ರೋಹಿಂಗ್ಯಾ ನಿರಾಶ್ರಿತರನ್ನು ತಮ್ಮ ದೇಶಕ್ಕೆ ಗಡಿಪಾರು ಮಾಡಲು ಅನುವು ಮಾಡಿಕೊಡುವ ಸಂಬಂಧ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಮುಂದೆ ಬಾಕಿ ಇರುವ ಅರ್ಜಿಯನ್ನು ಹಿಂಪಡೆಯಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿರ್ಧರಿಸಿದೆ.
ಪ್ರಕರಣ ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಸೀಮ್ ಸಾಹ್ನಿಗೆ ಸರ್ಕಾರದ ಕಾರ್ಯದರ್ಶಿ ಅಚಲ್ ಸೇಥಿ ಆದೇಶದಲ್ಲಿ ತಿಳಿಸಿದ್ದಾರೆ.
2018ರಲ್ಲಿ ಬಾಂಗ್ಲಾದೇಶದ ಪ್ರಜೆಗಳು ಮತ್ತು ರೋಹಿಂಗ್ಯಾಗಳ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 561ಎ ಅಡಿ ಸತ್ವಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಪ್ರಕರಣ ದಾಖಲಿಸಿತ್ತು. “ಬಾಂಗ್ಲಾದೇಶಿ ಪ್ರಜೆಗಳು ಮತ್ತು ರೋಹಿಂಗ್ಯಾಗಳನ್ನು ಅವರ ದೇಶಕ್ಕೆ ಮರಳಿ ಕಳುಹಿಸುವ ದೃಷ್ಟಿಯಿಂದ ಅವರ ವಿರುದ್ಧದ ಹೈಕೋರ್ಟ್‌ನ ಜಮ್ಮು ಘಟಕದಲ್ಲಿ ದಾಖಲಿಸಿರುವ ಪ್ರಕರಣ ಹಿಂಪಡೆಯುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ನನ್ನಲ್ಲಿ ಮನವಿ ಮಾಡಿದೆ” ಎಂದು ಎಎಜಿ ಅಸೀಮ್ ಸಾಹ್ನಿ 'ಬಾರ್ ಅಂಡ್ ಬೆಂಚ್”ಗೆ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಗೊಂಡಿರುವ ರೋಹಿಂಗ್ಯಾಗಳನ್ನು ಗಡಿಪಾರು ಮಾಡುವುದಕ್ಕೆ ಸಂಬಂಧಿಸಿದಂತೆ ತಡೆ ನೀಡುವ ಕುರಿತು ಯಾವುದೇ ನಿರ್ದೇಶಗಳನ್ನು ನೀಡಲು ಗುರುವಾರ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಸೂಕ್ತ ಪ್ರಕ್ರಿಯೆ ಅನುಸರಿಸುವ ಮೂಲಕ ಅವರನ್ನು ಗಡಿಪಾರು ಮಾಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಸ್ ಎ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠವು ಆದೇಶಿಸಿತ್ತು.