ಮುಸ್ಲಿಮರನ್ನು ಏಕಾಂಗಿ ಮಾಡಲಾಗುತ್ತಿದೆ: ವಕ್ಫ್ ತಿದ್ದುಪಡಿ ಕಾಯಿದೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧ
ಆಸ್ತಿಯನ್ನು ವಕ್ಫ್ ಆಗಿ ನೊಂದಾಯಿಸಲು ಅನ್ಯಾಯಯುತ ಅವಶ್ಯಕತೆಗಳನ್ನು ಹೇರುವ ಮೂಲಕ 2025ರ ವಕ್ಫ್ (ತಿದ್ದುಪಡಿ) ಕಾಯಿದೆ ಮುಸ್ಲಿಂ ಸಮುದಾಯವನ್ನು ಪ್ರತ್ಯೇಕಿಸಿದೆ. ಆದರೆ ಉಳಿದ ಧಾರ್ಮಿಕ ಸಮುದಾಯಗಳು ದತ್ತಿಗಳನ್ನು ನೀಡಲು ಇಂತಹ ಕಠಿಣ ಷರತ್ತುಗಳು ಅನ್ವಯಿಸುವುದಿಲ್ಲ ಎಂದು ಕಾಯಿದೆಯನ್ನು ರದ್ದುಗೊಳಿಸುವಂತೆ ಕೋರಿರುವ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ವಾದಿಸಿದರು.
ಅರ್ಜಿದಾರರ ಪರ ವಕೀಲರಾದ ರಾಜೀವ್ ಧವನ್, ಅಭಿಷೇಕ್ ಮನು ಸಿಂಘ್ವಿ, ಹಾಗೂ ಹುಜೆಫಾ ಅಹ್ಮದಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಹಾಗೂ ನ್ಯಾಯಮೂರ್ತಿ ಎ ಜಿ ಮಸೀಹ್ ಅವರಿದ್ದ ಪೀಠದೆದುರು ವಾದ ಮಂಡಿಸಿದರು.
"ಈ ರೀತಿ ಆಸ್ತಿ ನಿಭಾಯಿಸುವಿಕೆಗೆ ಷರತ್ತು ವಿಧಿಸಿರುವುದು ಮುಸ್ಲಿಂ ಧರ್ಮದಲ್ಲಿ ಮಾತ್ರ. ನಮ್ಮದ್ದು ಜಾತ್ಯತೀತ ರಾಷ್ಟ್ರ. ನನ್ನ ಸಿಖ್ ಕಕ್ಷಿದಾರರೊಬ್ಬರು ವಕ್ಫ್‌ಗೆ ಕೊಡುಗೆ ನೀಡಲು ಬಯಸುತ್ತಿದ್ದು ಈ ಆಸ್ತಿಯನ್ನು ಈ ರೀತಿ ಕಸಿದುಕೊಳ್ಳಬಾರದು ಎಂದು ಕೇಳಿಕೊಳ್ಳುತ್ತೇನೆ. ಈ ಪ್ರಕರಣ ಸಂವಿಧಾನದ ವಿಧಿಗಳಾದ 25, 26, 29 ರ ಮೇಲೆ ಪರಿಣಾಮ ಬೀರುತ್ತದೆ ... ವಿಧಿ 29 ಸಂಸ್ಕೃತಿಯನ್ನು ಸಂರಕ್ಷಿಸುವ ಹಕ್ಕು ... ಅದನ್ನು ತೆಗೆದುಹಾಕಿದರೆ ನ್ಯಾಯಾಲಯ ಅವಿರತವಾಗಿ ನಿರ್ಮಿಸಿದ ಇಡೀ ಜಾತ್ಯತೀತ ಕಟ್ಟಡ ಕುಸಿಯುತ್ತದೆ” ಎಂದು ಧವನ್ ನುಡಿದರು.
"ಪ್ರತಿಯೊಂದು ಧರ್ಮದಲ್ಲೂ ದತ್ತಿಗಳಿವೆ. ಧಾರ್ಮಿಕ ದತ್ತಿ ನೀಡುವಾಗ ಬೇರೆ ಯಾವ ಧರ್ಮದವರು 5 ವರ್ಷ ಅಥವಾ 10 ವರ್ಷಗಳ ಕಾಲ ಆ ಧರ್ಮವನ್ನು ಆಚರಿಸಿದ್ದಕ್ಕಾಗಿ ಪುರಾವೆ ಕೇಳುತ್ತಾರೆ? ಈ ನಿಬಂಧನೆಯು 15 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂಬ ಸಣ್ಣ ನೆಲೆಯಲ್ಲಿಯೇ ಅಸಿಂಧುವಾಗುತ್ತದೆ" ಎಂದು ಸಿಂಘ್ವಿ ವಾದಿಸಿದರು.
ವಾಸ್ತವವಾಗಿ ಇದು ಪೂರ್ವಾನ್ವಯವಾಗುವಂತೆ ಗ್ರಹಿಸಬೇಕಾದುದಾಗಿದ್ದು ನನ್ನ ಕಕ್ಷಿದಾರರ ಸಂಪೂರ್ಣ ವಕ್ಫ್ ಆಸ್ತಿಯನ್ನು ಕೈಚಳಕದಿಂದ ಅಳಿಸಿಹಾಕಲಾಗಿದೆ. 15 ನೇ ವಿಧಿಗೆ ಸಂಬಂಧಿಸಿದ ವಾದ ಮುಖ್ಯವಾದುದು. ಇದು (ಕಾಯಿದೆ) ಒಂದು ನಿರ್ದಿಷ್ಟ ಸಮುದಾಯವನ್ನೇ ಪ್ರತ್ಯೇಕಿಸುತ್ತದೆ ಎಂದು ಅಹ್ಮದಿ ವಾದಿಸಿದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಕೂಡ ವಾದ ಮಂಡಿಸಿದರು.
ತಿದ್ದುಪಡಿ ಕಾಯಿದೆಯಲ್ಲಿ ವಕ್ಫ್‌ಗಳ ನೋಂದಣಿ ಮಾಡದಿರುವುದರ ಪರಿಣಾಮಗಳು ತೀವ್ರ ತರವಾಗಿರುತ್ತವೆ ಎಂಬ ಅಂಶದ ಬಗ್ಗೆ ನ್ಯಾಯಾಲಯವೂ ಸಹ ಕಳವಳ ವ್ಯಕ್ತಪಡಸಿತು. ಹಿಂದಿನ ಕಾಯಿದೆಯಡಿ ವಕ್ಫ್ ಆಸ್ತಿ ನೋಂದಣಿ ಮಾಡದಿರುವ ಪರಿಣಾಮಗಳು ಕೇವಲ ಮುತಾವಲಿಯ ಮೇಲೆ ಮಾತ್ರ ಉಂಟಾಗುತ್ತಿದ್ದವು. ಆದರೆ ಪ್ರಸ್ತುತ ಕಾಯಿದೆಯಲ್ಲಿ ಅದು ಹಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪ್ರಕರಣದ ವಿಚಾರಣೆ ನಾಳೆಯೂ (ಬುಧವಾರ) ಮುಂದುವರೆಯಲಿದೆ.