
ಪಹಲ್ಗಾಮ್ ಭಯೋತ್ಪಾದಕ ಕೃತ್ಯದ ನಂತರ ಭಾರತವು ಗಡಿಯಾಚೆಗಿನ ಭಯೋತ್ಪಾದಕ ವಿರುದ್ಧ ನಡೆಸಿದ ಸೇನಾ ಕಾರ್ಯಾಚರಣೆಗೆ ಇಟ್ಟ 'ಆಪರೇಷನ್ ಸಿಂಧೂರ್' ಹೆಸರಿಗೆ ಭಾರತ ಮಾತ್ರವಲ್ಲದೆ ಅಮೆರಿಕ, ಇಂಗ್ಲೆಂಡ್‌ನಲ್ಲಿಯೂ ವಾಣಿಜ್ಯ ಚಿಹ್ನೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಮಾಧ್ಯಮ, ಪ್ರಸಾರ ಮತ್ತು ಮನರಂಜನೆ ವಿವಿಧ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ತಮಗೆ ಆ ಹೆಸರಿನ ವಿಶಿಷ್ಟ ಹಕ್ಕನ್ನು ನೀಡುವಂತೆ ಕೋರಿವೆ.
ಭಾರತದ ಗಡಿಯಾಚೆಗಿನ ಸೇನಾ ದಾಳಿಗೆ ಇಡಲಾಗಿರುವ ಆಪರೇಷನ್ ಸಿಂಧೂರ್ ಹೆಸರು ದೇಶದ ಗಮನ ಸೆಳೆದಿದೆ. "ಸಿಂಧೂರ್" ಎಂಬುದು ವೈವಾಹಿಕ ಹೆಗ್ಗುರುತಾಗಿ ಹಾಗೂ ತ್ಯಾಗ ಮತ್ತು ಶೌರ್ಯದ ಸಾಂಪ್ರದಾಯಿಕ ಭಾರತೀಯ ಪರಿಕಲ್ಪನೆಯಾಗಿ ಅರ್ಥವನ್ನು ಹೊಮ್ಮಿಸುತ್ತದೆ. ಪ್ರಬಲ ಭಾವನಾತ್ಮಕತೆ ಮತ್ತು ದೇಶಭಕ್ತಿಯನ್ನು ಹೆಸರು ಸಂಕೇತಿಸುವುದರಿಂದ ಚಲನಚಿತ್ರ, ಮಾಧ್ಯಮ ಮತ್ತು ಸಾರ್ವಜನಿಕ ಸಂವಾದಗಳಲ್ಲಿ ಬಳಸಲಾಗುತ್ತಿದ್ದ ಈ ಪದಗುಚ್ಛ ಇದೀಗ ವಾಣಿಜ್ಯ ಚಿಹ್ನೆಯ ಬೇಡಿಕೆ ಪಡೆದಿದೆ.
ಅಮೆರಿಕದಲ್ಲಿ ʼಆಪರೇಷನ್ ಸಿಂಧೂರ್ʼ ವಾಣಿಜ್ಯ ಚಿಹ್ನೆ ಕೋರಿ ಮೇ 9, 2025 ರಂದು ನ್ಯೂಯಾರ್ಕ್ ಮೂಲದ ರೋಹಿತ್ ಬಹರಾನಿ ಎಂಬ ವ್ಯಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮನರಂಜನೆ, ಶಿಕ್ಷಣ, ಸಾಂಸ್ಕೃತಿಕ ಮತ್ತು ಮಾಧ್ಯಮ ಸೇವೆಗಳನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ದರ್ಜೆ 041ರ ಅಡಿಯಲ್ಲಿ ಮನವಿ ಮಾಡಲಾಗಿದೆ.
ಇದಲ್ಲದೆ ಇಂಗ್ಲೆಂಡ್ ಡೆವೊನ್ ನಿವಾಸಿ ವಿಕಾಸ್ ಮಹಾಜನ್ ಇಂಗ್ಲೆಂಡ್ ಬೌದ್ಧಿಕ ಆಸ್ತಿ ಕಚೇರಿ (ಯುಕೆಐಪಿಒ) ಮೇ 8, 2025 ರಂದು ವಾಣಿಜ್ಯ ಚಿಹ್ನೆ ಕೋರಿ ವರ್ಗ35, 38 ಮತ್ತು 41ರ ಅಡಿ ಇಂಗ್ಲೆಂಡ್ ಬೌದ್ಧಿಕ ಆಸ್ತಿ ಕಚೇರಿ (ಯುಕೆಐಪಿಒ) ಮೇ 8, 2025ರಂದು ಅರ್ಜಿ ಸಲ್ಲಿಸಿದ್ದಾರೆ.
ಭಾರತದಲ್ಲಿ, ಅಂತಾರಾಷ್ಟ್ರೀಯ ದರ್ಜೆಯ ವಿವಿಧ ವರ್ಗಗಳಡಿ ಆಪರೇಷನ್ ಸಿಂಧೂರ್ ಪದಗುಚ್ಛಕ್ಕೆ ವಾಣಿಜ್ಯ ಚಿಹ್ನೆ ಕೋರಿ ಕನಿಷ್ಠ 14 ಅರ್ಜಿಗಳು ಸಲ್ಲಿಕೆಯಾಗಿದ್ದವು. ಗಮನಾರ್ಹವೆಂದರೆ ರಿಲಯನ್ಸ್ ಕಂಪೆನಿ ಕಡೆಯಿಂದ ಅರ್ಜಿ ಸಲ್ಲಿಕೆಯಾದ ನಂತರ ಅದನ್ನು ಹಿಂಪಡೆಯಲಾಗಿತ್ತು.
ವಿದೇಶಗಳಲ್ಲಿ ದೊರೆಯುವ ವಾಣಿಜ್ಯ ಚಿಹ್ನೆ ಹಕ್ಕುಗಳು ಪ್ರಾದೇಶಿಕ ಸ್ವರೂಪದ್ದಾಗಿರಲಿದ್ದು ಪ್ರತ್ಯೇಕ ಅರ್ಜಿ ಸಲ್ಲಿಸದ ಹೊರತು ಅಥವಾ ಮ್ಯಾಡ್ರಿಡ್ ಶಿಷ್ಟಾಚಾರದ ಅಡಿಯಲ್ಲಿ ಅಂತಾರಾಷ್ಟ್ರೀಯವಾಗಿ ನೋಂದಣಿಯನ್ನು ಗೊತ್ತುಪಡಿಸದ ಹೊರತು ಭಾರತಕ್ಕೆ ಅವು ಅನ್ವಯವಾಗುವುದಿಲ್ಲ.
ಭಾರತ, ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳು ಮ್ಯಾಡ್ರಿಡ್ ಶಿಷ್ಟಾಚಾರಕ್ಕೆ ಸಹಿ ಹಾಕಿವೆ. ಒಂದು ಸದಸ್ಯ ರಾಷ್ಟ್ರದಲ್ಲಿರುವ ವಾಣಿಜ್ಯ ಚಿಹ್ನೆ ಮಾಲೀಕರು ಒಂದೇ ಅಂತಾರಾಷ್ಟ್ರೀಯ ಅರ್ಜಿ ಸಲ್ಲಿಕೆಯ ಮೂಲಕ ಇತರ ಸದಸ್ಯ ರಾಷ್ಟ್ರಗಳಲ್ಲಿಯೂ ರಕ್ಷಣೆ ಪಡೆಯಲು ಈ ಶಿಷ್ಟಾಚಾರ ಅನುವು ಮಾಡಿಕೊಡುತ್ತದೆ.