ಕರ್ನಾಟಕದ ನ್ಯಾಯಾಂಗ ಮೂಲಸೌಕರ್ಯ ಶ್ಲಾಘಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ ಎಸ್ ಓಕಾ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನ್ಯಾ. ಓಕಾ ಅವರನ್ನು ಪದೋನ್ನತಿಗೊಳಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
Justice AS Oka
Justice AS Oka
Published on

ಕೋವಿಡ್‌ ಸೇರಿದಂತೆ ಏನೇ ಬಂದರೂ ನ್ಯಾಯಾಂಗದ ಕೆಲಸ ಯಾವುದೇ ಅಡೆ ತಡೆ ಇಲ್ಲದೆ ಮುಂದುವರೆಯುತ್ತದೆ ಎಂದು ನ್ಯಾಯಾಂಗ ಸೇರಿದಂತೆ ಸಂಪೂರ್ಣ ನ್ಯಾಯಿಕ ಸಮುದಾಯವು ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎ ಎಸ್‌ ಓಕಾ ಕರೆ ನೀಡಿದ್ದಾರೆ.

ಜಿಲ್ಲಾ ಮತ್ತು ಕೆಳ ಹಂತದ ನ್ಯಾಯಾಲಯಗಳಿಗೆ ವರ್ಚುವಲ್‌ ವಿಧಾನದ ಮೂಲಕ ವಿಚಾರಣೆ ನಡೆಸುವ ವ್ಯವಸ್ಥೆ ಅಭಿವೃದ್ಧಿಗೊಳಿಸಿದರೆ ಕೋವಿಡ್‌ ರೀತಿಯ ವಿಪತ್ತುಗಳ ಸಂದರ್ಭದಲ್ಲಿ ಸುಲಲಿತವಾಗಿ ವಿಚಾರಣೆ ನಡೆಸಬಹುದು. ಮೂರನೇ ಅಲೆ ಅಥವಾ ಇನ್ನಾವುದೇ ವಿಪತ್ತು ಎದುರಾದರೆ ನ್ಯಾಯಾಂಗದ ಕೆಲಸ ಕೇವಲ ಉನ್ನತ ನ್ಯಾಯಾಲಯಗಳಿಗೆ ಸೀಮಿತವಾಗಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾಗಿ ನ್ಯಾ. ಓಕಾ ಅವರನ್ನು ಪದೋನ್ನತಿಗೊಳಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ಆರ್ ಗವಾಯಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಅಡ್ವೋಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಹಾಗೂ ಹಿರಿಯ ವಕೀಲ ಡೇರಿಯಸ್ ಖಂಬಾಟ ಮತ್ತಿತರರು ಭಾಗವಹಿಸಿದ್ದರು.

Also Read
ಕೋವಿಡ್ ಮೂರನೇ ಅಲೆಯಿಂದ ನ್ಯಾಯಾಲಯಗಳು ಸ್ಥಗಿತಗೊಳ್ಳದಂತೆ ಕ್ರಮವಹಿಸಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಓಕಾ

ತಂತ್ರಜ್ಞಾನ ಬಳಕೆ ಕುರಿತು ನ್ಯಾ. ಓಕಾ ಮಾತು: 

ವೀಡಿಯೊ ಕಾನ್ಫರೆನ್ಸ್ ವಿಚಾರಣೆಗಳು ನೇರ (ಭೌತಿಕ) ವಿಚಾರಣೆಗೆ ಪರ್ಯಾಯವಲ್ಲ. ಆದರೆ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ತಂತ್ರಜ್ಞಾನ ಬಳಸುವುದನ್ನು ನಿರಾಕರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ನ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದ ಓಕಾ ಹೇಳಿದರು.

"ಕೋವಿಡ್ ವೇಳೆ ಎಲ್ಲಾ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕವಿಚಾರಣೆ ಆರಂಭಿಸಿದವು. ಆರಂಭದಲ್ಲಿ ಹಿರಿಯ ವಕೀಲರಿಂದ ಹಿನ್ನಡೆ ಉಂಟಾಗಿದ್ದರೂ, ಅವರಲ್ಲಿ ಹಲವರು ವರ್ಚುವಲ್‌ ವಿಚಾರಣೆಗೆ ಒಗ್ಗಿಕೊಂಡರು, ನಾನು ಕರ್ನಾಟಕದಲ್ಲಿ ಇರುವವರೆಗೂ ಅವರು ಭೌತಿಕವಾಗಿ ನ್ಯಾಯಾಲಯಗಳಿಗೆ ಹಾಜರಾಗಲಿಲ್ಲ” ಎಂದು ತಿಳಿಸಿದರು.

ನ್ಯಾಯಾಲಯಗಳ ಮೂಲಸೌಕರ್ಯಗಳ ವಿಚಾರದಲ್ಲಿ ಕರ್ನಾಟಕ ಮುಂದು:

ತಾನು ಪ್ರಾಕ್ಟೀಸ್‌ ಮಾಡುತ್ತಿದ್ದ ಅವಧಿಗೆ ಹೋಲಿಸಿದರೆ ನ್ಯಾಯಾಂಗ ಮೂಲಸೌಕರ್ಯ ವ್ಯವಸ್ಥೆ ಸುಧಾರಿಸಿದೆ. ಆದರೂ "ಮಹಾರಾಷ್ಟ್ರದ ಮೂಲಭೂತ ಸೌಕರ್ಯಕ್ಕಿಂತ ಕರ್ನಾಟಕದಲ್ಲಿ ನ್ಯಾಯಾಂಗ ಮೂಲಸೌಕರ್ಯ ಉತ್ತಮವಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

"ಮಹಾರಾಷ್ಟ್ರ ಸಾಕಷ್ಟು ನ್ಯಾಯಾಂಗ ಪ್ರತಿಭೆಗಳನ್ನು ಹುಟ್ಟುಹಾಕಿದೆ ಎಂದು ಹೇಳಲಾಗುತ್ತದೆ. ಆದರೆ ಮೂಲಸೌಕರ್ಯ ವಿಚಾರಕ್ಕೆ ಬಂದಾಗ, ನಮ್ಮ ರಾಜ್ಯ ಹಿಂದುಳಿದಿದೆ. ಇದಕ್ಕೆ ವಿವಿಧ ಕಾರಣಗಳಿದ್ದು ನಾನು ಯಾರನ್ನೂ ದೂಷಿಸುತ್ತಿಲ್ಲ" ಎಂದು ಮೂಲತಃ ಮಹಾರಾಷ್ಟ್ರದವರಾದ ನ್ಯಾ. ಓಕಾ ತಿಳಿಸಿದರು.

ಕರ್ನಾಟಕ ನ್ಯಾಯಾಲಯ ಸಂಕೀರ್ಣಗಳ ಸುತ್ತಲೂ ವಿಶಾಲ ತೆರೆದ ಸ್ಥಳ ಇರುವುದರಿಂದ ಅವು ಉತ್ತಮವಾಗಿವೆ ಎಂದು ಅವರು ಹೇಳಿದರು. ಅಲ್ಲದೆ ಇಡೀ ಕಟ್ಟಡವನ್ನು ನಿರ್ವಹಿಸಲು ತಂತ್ರಜ್ಞಾನವನ್ನು ಬಳಸಿದ ಹುಬ್ಬಳ್ಳಿಯ ತಾಲೂಕು ಮಟ್ಟದ ನ್ಯಾಯಾಲಯ ಸಂಕೀರ್ಣದಿಂದ ತಾನು ಎಷ್ಟು ಪ್ರಭಾವಿತನಾಗಿದ್ದೆ ಎಂಬುದನ್ನು ಅವರು ವಿವರಿಸಿದರು. "ಹುಬ್ಬಳ್ಳಿಯಲ್ಲಿ ನ್ಯಾಯಾಲಯ ಸಂಕೀರ್ಣವಿದ್ದು ಇದು ತಂತ್ರಜ್ಞಾನವನ್ನು ಚೆನ್ನಾಗಿ ಬಳಸುತ್ತದೆ ಎಂಬ ಸರಳ ಕಾರಣಕ್ಕಾಗಿ ಅತ್ಯಾಧುನಿಕ ಕಟ್ಟಡವಾಗಿದೆ. ನ್ಯಾಯಾಲಯದ ನೆಲಮಾಳಿಗೆಯಲ್ಲಿ ಕಂಪ್ಯೂಟರ್ ಇದ್ದು ಅಲ್ಲಿಂದ ಅವರು ಇಡೀ ಕಟ್ಟಡವನ್ನು ನಿಭಾಯಿಸುತ್ತಾರೆ” ಎಂದರು.

ಕರ್ನಾಟಕದ ಹಲವೆಡೆ ವಕೀಲರ ಸಂಘಗಳಿಗೆ ಪ್ರತ್ಯೇಕ ಕಟ್ಟಡ ವ್ಯವಸ್ಥೆ ಇರುವುದನ್ನು ಪ್ರಸ್ತಾಪಿಸಿದ ಅವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ 5 ಅಂತಸ್ತಿನ ಕಟ್ಟಡವನ್ನು ವಕೀಲರ ಸಂಘಕ್ಕೆಂದೇ ಮೀಸಲಿಟ್ಟಿದ್ದು ಇದರಲ್ಲಿ ಒಂದು ಸಭಾಂಗಣ, ಪ್ರತ್ಯೇಕ ಚೇಂಬರ್‌ಗಳು ಹಾಗೂ ಎರಡು ರೆಸ್ಟೋರೆಂಟ್‌ಗಳಿವೆ ಎಂದು ತಿಳಿಸಿದರು. "ಇದು ವಿಲಾಸಿ ಎನಿಸಿದರೂ ಉತ್ತಮ ಮೂಲಸೌಕರ್ಯ ಉತ್ತಮ ಗುಣಮಟ್ಟದ ಕೆಲಸಕ್ಕೆ ಕಾರಣವಾಗುತ್ತದೆ ಎಂದು ನಂಬಿದ್ದೇನೆ" ಎಂಬುದಾಗಿ ಅವರು ಹೇಳಿದರು.

ಕಾನೂನು ಶಿಕ್ಷಣಕ್ಕೆ ಕರ್ನಾಟಕದ ಮಾದರಿ ಉತ್ತಮ:

ಮಹಾರಾಷ್ಟ್ರದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಭಿನ್ನ ರೀತಿಯ ಕಾನೂನು ಶಿಕ್ಷಣ ಪದ್ದತಿ ಇರುವುದನ್ನು ಪ್ರಸ್ತಾಪಿಸಿದ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಅಲ್ಲಿನ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ 160 ಕಾನೂನು ಶಾಲೆಗಳು ಏಕರೂಪದ ಕಾನೂನು ಶಿಕ್ಷಣವನ್ನು ನೀಡುತ್ತಿವೆ. ಪಠ್ಯಕ್ರಮ ಮತ್ತು ಅದರ ಜಾರಿಗೆ ಕಾರಣವಾದ ಶಿಕ್ಷಕರು ಮತ್ತು ಸಿಬ್ಬಂದಿಗಳೆಲ್ಲರೂ ಕಾನೂನು ಕ್ಷೇತ್ರದಿಂದ ಬಂದವರು ಎಂದರು.

Kannada Bar & Bench
kannada.barandbench.com