ಜೆಡಿಎಸ್‌ನ ನಿಖಿಲ್‌ರಿಂದ ಚುನಾವಣೆಯಲ್ಲಿ ಅಕ್ರಮಕ್ಕೆ ತಡೆ ಕೋರಿಕೆ: ಕೇಂದ್ರ ಸರ್ಕಾರ, ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌

ಚುನಾವಣೆಗೂ ಮುನ್ನ ಮತ್ತು ನಂತರ ಭ್ರಷ್ಟಾಚಾರ ಚಟುವಟಿಕೆ ನಿರ್ಬಂಧಿಸಲು ನೀತಿ ಸಂಹಿತೆಯ ಜೊತೆ ಕಠಿಣವಾದ ಜಾರಿಗೊಳಿಸಬಹುದಾದ ಮಾರ್ಗಸೂಚಿ ರೂಪಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Nikhil Kumaraswamy and Karnataka HC
Nikhil Kumaraswamy and Karnataka HC

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಮತದಾರರಿಗೆ ಗ್ಯಾರಂಟಿ ರೂಪದಲ್ಲಿ ಆಮಿಷವೊಡ್ಡಲಾಗಿದ್ದು, ಅಂತಹ ಅಕ್ರಮಗಳನ್ನು ತಡೆಯುವಂತೆ ಸರ್ಕಾರಗಳು ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಮತ್ತಿತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಚುನಾವಣೆಗೂ ಮುನ್ನ ಮತ್ತು ನಂತರ ಭ್ರಷ್ಟಾಚಾರ ಚಟುವಟಿಕೆ ನಿರ್ಬಂಧಿಸಲು ನೀತಿ ಸಂಹಿತೆಯ ಜೊತೆ ಕಠಿಣವಾದ ಜಾರಿಗೊಳಿಸಬಹುದಾದ ಮಾರ್ಗಸೂಚಿ ರೂಪಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ನಿಖಿಲ್‌, ಗೌತಮ್‌ ಗೌಡ,, ಪ್ರಸಾದ್‌ ಕೆ ಆರ್‌ ಮತ್ತು ಎ ಮಂಜುನಾಥ್‌ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ಕೇಂದ್ರದ ಕಾನೂನು ಇಲಾಖೆ, ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಕೀಲರು, ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಆಧುನಿಕ ತಂತ್ರಜ್ಞಾನ ಬಳಸಿ ಮತದಾರರಿಗೆ ಆಮಿಷ ಒಡ್ಡಲಾಗಿತ್ತು. ನಿಯಮಗಳನ್ನು ಉಲ್ಲಂಘಿಸಿ ಮತದಾರರಿಗೆ ಗ್ಯಾರಂಟಿ ಕಾರ್ಡ್ ನೀಡಿ ಆಮಿಷ ಒಡ್ಡಲಾಗಿತ್ತು. ಇದರಿಂದ ನಿಷ್ಪಕ್ಷಪಾತ ಚುನಾವಣೆ ನಡೆಯುವುದು ಸಾಧ್ಯವಿಲ್ಲ. ಅದೇ ಮಾದರಿಯನ್ನು ಇದೀಗ ಎಲ್ಲಾ ರಾಜ್ಯಗಳೂ ಸಹ ಅನುಕರಿಸುತ್ತಿವೆ. ಹೀಗಾಗಿ, ಕರ್ನಾಟಕ ಮಾದರಿಯನ್ನು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯಕ್ಕೆ ಕೋರಿದರು.

Related Stories

No stories found.
Kannada Bar & Bench
kannada.barandbench.com