ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ವಿರುದ್ಧ ದೇಶ ಈಚೆಗೆ ನಡೆಸಿದ ʼಆಪರೇಷನ್ ಸಿಂಧೂರ್ʼ ಸೇನಾ ಕಾರ್ಯಾಚರಣೆ ವೇಳೆ ಶಿಕ್ಷಕರೊಬ್ಬರ ಬಗ್ಗೆ ಸುಳ್ಳು ಮತ್ತು ಮಾನಹಾನಿಕರ ಸುದ್ದಿ ಪ್ರಕಟಿಸಿದ ಜೀ ನ್ಯೂಸ್ ಮತ್ತು ನ್ಯೂಸ್ 18 ಇಂಡಿಯಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ನ್ಯಾಯಾಲಯ ಶನಿವಾರ ಆದೇಶಿಸಿದೆ [ಶೇಖ್ ಮೊಹಮ್ಮದ್ ಸಲೀಮ್ ಮತ್ತು ಪೂಂಚ್ ಮುಖೇನ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ನಡುವಣ ಪ್ರಕರಣ].
ಮೇ 7 ರಂದು ಪಾಕಿಸ್ತಾನದ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ ಸ್ಥಳೀಯ ಶಿಕ್ಷಕ ಖಾರಿ ಮೊಹಮ್ಮದ್ ಇಕ್ಬಾಲ್ ಅವರಿಗೆ ಲಷ್ಕರ್-ಎ-ತೋಯ್ಬಾ ಜೊತೆ ನಂಟು ಇದ್ದು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ "ಪಾಕಿಸ್ತಾನಿ ಭಯೋತ್ಪಾದಕ" ಎಂದು ಎರಡೂ ವಾಹಿನಿಗಳು ಸುಳ್ಳು ಸುದ್ದಿ ಪ್ರಸಾರ ಮಾಡಿವೆ ಎಂದು ಆರೋಪಿಸಿ ವಕೀಲ ಶೇಖ್ ಮೊಹಮ್ಮದ್ ಸಲೀಮ್ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ವಿಶೇಷ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶ ಶಫೀಕ್ ಅಹ್ಮದ್ ಈ ಆದೇಶ ಪ್ರಕಟಿಸಿದ್ದಾರೆ.
ಮೃತ ಖಾರಿ ಇಕ್ಬಾಲ್ ಪೂಂಚ್‌ನ ಜಾಮಿಯಾ ಜಿಯಾ-ಉಲ್-ಉಲೂಮ್‌ನಲ್ಲಿ ಧಾರ್ಮಿಕ ಶಿಕ್ಷಕರಾಗಿದ್ದು ಪಾಕಿಸ್ತಾನದ ಕ್ಷಿಪಣಿ ದಾಳಿಗೆ ಬಲಿಯಾದ ನಾಗರಿಕ ಎಂದು ಶೇಖ್ ನ್ಯಾಯಾಲಯದ ಮುಂದೆ ವಾದಿಸಿದ್ದರು.
ಆದರೆ ಸುದ್ದಿವಾಹಿನಿಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹತನಾದ ಕುಖ್ಯಾತ ಕಮಾಂಡರ್ ಎಂದು ಹಣೆಪಟ್ಟಿ ಹಚ್ಚಿಸ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಯಾವುದೇ ಪರಿಶೀಲನೆ ನಡೆಸದೆ ಅವರನ್ನು ಭಯೋತ್ಪಾದಕರೊಂದಿಗೆ ತಳಕು ಹಾಕಿವೆ. ನಂತರ ವರದಿ ಹಿಂಪಡೆದು ಸ್ಪಷ್ಟೀಕರಣ ನೀಡಲಾಗಿದ್ದರೂ ಮೃತರ ಮತ್ತು ಅವರ ಕುಟುಂಬದ ವರ್ಚಸ್ಸಿಗೆ ಗಂಭೀರ ಹಾನಿ ಉಂಟಾಯಿತು ಎಂದು ಅವರು ದೂರಿದ್ದಾರೆ.
ಸುದ್ದಿ ದೆಹಲಿಯಿಂದ ಪ್ರಸಾರವಾಗಿರುವುದರಿಂದ ಪ್ರಕರಣ ಪೂಂಚ್ ನ್ಯಾಯಾಲಯದ ಪ್ರಾದೇಶಿಕ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ವಾದಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಾಲಯ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 199 ರ ಅಡಿಯಲ್ಲಿ, ಮಾನನಷ್ಟದಂತಹ ಕೃತ್ಯದ ಪರಿಣಾಮವು ಬೇರೆ ಸ್ಥಳದಲ್ಲಿ ಸಂಭವಿಸಿದಾಗ, ನ್ಯಾಯವ್ಯಾಪ್ತಿಯು ಎರಡೂ ಸ್ಥಳಗಳಲ್ಲಿ ಮಾನ್ಯವಾಗಿರುತ್ತದೆ ಎಂದಿತು. ಮೃತರು ವಾಸಿಸುತ್ತಿದ್ದ, ಕೆಲಸ ಮಾಡುತ್ತಿದ್ದ ಮತ್ತು ಹುತಾತ್ಮರಾದ ಪೂಂಚ್‌ನಲ್ಲಿ ಮಾನಹಾನಿ ನಡೆದಿದೆ ಎಂದು ಅದು ಒತ್ತಿ ಹೇಳಿತು.
ಮಾಧ್ಯಮ ಜವಾಬ್ದಾರಿಯ ಬಗ್ಗೆಯೂ ನ್ಯಾಯಾಲಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ ಸಂವಿಧಾನದ 19(1)(a) ವಿಧಿಯ ಅಡಿಯಲ್ಲಿ ಮಾಧ್ಯಮಗಳಿಗೆ ರಕ್ಷಣೆ ಇದೆಯಾದರೂ ಈ ಹಕ್ಕು 19(2) ವಿಧಿಯ ಅಡಿಯಲ್ಲಿ ಅದರಲ್ಲಿಯೂ ಮಾನನಷ್ಟ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಭ್ಯತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದಿತು.
"ಯಾವುದೇ ಪರಿಶೀಲನೆ ಇಲ್ಲದೆ" ಮೃತ ನಾಗರಿಕ ಶಿಕ್ಷಕನನ್ನು ಭಯೋತ್ಪಾದಕ ಎಂದು ಬ್ರಾಂಡ್ ಮಾಡುವುದನ್ನು ಸಾರ್ವಜನಿಕ ಅಶಾಂತಿಗೆ ಉತ್ತೇಜನ ನೀಡುವ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಹಾನಿ ಮಾಡುವ ಸಾಮರ್ಥ್ಯ ಇರುವ ಗಂಭೀರ ದುಷ್ಕೃತ್ಯ ಎಂದರು.
ಸುದ್ದಿ ವಾಹಿನಿಗಳು ನಂತರ ಕ್ಷಮೆಯಾಚಿಸಿದ್ದರೂ, 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಖಾರಿ ಇಕ್ಬಾಲ್ ಅವರನ್ನು ಪಾತ್ರವಿತ್ತು ಎಂದು ಪರಿಶೀಲನೆ ನಡೆಸದೆ ಸುದ್ದಿ ಪ್ರಸಾರ ಮಾಡಿದ್ದು ಮಾನನಷ್ಟ , ಸಾರ್ವಜನಿಕ ಕಿಡಿಗೇಡಿತನ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಿದೆ. ಇದು, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 353(2), 356 ಮತ್ತು 196 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್ 66 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದಿತು.
ಪ್ರಸಾರದ ಪರಿಣಾ ಕಡಿಮೆ ಮಾಡಲು ಕ್ಷಮೆಯಾಚನೆ ಸಾಕಾಗುವುದಿಲ್ಲ ಎಂದು ಹೇಳಿದ ನ್ಯಾಯಾಲಯ, ಸಂಜ್ಞೇಯ ಅಪರಾಧ ಬಹಿರಂಗವಾದ ನಂತರ ಕ್ರಮ ಕೈಗೊಳ್ಳುವುದು ಪೊಲೀಸರ ಕರ್ತವ್ಯ ಎಂದಿತು. ಅದರಂತೆ, ಸಂಬಂಧಪಟ್ಟ ಠಾಣಾಧಿಕಾರಿಗೆ ಏಳು ದಿನಗಳಲ್ಲಿ ಎಫ್‌ಐಆರ್ ದಾಖಲಿಸಿ ಅನುಪಾಲನಾ ವರದಿ ಸಲ್ಲಿಸುವಂತೆ ಆದೇಶಿಸಿತು.