ಸುದ್ದಿಗಳು

ನ್ಯಾಯಿಕ ಸಮುದಾಯ ಮತ್ತು ಜನಸಮೂಹವನ್ನು ಬೆಚ್ಚಿ ಬೀಳಿಸಿದ ನ್ಯಾ. ಉತ್ತಮ್ ಆನಂದ್ ಕೊಲೆ ಪ್ರಕರಣ: ಜಾರ್ಖಂಡ್ ನ್ಯಾಯಾಲಯ

Bar & Bench

ಧನಾಬಾದ್‌ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದ ಉತ್ತಮ್ ಆನಂದ್ ಕೊಲೆ ಪ್ರಕರಣ ನ್ಯಾಯಿಕ ವರ್ಗ ಹಾಗೂ ಜನಸಮೂಹವನ್ನು ಬೆಚ್ಚಿ ಬೀಳಿಸಿದೆ ಎಂದು ಧನಾಬಾದ್‌ ಸಿಬಿಐ ವಿಶೇಷ ನ್ಯಾಯಾಲಯ ಇತ್ತೀಚೆಗೆ ತಿಳಿಸಿದೆ. [ಸಿಬಿಐ ಮತ್ತು ಲಖನ್‌ ಕುಮಾರ್‌ ವರ್ಮಾ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ ಸೌಮ್ಯ ದೃಷ್ಟಿಯಿಂದ ಪ್ರಕರಣವನ್ನು ನೋಡಲಾಗದು ಎಂದು ನ್ಯಾಯಾಧೀಶರಾದ ರಜನಿ ಕಾಂತ್ ಪಾಠಕ್ ಅಭಿಪ್ರಾಯಪಟ್ಟರು. “ಘಟನೆ ದೇಶದೆಲ್ಲೆಡೆಯ ನ್ಯಾಯಿಕ ಸಮುದಾಯವನ್ನು ಮಾತ್ರವಲ್ಲದೆ ಸಾಮೂಹಿಕ ನೆಲೆಯಲ್ಲಿ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಇಂತಹ ಘಟನೆ ನ್ಯಾಯಾಂಗ ಅಧಿಕಾರಿಗಳ ಕುಟುಂಬ ಸದಸ್ಯರು ಹಾಗೂ ದೇಶದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ನ್ಯಾಯಾಧೀಶರಿಗೇ ಈ ಸ್ಥಿತಿಯೊದಗಿದರೆ ಇನ್ನು ಸಾಮಾನ್ಯ ನಾಗರಿಕರ ಪಾಡೇನು ಎಂದು ಜನರು ಯೋಚಿಸುವಂತಾಯಿತು” ಎಂದು ನ್ಯಾಯಾಧೀಶರು ತಿಳಿಸಿದರು.

ಅಲ್ಲದೆ ಆರೋಪಿಗಳಾದ ಲಖನ್‌ ವರ್ಮಾ ಮತ್ತು ಆತನ ಸಹಚರ ರಾಹುಲ್‌ ವರ್ಮಾನನ್ನು ಬಿಡುಗಡೆ ಮಾಡಿದರೆ ಸಮಾಜಕ್ಕೆ ಅದರಲ್ಲಿಯೂ ಘಟನೆಯನ್ನು ಕಂಡವರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಅಲ್ಲದೆ ಮಾನವ ಜೀವನ ಮತ್ತು ದೇಶದ ಕಾನೂನಿನ ಬಗ್ಗೆ ಯಾವುದೇ ಗೌರವ ಇಲ್ಲದೆ ಅವರು ಮತ್ತದೇ ಅಪರಾಧ ಎಸಗಬಹುದು ಎಂದು ನ್ಯಾಯಾಧೀಶರು ತಿಳಿಸಿದರು.

ನ್ಯಾಯಾಧೀಶ ಉತ್ತಮ್‌ ಆನಂದ್‌ ಅವರು ಕಳೆದ ವರ್ಷ ಜುಲೈ 28ರಂದು ಬೆಳಗಿನ ವಾಯುವಿಹಾರದಲ್ಲಿ ತೊಡಗಿದ್ದಾಗ ಉದ್ದೇಶಪೂರ್ವಕವಾಗಿ ಆಟೋರಿಕ್ಷಾವೊಂದು ಢಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಆಗಸ್ಟ್ 6ರಂದು ಆರೋಪಿಗಳನ್ನು ಐಪಿಸಿ ಸೆಕ್ಷನ್ 34 (ಸಾಮಾನ್ಯ ಉದ್ದೇಶದ ಕೃತ್ಯ) 302 (ಕೊಲೆ) ಮತ್ತು 201ರ (ಸಾಕ್ಷಿಗಳ ಕಣ್ಮರೆ) ಅಡಿಯಲ್ಲಿ ಅಪರಾಧಿಗಳೆಂದು ಘೋಷಿಸಿದ್ದರು.

ಘಟನೆಯನ್ನು ಅಪಘಾತ ಎಂದು ಸಾಬೀತುಪಡಿಸಲು ಯತ್ನಿಸುವ ಆರೋಪಿಗಳ ಪರ ವಕೀಲರ ವಾದವನ್ನು ವಿಚಾರಣೆ ವೇಳೆ ನ್ಯಾಯಾಧೀಶ ಪಾಠಕ್‌ ತಿರಸ್ಕರಿಸಿದರು. ಹಾಗಿದ್ದಲ್ಲಿ, ಆರೋಪಿಗಳು ಆಟೋ ನಿಲ್ಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಬೇಕಿತ್ತು. ಬದಲಾಗಿ, ಸಾಕ್ಷ್ಯ ನಾಶಪಡಿಸುವ ಮತ್ತು ಕಾನೂನು ಶಿಕ್ಷೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಇಬ್ಬರೂ ಪಲಾಯನ ಮಾಡಿದ್ದಾರೆ ಎಂದು ತರ್ಕಿಸಿದರು.

ಈ ಕೊಲೆಗೆ ಎರಡು ಸಂಭವನೀಯ ಶಿಕ್ಷೆಗಳನ್ನು ವಿಧಿಸಬಹುದು. ಒಂದು ಜೀವಾವಧಿ ಶಿಕ್ಷೆ ಮತ್ತೊಂದು ಮರಣದಂಡನೆ. ಪ್ರಸ್ತುತ ಪ್ರಕರಣ ಅಪರೂಪದ ಪ್ರಕರಣಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಆದರೆ ಅಪರಾಧಿಗಳು ತಮ್ಮ ಜೀವಿತಾವಧಿ ಮುಗಿಯುವವರೆಗೆ ಜೈಲಿನಲ್ಲೇ ಇರಬೇಕು. ತಮ್ಮ ಕೊನೆಯುಸಿರು ಇರುವವರೆಗೆ ಯಾವುದೇ ವಿನಾಯಿತಿಗೆ ಅವಕಾಶವಿಲ್ಲದೆ ಕಠಿಣ ಜೀವಾವಧಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿತು.

“ಐಪಿಸಿ ಸೆಕ್ಷನ್‌ 302/34ಕ್ಕೆ ಸಂಬಂಧಿಸಿದ ಪ್ರಸ್ತುತ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಸಾಕು. ಆದರೆ ನನ್ನ ಅಭಿಪ್ರಾಯದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿದರೆ 14 ವರ್ಷಗಳ ಅಥವಾ ನಂತರ ಬಿಡುಗಡೆಯಾಗಬಹುದು. ಆದರೆ ನ್ಯಾಯಾಲಯದ ಮನಸ್ಸಿನ ಪ್ರಕಾರ ಇಂತಹ ಅಪರಾಧಿಗಳನ್ನು ಅವರ ಜೀವನದ ಕೊನೆಯವರೆಗೂ ಜೈಲಿನಲ್ಲಿ ಇಡಬೇಕು” ಎಂಬುದಾಗಿ ನ್ಯಾಯಾಧೀಶರು ತಿಳಿಸಿದರು.

ದಂಡದಿಂದ ವಸೂಲಾದ ಅರ್ಧದಷ್ಟು ಮೊತ್ತವನ್ನು ನ್ಯಾಯಾಧೀಶ ಆನಂದ್ ಅವರ ಕುಟುಂಬ ಸದಸ್ಯರಿಗೆ ಪರಿಹಾರವಾಗಿ ಪಾವತಿಸುವಂತೆಯೂ ಸೂಚಿಸಲಾಗಿದೆ. ಅಲ್ಲದೆ ದಂಡದ ಮೊತ್ತ ಸಮರ್ಪಕವಾಗಿಲ್ಲ ಎಂದು ಕಂಡುಕೊಂಡ ನ್ಯಾಯಾಲಯ ನ್ಯಾಯಾಧೀಶರ ಕುಟುಂಬಕ್ಕೆ ಸಿಆರ್‌ಪಿಸಿ ಸೆಕ್ಷನ್ 357 ಎ ಮತ್ತು ಜಾರ್ಖಂಡ್ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲಿ ನ್ಯಾಯಾಧೀಶರಾಗಿದ್ದರಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಹೇಳಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

UOI_through_CBI_v__Lakhan_Kumar_Verma___Anr_.pdf
Preview