ಯಾವುದೇ ವಿಳಂಬ ಮಾಡದೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಶಾಸಕಾಂಗ ಸಭೆಗೆ ಚುನಾವಣೆ ನಡೆಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಪ್ಯಾಂಥರ್ಸ್ ಪಕ್ಷದ ನಾಯಕರಾದ (ಜೆಕೆಎನ್‌ಪಿಪಿ) ಮುಖಂಡರಾದ ಮಂಜು ಸಿಂಗ್ ಮತ್ತು ಹರ್ಷ್ ದೇವ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಮಂಜು ಸಿಂಗ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಚುನಾವಣೆ ವಿಳಂಬಗೊಳಿಸುವ ಮೂಲಕ ಜಮ್ಮು ಕಾಶ್ಮೀರದ ಜನರು ಸಂವಿಧಾನದ ಮೂಲ ರಚನೆಯ ಭಾಗವಾಗಿ ಚುನಾಯಿತ ಪ್ರತಿನಿಧಿಗಳನ್ನು ಹೊಂದುವ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ರಾಜೀನಾಮೆ ಸಲ್ಲಿಸಿದ ನಂತರ ರಾಜ್ಯ ವಿಧಾನಸಭೆ ಜೂನ್ 2018ರಲ್ಲಿ ಅಮಾನತುಗೊಂಡು ನವೆಂಬರ್ 2018ರಲ್ಲಿ ವಿಸರ್ಜನೆಯಾಯಿತು. ಮಾರ್ಚ್ 2019 ರಲ್ಲಿ, ಮುಖ್ಯ ಚುನಾವಣಾ ಆಯುಕ್ತರ ನೇತೃತ್ವದ ಪೂರ್ಣ ಆಯೋಗವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಶಾಸಕಾಂಗ ಸಭೆಗೆ ಚುನಾವಣೆಗಳನ್ನು ನಡೆಸುವ ಉದ್ದೇಶಕ್ಕಾಗಿ ಅಂದಿನ ಪರಿಸ್ಥಿತಿ ಪರಿಶೀಲಿಸಲು ಭೇಟಿ ನೀಡಿತು. ಬಿಜೆಪಿ ಹೊರತುಪಡಿಸಿ ಜಮ್ಮು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಎಲ್ಲಾ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಚುನಾಯಿತ ಸರ್ಕಾರವನ್ನು ತಕ್ಷಣವೇ ಮರುಸ್ಥಾಪಿಸಲು ಒಲವು ತೋರಿದವು. ಆದರೆ ಚುನಾವಣಾ ಆಯೋಗ ಅದಕ್ಕೆ ಸ್ಪಂದಿಸದೇ ಕೇಂದ್ರ ಸರ್ಕಾರಕ್ಕೆ ಅನುಕೂಲವಾಗುವಂತೆ ವರ್ತಿಸಿತು ಎಂದು ಅರ್ಜಿಯಲ್ಲಿ ದೂರಲಾಗಿದೆ.
ಚುನಾಯಿತ ಪ್ರತಿನಿಧಿಗಳಿಂದ ಪ್ರತಿನಿಧಿಸಿಕೊಳ್ಳುವ ಹಕ್ಕನ್ನು ಅರ್ಜಿದಾರರು ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಜನತೆಗೆ ನಿರಾಕರಿಸಲಾಗಿದೆ.
ಸಂವಿಧಾನದ ಮೂಲಭೂತ ರಚನೆಯ ಭಾಗವಾಗಿ ಕೇಶವಾನಂದ ಭಾರತಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾರಿಗೆ ತಂದ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳನ್ನು ಇದು ಉಲ್ಲಂಘಿಸುತ್ತದೆ.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ (ಬಿಜೆಪಿ) ರಾಜ್ಯದಲ್ಲಿ ಹಿಂಬಾಗಿಲಿನಿಂದ ಆಡಳಿತ ನಡೆಸಲಿ ಎಂಬ ಏಕೈಕ ಉದ್ದೇಶದಿಂದ ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ಚುನಾವಣೆಯನ್ನು ವಿಳಂಬಗೊಳಿಸುತ್ತಿದೆ.
ಚುನಾವಣಾ ಆಯೋಗ ಹಿಂದೆ ಅಸ್ತಿತ್ವದಲ್ಲಿದ್ದ ರಾಜ್ಯವನ್ನು ಕಳಚಿ ಅದನ್ನು ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕೆ ಇಳಿಸುವುದೂ ಸೇರಿದಂತೆ ಏಕಪಕ್ಷೀಯ ನಿರ್ಧಾರ ಕೈಗೊಂಡು ಆ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸೌಹಾರ್ದತೆ ಮರಳಲು ದೀರ್ಘಾವಧಿಯ ಅವಕಾಶ ಬೇಕು ಎನ್ನುತ್ತಾ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷಕ್ಕೆ ಸಹಾಯ ಮಾಡುತ್ತಿದೆ.
ರಾಜ್ಯ ವಿಧಾನಸಭೆಯಲ್ಲಿ ಸಂಸತ್ತಿನ ಚುನಾವಣೆ ನಡೆಯುತ್ತಿರುವಾಗ ವಿಧಾನಸಭೆಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ವಿಫಲವಾಗಿರುವುದು ಮನಸೋಇಚ್ಛೆಯ, ಸಾಂವಿಧಾನಿಕ ಕರ್ತವ್ಯಗಳ ಲೋಪದಿಂದ ತುಂಬಿದ್ದು ಇದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಹಿಂಬಾಗಿಲ ಮೂಲಕ ರಾಜ್ಯದಲ್ಲಿ ಆಡಳಿತ ಮುಂದುವರೆಸಲು ಅನುವು ಮಾಡಿಕೊಟ್ಟಿದೆ.