ಸುಪ್ರೀಂಕೋರ್ಟ್ ಪಾತ್ರ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವುದೇ ವಿನಾ ದುರ್ಬಲಗೊಳಿಸುವುದಲ್ಲ ಎಂದ ವಿಶ್ವಸಂಸ್ಥೆ ತಜ್ಞರು

ಈ ಹಿಂದೆ ವಸತಿ ಹಕ್ಕಿನ ರಕ್ಷಣೆಗೆ ಬದ್ಧವಾಗಿದ್ದ ಭಾರತದ ಸರ್ವೋಚ್ಚ ನ್ಯಾಯಾಲಯ ಈಗ ಜನರ ಒಕ್ಕಲೆಬಿಸುವಿಕೆಯನ್ನು ಬೆಂಬಲಿಸುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಪಾತ್ರ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವುದೇ ವಿನಾ ದುರ್ಬಲಗೊಳಿಸುವುದಲ್ಲ ಎಂದ ವಿಶ್ವಸಂಸ್ಥೆ ತಜ್ಞರು

ಹರಿಯಾಣದ ಫರೀದಾಬಾದ್‌ ಜಿಲ್ಲೆಯ ಖೋರಿಗಾಂವ್‌ನಿಂದ 1 ಲಕ್ಷಕ್ಕೂ ಹೆಚ್ಚು ಜನರನ್ನು ಒಕ್ಕಲೆಬ್ಬಿಸುವುದನ್ನು ಭಾರತ ತಡೆಯಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಆಗ್ರಹಿಸಿದ್ದಾರೆ.

ಅರಾವಳಿ ಪ್ರದೇಶದ ಅರಣ್ಯಭೂಮಿಯನ್ನು ಅತಿಕ್ರಮಣ ಮಾಡಿದ ಆರೋಪದ ಮೇರೆಗೆ ಖೋರಿಗಾಂವ್‌ ಮನೆಗಳನ್ನು ಜುಲೈ 19ರೊಳಗೆ ಸಂಪೂರ್ಣ ತೆರವುಗೊಳಿಸುವಂತೆ ಕಳೆದ ಗುರುವಾರ ಸುಪ್ರೀಂಕೋರ್ಟ್‌ ಸೂಚಿಸಿತ್ತು. ಈ ಪ್ರದೇಶದಲ್ಲಿ 2000ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿದ್ದನ್ನು ಪ್ರಶ್ನಿಸಿ ಅಲ್ಲಿನ ನಿವಾಸಿಗಳು ಅರ್ಜಿ ಸಲ್ಲಿಸಿದ ಬಳಿಕ ಆದೇಶ ಹೊರಬಿದ್ದಿತ್ತು.

ಅಲ್ಲಿನ 10,000 ಕ್ಕೂ ಹೆಚ್ಚು ಮನೆಗಳ ನೆಲಸಮ ತಡೆಯಲು ಸುಪ್ರೀಂ ಕೋರ್ಟ್ ಜುಲೈ 17ರಂದು (ಶನಿವಾರ) ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ವಿಶೇಷ ವರದಿಗಾರರು ಮತ್ತು ಮಾನವ ಹಕ್ಕುಗಳ ತಜ್ಞರಾದ ಬಾಲಕೃಷ್ಣನ್ ರಾಜಗೋಪಾಲ್, ಮೇರಿ ಲಾವ್ಲರ್‌, ಸಿಸಿಲಿಯಾ ಜಿಮೆನೆಜ್-ಡಮರಿ, ಫರ್ನಾಂಡ್ ಡಿ ವಾರೆನ್ನೆಸ್, ಪೆಡ್ರೊ ಅರೋಜೊ-ಅಗುಡೊ, ಆಲಿವಿಯರ್ ಡಿ ಷುಟ್ಟರ್ ಮತ್ತು ಕೌಂಬೌ ಬೋಲಿ ಬ್ಯಾರಿ ಅವರು ಹೇಳಿಕೆ ನೀಡಿದ್ದಾರೆ.

Also Read
ಮತದಾನ ಹಿಂಸಾಚಾರದ ಬಳಿಕ ಜನರ ಆಂತರಿಕ ಸ್ಥಳಾಂತರ: ಪಶ್ಚಿಮ ಬಂಗಾಳ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್

ತಜ್ಞರ ಅಭಿಮತವೇನು?

  • ಈ ಹಿಂದೆ ವಸತಿ ಹಕ್ಕಿನ ರಕ್ಷಣೆಗೆ ಕಟಿಬದ್ಧವಾಗಿದ್ದ ಭಾರತದ ಸರ್ವೋಚ್ಚ ನ್ಯಾಯಾಲಯ ಈಗ ಜನರ ಒಕ್ಕಲೆಬಿಸುವಿಕೆಯನ್ನು ಬೆಂಬಲಿಸುತ್ತಾ ಖೋರಿಗಾಂವ್‌ ಪ್ರಕರಣದಂತೆಯೇ ಜನರ ಆಂತರಿಕ ಪಲ್ಲಟಕ್ಕೆ ಅಷ್ಟೇ ಅಲ್ಲದೆ ವಸತಿಹೀನರನ್ನಾಗಿಸುವ ಅಪಾಯಕ್ಕೆ ಸಿಲುಕಿಸಲು ಮುಂದಾಗುತ್ತಿದೆ.

  • ಸುಪ್ರೀಂಕೋರ್ಟ್‌ ಪಾತ್ರ ಕಾನೂನುಗಳನ್ನು ಎತ್ತಿಹಿಡಿಯುವುದು ಮತ್ತು ಅವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಮಾನವ ಹಕ್ಕು ಮಾನದಂಡಗಳ ಬೆಳಕಿನಲ್ಲಿ ವ್ಯಾಖ್ಯಾನಿಸುವುದೇ ವಿನಾ ದುರ್ಬಲಗೊಳಿಸುವುದಲ್ಲ.

  • ಇತರ ದೇಶೀಯ ಕಾನೂನಾತ್ಮಕ ಅವಶ್ಯಕತೆಗಳ ಜೊತೆಗೆ ಪ್ರಕರಣದಲ್ಲಿ 2013ರ ಭೂಸ್ವಾಧೀನ ಕಾಯಿದೆಯ ಧ್ಯೇಯೋದ್ದೇಶಗಳನ್ನು ಈಡೇರಿಸಿಲ್ಲ.

  • ಕೋವಿಡ್‌ ಬಿಕ್ಕಟ್ಟಿನ ನಡುವೆ ಜನರನ್ನು ಒಕ್ಕಲೆಬ್ಬಿಸುತ್ತಿರುವುದು ಅಲ್ಲಿನ ಜನರ ಸಂಕಷ್ಟಗಳನ್ನು ಹೆಚ್ಚಿಸಿದೆ.

  • 2022ರ ವೇಳೆಗೆ ವಸತಿಹೀನತೆಯನ್ನು ತೊಡೆದು ಹಾಕುವುದಾಗಿ ಕೇಂದ್ರ ಸರ್ಕಾರ ನೀಡಿತ್ತು. ಈ ಹಿನ್ನೆಲೆಯಲ್ಲಿ ನಿರ್ಧಾರವನ್ನು ಮರುಪರಿಶೀಲಿಸಬೇಕು.

  • ಅಲ್ಪಸಂಖ್ಯಾತ ಮತ್ತು ತಳ ಸಮುದಾಯಗಳಿಂದ ಬಂದಿರುವ 100,000 ಜನರ ಮನೆಗಳನ್ನು ಉಳಿಸಬೇಕಿದ್ದು ನಿವಾಸಿಗಳನ್ನು ಕೋವಿಡ್‌ ಸಂದರ್ಭದಲ್ಲಿ ಸುರಕ್ಷಿತವಾಗಿರಿಸುವುದು ಬಹುಮುಖ್ಯ.

  • ಲಾಕ್‌ಡೌನ್ ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಕೂಡ ತೊಂದರೆ ಉಂಟು ಮಾಡಿದೆ. ಈ ಬಿಕ್ಕಟ್ಟಿನ ನಡುವೆ ಒಕ್ಕಲೆಬ್ಬಿಸುವಿಕೆಯಿಂದಾಗಿ ಸುಮಾರು 20,000 ಕ್ಕೂ ಹೆಚ್ಚು ಮಕ್ಕಳು, ಗರ್ಭಿಣಿಯರು ಅಥವಾ ಬಾಣಂತಿಯರು ತೊಂದರೆಗೆ ಸಿಲುಕುತ್ತಾರೆ. ಬಹುಪಾಲು ಮಕ್ಕಳು ಶಾಲೆಯಿಂದ ಹೊರಗುಳಿಯಬಹುದು.

  • ಹಲವು ವಾರಗಳ ಹಿಂದೆಯೇ ಇಲ್ಲಿ ನೀರು ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ಹತ್ತಿಕ್ಕಿ ನಿರಂಕುಶ ರೀತಿಯಲ್ಲಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಶಾಂತಿಯುತ ಸಭೆ ನಡೆಸಲು ಕೂಡ ಅವಕಾಶ ಮಾಡಿಕೊಡುತ್ತಿಲ್ಲ.

  • ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯ ಭಾಗವಾಗಿರುವ ಭಾರತ ಸ್ಥಳಾಂತರ, ಒಕ್ಕಲೆಬ್ಬಿಸುವಿಕೆ ಹಾಗೂ ಆಂತರಿಕ ಪಲ್ಲಟದಂತಹ ಸಂದರ್ಭದಲ್ಲಿ ಅದರಲ್ಲಿಯೂ ಸರ್ಕಾರಿ ಭೂಮಿ ವಿಚಾರದಲ್ಲಿ ಅಂತರರಾಷ್ಟ್ರೀಯ ಮಾನವಹಕ್ಕುಗಳ ಮಾನದಂಡಗಳಿಗೆ ಸಂಪೂರ್ಣ ಬದ್ಧವಾಗಿರಬೇಕು.

  • ಸಮರ್ಪಕ ಮತ್ತು ಸಮಯೋಚಿತ ಪರಿಹಾರ ಒದಗಿಸದೆ, ಕುಂದುಕೊರತೆ ಹೋಗಲಾಡಿಸದೆ ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸಬಾರದು.

ಖೋರಿಗಾಂವ್‌ ಮನೆಗಳನ್ನು ನೆಲಸಮಗೊಳಿಸುವಂತೆ ಸುಪ್ರೀಂಕೋರ್ಟ್‌ ನೀಡಿದ ಆದೇಶದೊಂದಿಗೆ ಫರೀದಾಬಾದ್‌ ಪುರಸಭೆ ತೆರವು ಕಾರ್ಯ ಮುಂದುವರೆಸಿರುವುದರ ನಡುವೆ ಪ್ರಿವಾಸಿ ಸಂಘನ್ ಕಲ್ಯಾಣ ಸಮಿತಿ ಮತ್ತೊಂದು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಸೋಮವಾರ (ನಾಳೆ) ಅರ್ಜಿಯ ವಿಚಾರಣೆ ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com