Supreme Court , judge  
ಸುದ್ದಿಗಳು

ಏಳು ವರ್ಷಗಳ ವಕೀಲಿಕೆ ಅನುಭವವುಳ್ಳ ನ್ಯಾಯಾಂಗ ಅಧಿಕಾರಿ ವಕೀಲ ವರ್ಗದಡಿ ಜಿಲ್ಲಾ ನ್ಯಾಯಾಧೀಶರಾಗಲು ಅರ್ಹ: ಸುಪ್ರೀಂ

ಏಳು ವರ್ಷಗಳ ಕಾಲ ವಕೀಲರ ಸಂಘದ ಸದಸ್ಯರಾಗಿರುವ ನ್ಯಾಯಾಂಗ ಅಧಿಕಾರಿಗಳು ಕೂಡ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹರು ಎಂದು ಘೋಷಿಸುವಂತೆ ಮನವಿ ಸಲ್ಲಿಸಲಾಗಿತ್ತು.

Bar & Bench

ನ್ಯಾಯಾಂಗ ಸೇವೆಗೂ ಮುನ್ನ ಏಳು ವರ್ಷ ವಕೀಲಿಕೆ ಅನುಭವ ಹೊಂದಿರುವ ನ್ಯಾಯಾಂಗ ಅಧಿಕಾರಿ ವಕೀಲರ ವರ್ಗದಡಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ [ರೆಜನೀಶ್ ಕೆವಿ ಮತ್ತು ಕೆ ದೀಪಾ ಇನ್ನಿತರರ ನಡುವಣ ಪ್ರಕರಣ].

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ  ಎಂ ಎಂ ಸುಂದರೇಶ್ಅರವಿಂದ್ ಕುಮಾರ್ಸತೀಶ್ ಚಂದ್ರ ಶರ್ಮಾ ಹಾಗೂ  ಕೆ ವಿನೋದ್ ಚಂದ್ರನ್ ಅವರಿದ್ದ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ.

"ನ್ಯಾಯಾಂಗ ಸೇವೆಗಳ ಸದಸ್ಯರಿಗೆ ಅನ್ಯಾಯವಾಗಿದೆ ಎಂದು ನಾವು ಅಭಿಪ್ರಾಯಪಡುತ್ತಿದ್ದೇವೆ. ಇದರಿಂದಾಗಿ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅವರು ಆಯ್ಕೆಯಾಗದಂತಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಂಗ ಅಧಿಕಾರಿಗಳು ವಕೀಲರ ವರ್ಗದಡಿ ಅರ್ಜಿ ಸಲ್ಲಿಸುವುದನ್ನು ನಿರ್ಬಂಧಿಸಿ  ಧೀರಜ್ ಮೋರ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ನ್ಯಾಯಾಲಯ ರದ್ದುಗೊಳಿಸಿತು.

ಇಂದು ನೀಡಿದ ತೀರ್ಪು ಹೈಕೋರ್ಟ್‌ಗಳು ಅಥವಾ ಸರ್ವೋಚ್ಚ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದ ಪ್ರಕರಣಗಳನ್ನು ಹೊರತುಪಡಿಸಿ ಭವಿಷ್ಯದ ನೇಮಕಾತಿಗಳಿಗೆ ಅನ್ವಯಿಸುತ್ತದೆಯೇ ಹೊರತು ಹಿಂದಿನ ಆಯ್ಕೆ ಪ್ರಕ್ರಿಯೆಗಳಿಗೆ ಅಲ್ಲ ಎಂದು ಸಾಂವಿಧಾನಿಕ ಪೀಠ ಹೇಳಿದೆ.

"ಅಧೀನ ನ್ಯಾಯಾಲಯಗಳಲ್ಲಿ ನ್ಯಾಯಾಂಗ ಸೇವೆಗೂ ನೇಮಕಗೊಳ್ಳುವ ಮೊದಲು ಏಳು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ ನ್ಯಾಯಾಂಗ ಅಧಿಕಾರಿಗಳು ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಜಿಲ್ಲಾ ನ್ಯಾಯಾಧೀಶರು ಇಲ್ಲವೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ  ನೇಮಕಗೊಳ್ಳಲು ಅರ್ಹರಾಗಿರುತ್ತಾರೆ " ಎಂದು ನ್ಯಾಯಾಲಯ ತಿಳಿಸಿದೆ.

ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ನ್ಯಾಯಾಂಗ ಅಧಿಕಾರಿಗಳು ಅಥವಾ ಸೇವೆಯಲ್ಲಿರುವ ಅಭ್ಯರ್ಥಿಗಳ ನೇರ ನೇಮಕಾತಿಗಾಗಿ ರಾಜ್ಯ ಸರ್ಕಾರಗಳು ಹೈಕೋರ್ಟ್‌ಗಳೊಂದಿಗೆ ಸಮಾಲೋಚಿಸಿ ನಿಯಮ ರೂಪಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

" [ಇಂದಿನ ತೀರ್ಪಿನಲ್ಲಿ] ನೀಡಲಾದ ಉತ್ತರಗಳಿಗೆ ಅನುಗುಣವಾಗಿಲ್ಲದ, ರಾಜ್ಯ ಸರ್ಕಾರಗಳು ಹೈಕೋರ್ಟ್‌ಗಳೊಂದಿಗೆ ಸಮಾಲೋಚಿಸಿ ರಚಿಸಿದ ಎಲ್ಲಾ ನಿಯಮಗಳನ್ನು ರದ್ದುಗೊಳಿಸಲಾಗುತ್ತದೆ " ಎಂದು ನ್ಯಾಯಾಲಯ ಆದೇಶಿಸಿತು.

ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಇರಬೇಕಾದ ಅರ್ಹತೆಯನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಗಮನಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೆ, ನ್ಯಾಯಾಧೀಶರು ಮತ್ತು ವಕೀಲರಾಗಿ ಏಳು ವರ್ಷಗಳ ಸಂಯೋಜಿತ ಅನುಭವ ಹೊಂದಿರುವ ನ್ಯಾಯಾಂಗ ಅಧಿಕಾರಿಗಳೂ ಸಹ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಲು  ಅರ್ಹರಾಗಿರುತ್ತಾರೆ ಎಂದೂ ಸಹ ನ್ಯಾಯಾಲಯ ಹೇಳಿದೆ.

ಮುಂದುವರಿದು, ಅಂತಹ ನೇಮಕಾತಿಗಳಲ್ಲಿ ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಅನ್ವಯವಾಗುವಂತೆ ವಕೀಲರ ಮತ್ತು ನ್ಯಾಯಾಂಗ ಅಧಿಕಾರಿಗಳ ಕನಿಷ್ಠ ವಯೋಮಿತಿಯು 35 ವರ್ಷಗಳಾಗಿರಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಏಳು ವರ್ಷಗಳ ಕಾಲ ವಕೀಲರ ಸಂಘದ ಸದಸ್ಯರಾಗಿರುವ ನ್ಯಾಯಾಂಗ ಅಧಿಕಾರಿಗಳು ಕೂಡ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹರು ಎಂದು ಘೋಷಿಸುವಂತೆ ಮನವಿ ಸಲ್ಲಿಸಲಾಗಿತ್ತು.