Child in conflict with law, Juvenile Justice Act
Child in conflict with law, Juvenile Justice Act 
ಸುದ್ದಿಗಳು

ಜುಬಿಲಿ ಹಿಲ್ಸ್ ಸಾಮೂಹಿಕ ಅತ್ಯಾಚಾರ: ನಾಲ್ವರು ಅಪ್ರಾಪ್ತರನ್ನು ವಯಸ್ಕರಂತೆ ಪರಿಗಣಿಸಲು ಬಾಲ ನ್ಯಾಯ ಮಂಡಳಿ ಸೂಚನೆ

Bar & Bench

ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಅಪ್ರಾಪ್ತ ಆರೋಪಿಗಳಲ್ಲಿ ನಾಲ್ವರಿಗೆ ಕೃತ್ಯದ ಪರಿಣಾಮಗಳ ಬಗ್ಗೆ ತಿಳಿದಿದ್ದುದರಿಂದ ವಯಸ್ಕರಂತೆ ಅವರನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ನಗರದ ಬಾಲ ನ್ಯಾಯ ಮಂಡಳಿ (ಜೆಜೆಬಿ) ತೀರ್ಪು ನೀಡಿದೆ.

ಕಾನೂನು ಸಂಘರ್ಷದಲ್ಲಿ ತೊಡಗಿರುವ ಐದನೇ ಅಪ್ರಾಪ್ತ ವಯಸ್ಕ ಸ್ಥಳೀಯ ಶಾಸಕರ ಮಗನಾಗಿದ್ದು ಸಂತ್ರಸ್ತೆಯನ್ನು ಅತ್ಯಾಚಾರ ಮಾಡದೆ ಕೇವಲ ಆಕೆಯ ಘನತೆಗೆ ಭಂಗ ತಂದಿದ್ದರಿಂದ ಆತನನ್ನು ಅಪ್ರಾಪ್ತ ವಯಸ್ಕನಂತೆಯೇ ಪರಿಗಣಿಸುವಂತೆ ಜೆಜೆಬಿ ಹೇಳಿದೆ.

ಅಪರಾಧದ ಗುರುತ್ವ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ನಾಲ್ವರು ಅಪ್ರಾಪ್ತರ ಸಾಮರ್ಥ್ಯವನ್ನು ನ್ಯಾಯಾಧೀಶರಾದ ರಾಧಿಕಾ ಗವ್ವಲ ಅವರ ನೇತೃತ್ವದಲ್ಲಿ ನಡೆದ ವಿಚಾರಣೆ ಗಣನೆಗೆ ತೆಗೆದುಕೊಂಡಿತು.

ಹೈದರಾಬಾದ್‌ನ ಜುಬಿಲಿ ಹಿಲ್ಸ್‌ ಪ್ರದೇಶದಲ್ಲಿ ಮರ್ಸಿಡೆಸ್‌ ಬೆಂಜ್‌ ಕಾರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಈ ಸಂಬಂಧ ಸಂತ್ರಸ್ತೆಯ ತಂದೆ ಈ ವರ್ಷ ಜೂನ್ 2ರಂದು ದೂರು ದಾಖಲಿಸಿದ್ದರು. ಎಫ್‌ಐಆರ್‌ ಪ್ರಕಾರ ಕಾನೂನು ಸಂಘರ್ಷ ಎದುರಿಸುತ್ತಿರುವ ಐವರು ಬಾಲಕರಲ್ಲಿ ಒಬ್ಬಾತ ಶಾಸಕನ ಪುತ್ರನಾಗಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ.  

ತಾವೆಸಗಿದ ಅಪರಾಧದ ಗಾಂಭೀರ್ಯ ಅರ್ಥ ಮಾಡಿಕೊಳ್ಳುವ ಬಾಲಕರ ಸಾಮರ್ಥ್ಯ ಖಚಿತಪಡಿಸಿಕೊಳ್ಳಲು ನ್ಯಾಯಾಧೀಶರು ಅವರೊಂದಿಗೆ ವೈಯಕ್ತಿವಾಗಿ ಸಂವಾದ ನಡೆಸಿದ್ದರು.

ಎಲ್ಲಾ ನಾಲ್ಕು ಹುಡುಗರು ಉತ್ತಮ ಕುಟುಂಬದಿಂದ ಬಂದವರಾಗಿದ್ದು ವೃತ್ತಿಪರ ಮಹತ್ವಾಕಾಂಕ್ಷೆ ಮತ್ತು ವಿದೇಶದಲ್ಲಿ  ಅಧ್ಯಯನ ಮುಂದುವರಿಸಲು ಯೋಜಿಸಿದ್ದರು ಎಂದು ಮಂಡಳಿಯು ಗಮನಿಸಿದೆ. ನಾಲ್ವರಲ್ಲಿ ಯಾರೂ ಮಾನಸಿಕ ಅಥವಾ ದೈಹಿಕ ನ್ಯೂನತೆಯನ್ನು ಹೊಂದಿಲ್ಲ ಮತ್ತು ನಿರ್ಲಕ್ಷಿಸಲ್ಪಟ್ಟ ಮಕ್ಕಳಲ್ಲ. ಹೀಗಾಗಿ ಅವರನ್ನು ವಯಸ್ಕರಂತೆ ಪರಿಗಣಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಅದು ಹೇಳಿದೆ.

ಆದರೆ ಮಂಡಳಿಯ ಮತ್ತೊಬ್ಬ ಸದಸ್ಯೆ, “ಕಾನೂನು ಸಂಘರ್ಷ ಎದುರಿಸುತ್ತಿರುವ ಮಕ್ಕಳು ಅಪರಾಧ ಎಸಗುವ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಪಡೆದಿದ್ದರೂ ಕೃತ್ಯಗಳ ಪರಿಣಾಮ ತಿಳಿಯುವಷ್ಟು ಕಾನೂನು ಅರಿವು ಅವರಿಗಿಲ್ಲ. ಅಲ್ಲದೆ ಸಂತ್ರಸ್ತೆಯ ಪ್ರಚೋದನಕಾರಿ ನಡೆಯೂ ಅವರನ್ನು ಆಮಿಷಕ್ಕೆ ಒಳಪಡಿಸಿವೆ” ಎಂದರು.

ಆದರೆ ಜೆಜೆಬಿ ನ್ಯಾಯಾಧೀಶರು ಈ ಅಭಿಪ್ರಾಯವನ್ನು ಒಪ್ಪಲಿಲ್ಲ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Jubilee_Hills_Gang_rape_case.pdf
Preview