ಸುದ್ದಿಗಳು

ಮುಸ್ಲಿಮರನ್ನು ಗುರಿಯಾಗಿಸಿಕೊಂಡ ಸುಳ್ಳು ಸುದ್ದಿ ತಡೆಗೆ ಮಾರ್ಗಸೂಚಿ: ಅರ್ಜಿ ತಿರಸ್ಕರಿಸಿದ ಮಧ್ಯಪ್ರದೇಶ ಹೈಕೋರ್ಟ್

ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಮಾಧ್ಯಮಗಳಲ್ಲಿ ತಪ್ಪುದಾರಿಗೆಳೆಯುವಂತಹ ಮತ್ತು ಸುಳ್ಳಾಗಿರುವ ಮಾಹಿತಿ ತಡೆಯಲು ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.

Bar & Bench

ಮುಸ್ಲಿಂ ಸಮುದಾಯ ಮತ್ತು ಇಸ್ಲಾಂ ಧರ್ಮವನ್ನು ಗುರಿಯಾಗಿಸಿಕೊಂಡು ದಿಕ್ಕು ತಪ್ಪಿಸುವ ಸುದ್ದಿ ಪ್ರಕಟಿಸುವ ಇಲ್ಲವೇ ಪ್ರಸಾರ ಮಾಡುವುದರ ವಿರುದ್ಧ ಮಾರ್ಗಸೂಚಿ ಒದಗಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ [ಮಹ್ರುಫ್ ಅಹಮದ್ ಖಾನ್ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ] .

ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ವಿಶಾಲ್ ಮಿಶ್ರಾ ಅವರಿದ್ದ ಪೀಠ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಯಾಗಿ ಸಲ್ಲಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿತು.

"ರಿಟ್ ಅರ್ಜಿಯಲ್ಲಿ ಕೋರಿರುವ ಪರಿಹಾರದ ಸ್ವರೂಪ ಮತ್ತು ದೂರಿನಲ್ಲಿ ಮಂಡಿಸಲಾದ ಹೇಳಿಕೆ ಗಮನಿಸಿದರೆ, ಅರ್ಜಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಸ್ವರೂಪದಲ್ಲಿದ್ದು, ಇದಕ್ಕಾಗಿ ಮ್ಯಾಂಡಮಸ್ ಹೊರಡಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಈ ಸಂದರ್ಭಗಳಲ್ಲಿ, ನ್ಯಾಯಾಲಯ ರಿಟ್ ಅರ್ಜಿ ಪರಿಗಣಿಸುವುದರಿಂದ ದೂರ ಉಳಿಯುತ್ತದೆ" ಎಂದು ಪೀಠ ವಿವರಿಸಿತು.

ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಲು ಮತ್ತು ಕೋಮು ದ್ವೇಷ ಪ್ರಚೋದಿಸಲು 'ಲವ್ ಜಿಹಾದ್' ರೀತಿಯ ಪದಗಳನ್ನು ಬಳಸಿದ್ದಕ್ಕಾಗಿ ಎರಡು ಹಿಂದಿ ಪತ್ರಿಕೆಗಳ ಸಂಪಾದಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸೇರಿದಂತೆ ವಿವಿಧ ನಿರ್ದೇಶನಗಳನ್ನು ನೀಡುವಂತೆ ಕೋರಿ ಮರುಫ್ ಅಹ್ಮದ್ ಖಾನ್ ಎಂಬುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಮುಸ್ಲಿಮರು ಮತ್ತು ಇಸ್ಲಾಂ ಧರ್ಮವನ್ನು ಗುರಿಯಾಗಿಸಿಕೊಂಡು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತಪ್ಪುದಾರಿಗೆಳೆಯುವ ಮತ್ತು ಸುಳ್ಳು ಮಾಹಿತಿಯ ಪ್ರಸರಣವನ್ನು ತಡೆಯಲು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ಮನವಿ ಮಾಡಲಾಗಿತ್ತು.

ಸರ್ಕಾರದ ಪರ ವಕೀಲರು ಅರ್ಜಿಯ ನಿರ್ವಹಣೆಗೆ ಆಕ್ಷೇಪ ವ್ಯಕ್ತಪಡಿಸಿದರು. ಅರ್ಜಿದಾರರು ಈ ಮನವಿ ಮೂಲಕ ಪರಿಹಾರ ಪಡೆಯಲು ಆಗದು ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಆಕ್ಷೇಪಾರ್ಹ ವಿಷಯಗಳಿಂದ ಮುಸ್ಲಿಂ ಸಮುದಾಯದ ಸದಸ್ಯನಾಗಿ ನನ್ನ ಕಕ್ಷಿದಾರರ ಧಾರ್ಮಿಕ ಭಾವನೆಗಳು ಮತ್ತು ಇತರರ ಭಾವನೆಗಳಿಗೆ ನೋವುಂಟಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಪ್ರಸ್ತುತ ಅರ್ಜಿ ಸಲ್ಲಿಸಲಾಗಿದೆ ಎಂದರು,

ಆದರೆ ಅರ್ಜಿದಾರರ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಸಂದರ್ಭಗಳಲ್ಲಿ, ಉನ್ನತ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಅಥವಾ ಸೂಕ್ತ ನ್ಯಾಯಾಲಯದ ಮುಂದೆ ದೂರು ಸಲ್ಲಿಸುವ ಮೂಲಕ ಪರಿಹಾರ ಪಡೆಯಬಹುದು ಎಂದ ಪೀಠ ಅರ್ಜಿ ತಿರಸ್ಕರಿಸಿತು.