Mandeep Punia and Delhi Police
Mandeep Punia and Delhi Police 
ಸುದ್ದಿಗಳು

[ರೈತರ ಪ್ರತಿಭಟನೆ] ಪತ್ರಕರ್ತರ ಗುರುತಿನ ಚೀಟಿ ಹೊಂದಿಲ್ಲ ಎಂಬುದು ಬಂಧನಕ್ಕೆ ಸಕಾರಣವಲ್ಲ: ಮನ್‌ದೀಪ್‌ ಪುನಿಯಾ

Bar & Bench

ರೈತರ ಪ್ರತಿಭಟನೆ ವರದಿ ಮಾಡಲು ತೆರಳಿದ್ದ ಹವ್ಯಾಸಿ (ಫ್ರೀಲಾನ್ಸ್‌) ಪತ್ರಕರ್ತ ಮನ್‌ದೀಪ್‌ ಪುನಿಯಾ ಅವರು ದೆಹಲಿಯ ಸಿಂಘು ಗಡಿಯಲ್ಲಿ ಜನವರಿ 30ರಂದು ಪೊಲೀಸರಿಂದ ಬಂಧನಕ್ಕೆ ಒಳಪಟ್ಟಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕರಕರಡೋಮ ನ್ಯಾಯಾಲಯದ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅಖಿಲ್‌ ಮಲಿಕ್‌ ಅವರು ಭಾನುವಾರ ಪುನಿಯಾ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿದ್ದು, ತನಿಖಾಧಿಕಾರಿ ಹಾಜರಾಗದ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಸೋಮವಾರ ಔಪಚಾರಿಕ ಪ್ರತಿಕ್ರಿಯೆ ಸಲ್ಲಿಸುವಂತೆ ತನಿಖಾಧಿಕಾರಿಗೆ ಸೂಚಿಸಿರುವ ನ್ಯಾಯಾಲಯವು ನಿರ್ದಿಷ್ಟ ನ್ಯಾಯಾಲಯದ ಮುಂದೆ ಪ್ರಕರಣವನ್ನು ವಿಚಾರಣೆಗೆ ಒಳಪಡಿಸುವಂತೆ ಪೀಠ ಸೂಚಿಸಿದೆ.

“ಎಸ್‌ಎಚ್‌ಒ ಮೂಲಕ ತನಿಖಾಧಿಕಾರಿಯು ಔಪಚಾರಿಕ ಪ್ರತಿಕ್ರಿಯೆ ಸಲ್ಲಿಸಬೇಕು. ಫೆಬ್ರವರಿ 1ರಂದು ನಿರ್ದಿಷ್ಟ ನ್ಯಾಯಾಲಯದ ಮುಂದೆ ಪ್ರಕರಣ ವಿಚಾರಣೆಗೆ ಇಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ದೆಹಲಿಯ ರೋಹಿಣಿಯಲ್ಲಿರುವ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮುಂದೆ ಪ್ರಕರಣವನ್ನು ನಿಗದಿಗೊಳಿಸಲಾಗಿದ್ದು, ಅಲ್ಲಿಯ ತನಕ ಪತ್ರಕರ್ತ ಪುನಿಯಾ ನ್ಯಾಯಾಂಗ ವಶದಲ್ಲಿರಲಿದ್ದಾರೆ.

ಆರೋಪಿಯು ಹವ್ಯಾಸಿ ಪತ್ರಕರ್ತರಾಗಿದ್ದು, ಪತ್ರಕರ್ತರ ಗುರುತಿನ ಚೀಟಿ ಹೊಂದಿಲ್ಲ ಎಂದ ಮಾತ್ರಕ್ಕೆ ಬಂಧಿಸಲಾಗದು.
ಮನ್‌ದೀಪ್ ಪುನಿಯಾ

ಮನ್‌ದೀಪ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 186 (ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ), 353 (ಕರ್ತವ್ಯನಿರತ ಅಧಿಕಾರಿಯ ಮೇಲೆ ದಾಳಿ), 332 (ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಭಂಗ ಉಂಟುಮಾಡಲು ಸ್ವಯಂಪ್ರೇರಿತವಾಗಿ ಹಾನಿ ಮಾಡಿಕೊಳ್ಳುವುದು) ಅಡಿ ದೂರು ದಾಖಲಿಸಲಾಗಿದೆ. ಜನವರಿ 31ರ ಮಧ್ಯರಾತ್ರಿ 1ರಲ್ಲಿ ಮನ್‌ದೀಪ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಕರ್ತವ್ಯ ನಿರ್ಹಿಸುತ್ತಿದ್ದಾಗ ತನ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪುನಿಯಾ ತಮ್ಮ ಜಾಮೀನು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ದೂರುದಾರರು ಮತ್ತು ಸಂತ್ರಸ್ತ ಇಬ್ಬರೂ ಪೊಲೀಸ್‌ ಅಧಿಕಾರಿಗಳೇ ಆಗಿದ್ದು, ಏಳು ತಾಸು ತಡವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪುನಿಯಾ ಜಾಮೀನು ಮನವಿಯಲ್ಲಿ ವಿವರಿಸಿದ್ದಾರೆ.

ತನ್ನ ಜೊತೆ ಬಂಧಿಸಲ್ಪಟ್ಟ ಮತ್ತೋರ್ವ ಪತ್ರಕರ್ತರನ್ನು ಬಿಡುಗೊಳಿಸಲಾಗಿದೆ. ಆದರೆ, ತನ್ನನ್ನು ಮಾಧ್ಯಮ ಸಂಸ್ಥೆಗಳು ನೀಡುವ ಪತ್ರಕರ್ತರ ಗುರುತಿನ ಚೀಟಿ ಹೊಂದಿಲ್ಲ ಎಂದು ಬಂಧನದಲ್ಲಿ ಇಡಲಾಗಿದೆ ಎಂದು ಪುನಿಯಾ ಜಾಮೀನು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

“ತಾವು ಹವ್ಯಾಸಿ ಪತ್ರಕರ್ತರಾಗಿದ್ದು, ಪತ್ರಕರ್ತರ ಗುರುತಿನ ಚೀಟಿ ಹೊಂದಿಲ್ಲ ಎಂಬುದು ಬಂಧನ ಅಥವಾ ದೂರು ದಾಖಲಿಸಲು ಸಕಾರಣವಲ್ಲ” ಎಂದು ಪುನಿಯಾ ತಕರಾರು ಎತ್ತಿದ್ದಾರೆ.

ಎಫ್‌ಐಆರ್‌ನಲ್ಲಿನ ಅಂಶಗಳಿಗೂ ವಿಡಿಯೋ ಸಾಕ್ಷ್ಯಕ್ಕೂ ಸಾಕಷ್ಟು ಅಂತರವಿದೆ ಎಂದೂ ಅವರು ವಿವರಿಸಿದ್ದಾರೆ. ವಕೀಲರಾದ ಸರೀಮ್‌ ನವೀದ್‌, ಅಕ್ರಂ ಖಾನ್‌ ಮತ್ತು ಕಮ್ರಾನ್‌ ಜಾವೇದ್‌ ಅವರ ಮೂಲಕ ಭಾನುವಾರ ದೆಹಲಿ ನ್ಯಾಯಾಲಯದಲ್ಲಿ ಪುನಿಯಾ ಜಾಮೀನು ಮನವಿ ಸಲ್ಲಿಸಿದ್ದರು.