SG Tushar Mehta at the UN
SG Tushar Mehta at the UN 
ಸುದ್ದಿಗಳು

ಕಾಶ್ಮೀರ ದೇಶದ ಭಾಗ, ನಾಗರಿಕ ಸಂಘಟನೆಗಳು ಕಾನೂನು ರೀತ್ಯಾ ಕೆಲಸ ಮಾಡಬಹುದು: ಯುಎನ್‌ಎಚ್‌ಆರ್‌ಸಿಯಲ್ಲಿ ಎಸ್‌ಜಿ ಮೆಹ್ತಾ

Bar & Bench

ಭಾರತದಲ್ಲಿನ ಮಾನವ ಹಕ್ಕುಗಳ ರಕ್ಷಣೆ ಕಾರ್ಯ ದೇಶದ ಕಾನೂನಿಗೆ ಅನುಗುಣವಾಗಿ ಇರಬೇಕು ಎಂದು ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ.

ಸ್ವಿಜರ್‌ಲೆಂಡ್‌ನ ಪ್ರಮುಖ ನಗರ ಜಿನಿವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ (ಯುಎನ್‌ಎಚ್ಆರ್‌ಸಿ) 41ನೇ ಜಾಗತಿಕ ನಿಯತಕಾಲೀನ ಪರಾಮರ್ಶೆ (ಯುಪಿಆರ್‌) ಅಧಿವೇಶನದಲ್ಲಿ ಭಾರತದ ನಿಯೋಗದ ನೇತೃತ್ವ ವಹಿಸಿ ಅವರು ಮಾತನಾಡಿದರು.

“ನಾಗರಿಕ ಸಮಾಜ ಸಂಘಟನೆಗಳು ಭಾರತದಲ್ಲಿ ಕಾನೂನಿನ ಅನ್ವಯ ಮಾತ್ರ ಕಾರ್ಯನಿರ್ವಹಿಸಬಹುದಾಗಿದೆ” ಎಂದು ಅವರು ಹೇಳಿದರು.

ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಮಾನವ ಹಕ್ಕುಗಳ ರಕ್ಷಕರು, ನಾಗರಿಕ ಸಮಾಜದ ಸಂಘಟನೆಗಳು ಹಾಗೂ ಪತ್ರಕರ್ತರ ಪಾತ್ರವನ್ನು ಭಾರತ ಮೆಚ್ಚುತ್ತದೆ ಎಂದು ಎಸ್‌ಜಿ ಮೆಹ್ತಾ ತಿಳಿಸಿದರು.

"ಮಾನವ ಹಕ್ಕುಗಳ ರಕ್ಷಕರು, ಕಾರ್ಯಕರ್ತರು, ಪತ್ರಕರ್ತರು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ನಡೆಯುವ ಕಿರುಕುಳ, ಅವಮಾನಗಳು, ಸುಳ್ಳು ಸುದ್ದಿ ಹಾಗೂ ಹಿಂಸಾತ್ಮಕ ದಾಳಿಯನ್ನು ಭಾರತ ಯಾವಾಗಲೂ ಖಂಡಿಸುತ್ತದೆ" ಎಂದು ಅವರು ಹೇಳಿದರು.

ಭಾಷಣದ ಪ್ರಮುಖಾಂಶಗಳು

  • ಜಮ್ಮು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಸದಾ ಭಾರತದ ಅವಿಭಾಜ್ಯ ಅಂಗ.

  • ಸಾಂವಿಧಾನಿಕ ಬದಲಾವಣೆ ಹಾಗೂ ಮರು ರಚನೆಯ ನಂತರ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಇತರೆ ರಾಜ್ಯಗಳಂತೆ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯವಾಗಿದೆ. ಈ ಬದಲಾವಣೆಯಿಂದಾಗಿ ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ನ ಎಲ್ಲಾ ಜನರಿಗೆ ಉತ್ತಮ ಅವಕಾಶ ದೊರೆತಿದೆ.

  • ಕೇಂದ್ರದ ಕಾನೂನುಗಳು ದುರ್ಬಲ ವರ್ಗಗಳ ಪರವಾಗಿ ದಿಟ್ಟ ಹೆಜ್ಜೆ ಇರಿಸಲು, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಸಾಕಾರಗೊಳಿಸಲು, ತರತಮ ರಹಿತ ಉತ್ತರಾಧಿಕಾರ ಕಾನೂನು, ಕೌಟುಂಬಿಕ ಹಿಂಸಾಚಾರದ ವಿರುದ್ಧದ ರಕ್ಷಣೆ, ಮಹಿಳಾ ಸಬಲೀಕರಣ, ಸಲಿಂಗ ಸಂಬಂಧಗಳ ನಿರಪರಾಧಗೊಳಿಸುವಿಕೆ, ಲೈಂಗಿಕ ಅಲ್ಪಸಂಖ್ಯಾತರಿಗೆ ಹಕ್ಕುಗಳನ್ನು ಎತ್ತಿಹಿಡಿಯುವ ಸಕಾರಾತ್ಮಕ ಕ್ರಿಯೆಗಳಿಗೆ ಕಾರಣವಾಗಿವೆ.  

  • ಭಾರತವು ಬಹುಭಾಷಾ, ಬಹು-ಜನಾಂಗೀಯ ಮತ್ತು ಬಹು-ಧರ್ಮೀಯ ಸಮಾಜವಾಗಿದ್ದು ನಾವು ನಮ್ಮ ವೈವಿಧ್ಯತೆಯನ್ನು ಗೌರವಿಸುವುದಷ್ಟೇ ಅಲ್ಲ ಆಚರಿಸುತ್ತೇವೆ ಕೂಡ.

  • ಭಾರತದ ವಿವಿಧ ರಾಜ್ಯಗಳು ಸಂವಿಧಾನದ ಅಡಿಯಲ್ಲಿ ಧರ್ಮದ ಸ್ವಾತಂತ್ರ್ಯ ಒದಗಿಸಲು ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯನ್ನು ಜಾರಿಗೊಳಿಸಿವೆ. ಅಂತಹ ಶಾಸನಗಳು ಬಲ, ಪ್ರಚೋದನೆ, ಆಮಿಷ ಅಥವಾ ಮೋಸದ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳುವುದನ್ನು ನಿರ್ಬಂಧಿಸುತ್ತವೆ ಮತ್ತು ನಿಷೇಧಿಸುತ್ತವೆ. ಅವುಗಳನ್ನು ಮತಾಂತರ-ವಿರೋಧಿ ಕಾನೂನುಗಳೆಂದು ಕರೆಯುವುದು ತಪ್ಪಾಗುತ್ತದೆ. ರಾಜ್ಯಗಳ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಗಳ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.