ಜಾರ್ಖಂಡ್‌ನ ಧನಬಾದ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉತ್ತಮ್ ಆನಂದ್ ಅವರು ವಾಯು ವಿಹಾರದಲ್ಲಿದ್ದ ವೇಳೆ ವಾಹನ ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ದೋಷಿಗಳಾಗಿದ್ದ ಇಬ್ಬರಿಗೆ ಜಾರ್ಖಂಡ್‌ನ ನ್ಯಾಯಾಲಯವು ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಲಖನ್ ಕುಮಾರ್ ವರ್ಮಾ ಮತ್ತು ರಾಹುಲ್ ಕುಮಾರ್ ವರ್ಮಾ ಅವರನ್ನು ಕಳೆದ ವಾರ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಧೀಶರು ಅಪರಾಧಿಗಳು ಎಂದು ಘೋಷಿಸಿದ್ದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಮತ್ತು 34ರ (ಒಂದೇ ಉದ್ದೇಶದಿಂದ ಕೊಲೆ) ಪ್ರಕರಣ ದಾಖಲಿಸಲಾಗಿತ್ತು. ಶಿಕ್ಷೆ ಪ್ರಕಟಿಸುವುದಕ್ಕೂ ಮುನ್ನ ಶನಿವಾರ ನ್ಯಾಯಾಲಯವು ವಾದ ಆಲಿಸಿತು.
ಕಳೆದ ವರ್ಷದ ಜುಲೈ 28ರಂದು ವಾಯು ವಿಹಾರದಲ್ಲಿದ್ದಾಗ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ದೋಷಿಗಳು ವಾಹನ ಡಿಕ್ಕಿ ಹೊಡೆಸಿದ್ದರಿಂದ ತೀವ್ರ ಗಾಯಗೊಂಡಿದ್ದ ಅವರು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಆರಂಭದಲ್ಲಿ ಇದು ಅಪಘಾತ ಎಂದು ಎಣಿಸಲಾಗಿತ್ತು. ರಸ್ತೆ ಬದಿಯಲ್ಲಿ ವಾಯು ವಿಹಾರ ಕೈಗೊಂಡಿದ್ದ ನ್ಯಾಯಾಧೀಶ ಆನಂದ್ ಅವರಿಗೆ ಉದ್ದೇಶಪೂರ್ವವಾಗಿ ವಾಹನ ಡಿಕ್ಕಿ ಹೊಡೆಸಲಾಗಿತ್ತು ಎಂಬುದು ನಂತರ ಸಿಸಿಟಿವಿ ತುಣುಕಿನಲ್ಲಿ ಸ್ಪಷ್ಟವಾಗಿತ್ತು.