Supreme Court, Kiren Rijiju and John Brittas 
ಸುದ್ದಿಗಳು

ನ್ಯಾಯಾಂಗ ನೇಮಕಾತಿ: ಹೈಕೋರ್ಟ್‌ ಕೊಲಿಜಿಯಂನ 164ರ ಪೈಕಿ 126 ಶಿಫಾರಸ್ಸುಗಳನ್ನು ಬಾಕಿ ಉಳಿಸಿಕೊಂಡಿರುವ ಕೇಂದ್ರ ಸರ್ಕಾರ

ಸಿಪಿಐ (ಎಂ) ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟ್ಟಾಸ್‌ ಅವರ ಪ್ರಶ್ನೆಗೆ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಅಧಿವೇಶನದಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

Bar & Bench

ದೇಶದ ವಿವಿಧ ಹೈಕೋರ್ಟ್‌ಗಳ ಕೊಲಿಜಿಯಂಗಳು ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ 164 ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಈ ಪೈಕಿ 126 ಪ್ರಸ್ತಾವಗಳು ಕೇಂದ್ರ ಸರ್ಕಾರದ ಬಳಿ ಬಾಕಿ ಉಳಿದಿವೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅಂಕಿಅಂಶದ ಮೂಲಕ ಸಂಸತ್‌ಗೆ ಮಾಹಿತಿ ನೀಡಿದ್ದಾರೆ.

ಸ್ವೀಕರಿಸಲಾದ 164 ಪ್ರಸ್ತಾವನೆಗಳ ಪೈಕಿ 31 ಪ್ರಸ್ತಾವಗಳು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಬಳಿ ಇದ್ದು, ಏಳು ಶಿಫಾರಸ್ಸುಗಳನ್ನು ಸಂಬಂಧಿತ ಹೈಕೋರ್ಟ್‌ಗಳಿಗೆ ಮರಳಿಸಲಾಗಿದೆ ಎಂದು ಸಿಪಿಐ (ಎಂ) ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟ್ಟಾಸ್‌ ಅವರಿಗೆ ಕಾನೂನು ಸಚಿವರು ತಮ್ಮ ಉತ್ತರದಲ್ಲಿ ವಿವರಿಸಿದ್ದಾರೆ.

ಬಾಕಿ ಉಳಿದಿರುವ 126 ಶಿಫಾರಸ್ಸುಗಳ ಸ್ಥಿತಿಗತಿ ಇಂತಿದೆ:

1. ನ್ಯಾಯಾಂಗ ಇಲಾಖೆಯ ಬಳಿ ಬಾಕಿ ಉಳಿದಿರುವ ಸುಪ್ರೀಂ ಕೋರ್ಟ್‌ ಕೊಲಿಜಿಯಂಗೆ ಇನ್ನಷ್ಟೇ ಕಳುಹಿಸಿಕೊಡಬೇಕಿರುವ ಪ್ರಸ್ತಾವನೆಗಳು 75.

2. ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿರುವ ನ್ಯಾಯಾಂಗ ಇಲಾಖೆಯ ಬಳಿ ಬಾಕಿ ಉಳಿದಿರುವ ಪ್ರಸ್ತಾವನೆಗಳು 35.

3. ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳು 3.

4. ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳು 13.

5. ಸುಪ್ರೀಂ ಕೋರ್ಟ್‌ ಕೊಲಿಜಿಯಂ ಸಲಹೆಯಂತೆ ಸಂಬಂಧಿತ ಹೈಕೋರ್ಟ್‌ಗಳಿಗೆ ಕೇಂದ್ರ ಸರ್ಕಾರವು ಹಿಂದಿರುಗಿಸಿರುವ ಪ್ರಸ್ತಾವನೆಗಳು 55.

ಪ್ರಸಕ್ತ ವರ್ಷದಲ್ಲಿ ನವೆಂಬರ್‌ 29ರ ವರೆಗೆ ಸುಪ್ರೀಂ ಕೋರ್ಟ್‌ಗೆ ಒಂಭತ್ತು ನ್ಯಾಯಮೂರ್ತಿಗಳು ಸೇರಿದಂತೆ ದೇಶದ ವಿವಿಧ ಹೈಕೋರ್ಟ್‌ಗಳಿಗೆ 118 ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ.

“ಹೈಕೋರ್ಟ್‌ಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಆಡಳಿತಾಂಗ ಮತ್ತು ನ್ಯಾಯಾಂಗದ ನಡುವಿನ ನಿರಂತರ, ಸಂಯೋಜಿತ ಮತ್ತು ಸಹಯೋಗದ ಪ್ರಕ್ರಿಯೆಯಾಗಿದೆ. ರಾಜ್ಯ ಮತ್ತು ಕೇಂದ್ರದ ವಿವಿಧ ಸಾಂವಿಧಾನಿಕ ಪ್ರಾಧಿಕಾರಗಳ ಜೊತೆ ಸಮಾಲೋಚನೆ ಮತ್ತು ಒಪ್ಪಿಗೆ ಅಗತ್ಯವಿರುತ್ತದೆ. ಹೈಕೋರ್ಟ್‌ ನ್ಯಾಯಮೂರ್ತಿಗಳ ನಿವೃತ್ತಿ, ರಾಜೀನಾಮೆ, ಪದೋನ್ನತಿ ಹಾಗೂ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಮಾಡಿರುವುದರಿಂದ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ಹುದ್ದೆ ಹೆಚ್ಚಳವಾಗುತ್ತಿರುತ್ತವೆ. ಇವುಗಳನ್ನು ಭರ್ತಿ ಮಾಡಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ” ಎಂದು ಸಚಿವ ರಿಜಿಜು ಉತ್ತರಿಸಿದ್ದಾರೆ.