ಸೂಕ್ತ ಪ್ರಕ್ರಿಯೆ ಅನುಸರಿಸದೆ ನಿರಾಶ್ರಿತರ ಗಡಿಪಾರು ಮಾಡಲಾಗದು: ರೋಹಿಂಗ್ಯಾಗಳ ಅರ್ಜಿ ವಿಲೇವಾರಿ ಮಾಡಿದ ಸುಪ್ರೀಂ

ರೋಹಿಂಗ್ಯಾ ನಿರಾಶ್ರಿತರ ಗಡಿಪಾರಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ನ್ಯಾಯಾಲಯಕ್ಕೆ ಸಹಾಯ ನೀಡಲು ಮಾಡಿದ ಮನವಿಯನ್ನು ಈ ಹಿಂದೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಸೂಕ್ತ ಪ್ರಕ್ರಿಯೆ ಅನುಸರಿಸದೆ ನಿರಾಶ್ರಿತರ ಗಡಿಪಾರು ಮಾಡಲಾಗದು: ರೋಹಿಂಗ್ಯಾಗಳ ಅರ್ಜಿ ವಿಲೇವಾರಿ ಮಾಡಿದ ಸುಪ್ರೀಂ

ಮ್ಯಾನ್ಮಾರ್‌ಗೆ ಗಡಿಪಾರು ಪ್ರಕ್ರಿಯೆ ಆರಂಭಿಸುವುದಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಹೇಳಿದ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ 150 ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್‌ ಗುರುವಾರ ವಿಲೇವಾರಿ ಮಾಡಿತು. (ಮೊಹಮ್ಮದ್ ಸಲೀಮುಲ್ಲಾ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ)

ರೋಹಿಂಗ್ಯಾ ನಿರಾಶ್ರಿತ ಮೊಹಮ್ಮದ್ ಸಲೀಮುಲ್ಲಾ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್‌ ಅವರಿದ್ದ ಪೀಠ ಸೂಕ್ತ ಪ್ರಕ್ರಿಯೆ ಅನುಸರಿಸದೆ ಯಾವುದೇ ನಿರಾಶ್ರಿತರನ್ನು ಗಡಿಪಾರು ಮಾಡಲಾಗದು ಎಂದು ಸ್ಪಷ್ಟಪಡಿಸಿತು.

ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಮೂಲಕ ಅನೌಪಚಾರಿಕ ಶಿಬಿರಗಳಲ್ಲಿ ಇರಿಸಲಾಗಿರುವ ರೋಹಿಂಗ್ಯಾಗಳಿಗೆ ನಿರಾಶ್ರಿತರ ಗುರುತಿನ ಚೀಟಿಗಳನ್ನು ತ್ವರಿತವಾಗಿ ಒದಗಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶಿಸುವಂತೆ ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಕೋರಲಾಗಿತ್ತು.

ಸಂವಿಧಾನದ ವಿಧಿ 14 ಮತ್ತು ಆರ್ಟಿಕಲ್ 21ರ ಅಡಿ ಒದಗಿಸಲಾದ ನಿರಾಶ್ರಿತರ ಹಕ್ಕುಗಳ ಸಂರಕ್ಷಣೆ ಮಾಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಮ್ಯಾನ್ಮಾರ್‌ನಲ್ಲಿ ತಮ್ಮ ಸಮುದಾಯದ ವಿರುದ್ಧ ನಡೆದ ವ್ಯಾಪಕ ಹಿಂಸಾಚಾರ ಮತ್ತು ತಾರತಮ್ಯದಿಂದಾಗಿ ಪಲಾಯನ ಮಾಡಿದ ರೋಹಿಂಗ್ಯಾಗಳು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅರ್ಜಿಯನ್ನು ಬಲವಾಗಿ ವಿರೋಧಿಸಿದರು. ತಾವು ನಿರಾಶ್ರಿತರು ಎಂಬ ಅರ್ಜಿದಾರರ ಹಕ್ಕಿಗೆ ಅವರು ಪ್ರತಿರೋಧ ಒಡ್ಡಿದರು. ಅವರು ಅಕ್ರಮ ವಲಸಿಗರಾಗಿದ್ದು ಕಾನೂನಿನ ಪ್ರಕಾರ ಅಸ್ತಿತ್ವದಲ್ಲಿರುವ ಕಾರ್ಯವಿಧಾನದ ಮೂಲಕ ಗಡಿಪಾರು ಮಾಡಲಾಗುವುದು. ಮ್ಯಾನ್ಮಾರ್‌ ದೃಢೀಕರಿಸಿದರೆ ಅವರನ್ನು ಗಡಿಪಾರು ಮಾಡಲಾಗುವುದು ಎಂದರು.

ಆದರೆ ಜಮ್ಮುವಿನಲ್ಲಿ ಬಂಧಿಸಲಾಗಿರುವ ರೋಹಿಂಗ್ಯಾ ನಿರಾಶ್ರಿತರನ್ನು ಗಡಿಪಾರು ಮಾಡುವ ಸಂಬಂಧ ಕೇಂದ್ರ ಯಾವುದೇ ಕ್ರಮ ಜಾರಿಗೊಳಿಸುವುದನ್ನು ತಪ್ಪಿಸಬೇಕು ಎಂದು ಅರ್ಜಿದಾರರು ಕೋರಿದರು.

"ಅವರ ಪಲಾಯನಕ್ಕೆ ಕಾರಣವಾದ ದೇಶವೇ ಅವರನ್ನು ಮರಳಿ ಬಯಸುತ್ತದೆ ಎನ್ನುವ ಅಂಶವೊಂದೇ ಅವರನ್ನು ಮರಳಿ ಕಳುಹಿಸಲು ಕಾರಣವಾಗಲಾರದು. ಅವರು ಅಲ್ಲಿ ಅಪಾಯಕ್ಕೆ ಒಳಗಾಗುತ್ತಾರೆ ಎಂದು ನಮಗೆ ತಿಳಿದೂ ಅವರನ್ನು ವಾಪಸ್‌ ಕಳುಹಿಸಲು ಸಾಧ್ಯವಿಲ್ಲ. ಇದು ಒತ್ತಾಯಪೂರ್ವಕವಾಗಿ ನಿರಾಶ್ರಿತರನ್ನು ಮರಳಿಸಬಾರದು ಎನ್ನುವ ತತ್ವಕ್ಕೆ ಎರವಾಗುತ್ತದೆ" ಎಂದು ಭೂಷಣ್‌ ವಾದಿಸಿದರು.

Kannada Bar & Bench
kannada.barandbench.com