ್ಲದರಿಂದ ನಿಷ್ಪಕ್ಷಪಾತದ ಚುನಾವಣೆ ಅಸಾಧ್ಯ ಎಂದು ಅರ್ಜಿಯಲ್ಲಿ ಆಕ್ಷೇಪ.

Bar & Bench

ಚುನಾವಣಾ ಅಕ್ರಮ ಮತ್ತು ಆಮಿಷಗಳಿಗೆ ಕಡಿವಾಣ ಹಾಕಲು ಮಾದರಿ ನೀತಿ ಸಂಹಿತೆ ಜೊತೆಗೆ ಕಠಿಣ ನಿಯಮಗಳನ್ನು ರೂಪಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಜೆಡಿಎಸ್‌ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹಾಗೂ ಇನ್ನಿತರರು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್‌ ಎರಡು ವಾರ ಕಾಲಾವಕಾಶ ನೀಡಿದೆ.

ನಿಖಿಲ್‌ ಕುಮಾರಸ್ವಾಮಿ, ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಗೌತಮ್ ಎಂ. ಗೌಡ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ‌ ಸೋಮವಾರ ವಿಚಾರಣೆ ನಡೆಸಿತು.

ಚುನಾವಣಾ ಆಯೋಗದ ಪರ ವಕೀಲ ಎಸ್‌ ಆರ್‌ ದೊಡ್ಡವಾಡ ಅವರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠವು ಎರಡು ವಾರಗಳ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.

2023ರ ವಿಧಾನಸಭೆ ಚುನಾವಣೆ ವೇಳೆ ಮತದಾರರಿಗೆ ಗ್ಯಾರಂಟಿ ಕಾರ್ಡ್ ನೀಡಿ ಆಮಿಷ ಒಡ್ಡಲಾಗಿದೆ. ಆಧುನಿಕ ತಂತ್ರಜ್ಙಾನ ಬಳಸಿ ಆಮಿಷ ಒಡ್ಡಲಾಗುತ್ತಿದೆ. ಇದರಿಂದ ನಿಷ್ಪಕ್ಷಪಾತ ಚುನಾವಣೆ ನಡೆಯಲು ಸಾಧ್ಯವಿಲ್ಲ. ಚುನಾವಣಾ ಪೂರ್ವ, ಚುನಾವಣೆ ಸಂದರ್ಭದಲ್ಲಿ ಹಾಗೂ ಚುನಾವಣಾ ನಂತರದ ಭ್ರಷ್ಟಾಚಾರ, ಅಕ್ರಮ ಮತ್ತು ಆಮಿಷಗಳಿಗೆ ಕಡಿವಾಣ ಹಾಕಲು ಮಾದರಿ ನೀತಿ ಸಂಹಿತೆಯ ಜೊತೆಗೆ ಕಠಿಣ ನಿಯಮ ರೂಪಿಸಬೇಕು. ಚುನಾವಣಾ ಅಕ್ರಮ, ಆಮಿಷಗಳನ್ನು ತಡೆಗಟ್ಟಲು ಈಗಿರುವ ಕಾನೂನು ಮತ್ತು ನಿಯಮಗಳನ್ನು ಮರು ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಕಳೆದ ವಿಚಾರಣೆಯಲ್ಲಿ ಪ್ರತಿವಾದಿಗಳಾದ ಭಾರತ ಚುನಾವಣಾ ಆಯೋಗ, ಕೇಂದ್ರ ಕಾನೂನು ಸಚಿವಾಲಯ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್  ಜಾರಿಗೊಳಿಸಿದ್ದ ಪೀಠವು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿತ್ತು.