Partha Chatterjee with Calcutta High Court  facebook
ಸುದ್ದಿಗಳು

ಶಿಕ್ಷಕರ ನೇಮಕಾತಿ ಹಗರಣ: ಮಾಜಿ ಸಚಿವ ಪಾರ್ಥ ಚಟರ್ಜಿ ಜಾಮೀನು ಅರ್ಜಿ ಕುರಿತು ಭಿನ್ನ ತೀರ್ಪಿತ್ತ ಕಲ್ಕತ್ತಾ ಹೈಕೋರ್ಟ್

ಇಬ್ಬರು ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಚಟರ್ಜಿ ಸೇರಿದಂತೆ ಐವರು ಆರೋಪಿಗಳ ಜಾಮೀನು ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುವಂತೆ ನ್ಯಾಯಾಲಯ ಆದೇಶಿಸಿದೆ.

Bar & Bench

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹಾಗೂ ಇತರ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ವೇಳೆ ಕಲ್ಕತ್ತಾ ಹೈಕೋರ್ಟ್‌ ವಿಭಾಗೀಯ ಪೀಠ ಬುಧವಾರ ಭಿನ್ನ ತೀರ್ಪು ನೀಡಿತು.

ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದ್ದು ಪ್ರಕರಣಗಳಲ್ಲಿ ನ್ಯಾಯಮೂರ್ತಿಗಳಾದ ಅರಿಜಿತ್ ಬ್ಯಾನರ್ಜಿ ಮತ್ತು ಅಪೂರ್ಬ ಸಿನ್ಹಾ ರೇ ಅವರಿದ್ದ ಪೀಠದೆದುರು ಒಟ್ಟು 14 ಜಾಮೀನು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆರೋಪಿಗಳಲ್ಲಿ ಪಶ್ಚಿಮ ಬಂಗಾಳದ ಕೇಂದ್ರೀಯ ಶಾಲಾ ಸೇವಾ ಆಯೋಗ (WBCSSC) ಮತ್ತು ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿ (WBBSE) ಯ ಹಿರಿಯ ಅಧಿಕಾರಿಗಳು ಸೇರಿದ್ದಾರೆ.

ನ್ಯಾಯಮೂರ್ತಿ ಬ್ಯಾನರ್ಜಿ ಅವರು ಎಲ್ಲಾ 14 ಅರ್ಜಿಗಳಿಗೆ ಸಂಬಂಧಿಸಿದಂತೆ  ಜಾಮೀನು ನೀಡಲು ನಿರ್ಧರಿಸಿದರೆ, ನ್ಯಾಯಮೂರ್ತಿ ರೇ ಚಟರ್ಜಿ ಅವರು  5 ಆರೋಪಿಗಳಿಗೆ ಜಾಮೀನು ನಿರಾಕರಿಸಿದರು.

ಇಬ್ಬರು ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಚಟರ್ಜಿ ಸೇರಿದಂತೆ ಐವರು ಆರೋಪಿಗಳ ಜಾಮೀನು ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಅರ್ಹರಲ್ಲದ ಅಭ್ಯರ್ಥಿಗಳಿಗೆ ಉದ್ಯೋಗದ ಭರವಸೆ ನೀಡಿ ಆರೋಪಿಗಳು ಭಾರೀ ಮೊತ್ತದ ಹಣ ಸಂಗ್ರಹಿಸಿದ್ದಾರೆ ಎಂಬುದು ಸಿಬಿಐ ವಾದವಾಗಿತ್ತು.

ನ್ಯಾಯಮೂರ್ತಿ ಬ್ಯಾನರ್ಜಿ ಅವರು ತಮ್ಮ ತೀರ್ಪಿನಲ್ಲಿ ಆರೋಪಿಯು ತನ್ನ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿಲ್ಲ ಎಂದು ಕಂಡುಬರದೇ ಇದ್ದರೆ, ಅವರಿಗೆ ಜಾಮೀನು ನಿರಾಕರಿಸಬಾರದು ಎಂದು ಒತ್ತಿ ಹೇಳಿದರು. ಪಾರ್ಥ ಚಟರ್ಜಿ ಅವರು ಸೆಪ್ಟೆಂಬರ್ 22, 2022 ರಿಂದ ಬಂಧನದಲ್ಲಿದ್ದರು ಎಂಬ ಅಂಶವನ್ನು ಗಮನಿಸಿ ನ್ಯಾ. ಬ್ಯಾನರ್ಜಿ ಜಾಮೀನು ನೀಡಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಆರೋಪಿಗಳು ಪ್ರಭಾವಿಗಳಾಗಿದ್ದು ಕಾನೂನು ಕ್ರಮಕ್ಕೆ ಅನುಮತಿ ನಿರಾಕರಿಸುವ ಮೂಲಕ ರಾಜ್ಯ ಸರ್ಕಾರ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ನ್ಯಾಯಮೂರ್ತಿ ರೇ ಟೀಕಿಸಿದರು. ಚಟರ್ಜಿ ಅವರ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ್ದರೂ, ಇತರ ಆರೋಪಿಗಳಿಗೆ ಸಂಬಂಧಿಸಿದಂತೆ ಅನುಮತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಿಲ್ಲ ಎಂದು ನ್ಯಾ. ರೇ ತಿಳಿಸಿದರು.

ಹಿನ್ನೆಲೆ

2016ರಲ್ಲಿ 24,000 ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಯಲ್ಲಿ 23 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ಓಎಂಆರ್ ಶೀಟುಗಳನ್ನು ತಪ್ಪಾಗಿ ಮೌಲ್ಯಮಾಪನ ಮಾಡುವ ಮೂಲಕ ಹಲವು ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಹೀಗಾಗಿ 24,000 ಸಾವಿರ ಹುದ್ದೆಗಳನ್ನು ರದ್ದುಪಡಿಸಿ ಕಲ್ಕತ್ತಾ ಹೈಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ಮಹತ್ವದ ತೀರ್ಪು ನೀಡಿತ್ತು.