
ನ್ಯಾಯಾಧೀಶರು ನ್ಯಾಯಾಲಯಗಳಲ್ಲಿ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಒಪ್ಪಿಕೊಂಡರು.
ಬಾಂಬೆ ಹೈಕೋರ್ಟ್ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನ್ಯಾಯಾಧೀಶರ ವರ್ತನೆಯ ಬಗ್ಗೆ ತಮಗೆ ಬರುತ್ತಿರುವ ದೂರುಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದ ಸಿಜೆಐ “ನ್ಯಾಯಾಧೀಶ ಹುದ್ದೆ ಎಂಬುದು ಬೆಳಿಗ್ಗೆ ಹತ್ತರಿಂದ ಸಂಜೆ ಐದು ಗಂಟೆಯ ನಡುವೆ ಮಾಡಿಬಿಡುವ ಕೆಲಸವಲ್ಲ ಎಂದು ಸದಾ ನನಗೆ ಅನ್ನಿಸಿದೆ. ಅದು ಸಮಾಜಕ್ಕೆ, ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಇರುವ ಅವಕಾಶ” ಎಂದು ಹೇಳಿದರು.
ವಕೀಲರೊಂದಿಗೆ ಅಸಭ್ಯವಾಗಿ ವರ್ತಿಸುವುದರಿಂದ ಅಥವಾ ನ್ಯಾಯಾಲಯದ ಅಧಿಕಾರಿಗಳನ್ನು ಪದೇ ಪದೇ ಕರೆಯುವುದರಿಂದ ಉದ್ದೇಶ ಈಡೇರುತ್ತದೆಯೇ ಎಂದು ಪ್ರಶ್ನಿಸಿದ ಅವರು ನ್ಯಾಯಮೂರ್ತಿಗಳು ಆಹ್ಲಾದಕರ ವಾತವರಣ ಸೃಷ್ಟಿಸಿದರೆ ವಕೀಲರು ಒತ್ತಡಗಳಿಂದ ಮುಕ್ತರಾಗಬಲ್ಲರು ಎಂದರು.
ನ್ಯಾಯಾಧೀಶರು ನ್ಯಾಯಾಲಯದ ಕಲಾಪಗಳಿಗೆ ಸಾಕಷ್ಟು ಸಮಯ ವಿನಿಯೋಗಿಸುತ್ತಿಲ್ಲ ಎಂಬ ಕಳವಳದ ಕುರಿತಂತೆಯೂ ಮಾತನಾಡಿದ ಅವರು ನ್ಯಾಯಾಧೀಶರಾದವರು ತಾವು ಮಾಡಿದ ಪ್ರತಿಜ್ಞಾವಿಧಿಗೆ ಅನುಗುಣವಾಗಿ ನಡೆಯಬೇಕು. ನ್ಯಾಯಾಂಗದ ಶ್ರೇಷ್ಠತೆಗೆ ಅಪಖ್ಯಾತಿ ತರುವಂತಹ ಕೆಲಸಗಳನ್ನು ಮಾಡಬಾರದು ಎಂದು ಬುದ್ಧಿಮಾತು ಹೇಳಿದರು.
ತಾವು ಕೂಡ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದರಿಂದ ಹಾಗೂ ಭರವಸೆಗಳನ್ನು ಒದಗಿಸುವುದರಿಂದ ದೂರವಿದ್ದು ತಮ್ಮ ಕೆಲಸವನ್ನು ಸಾಧ್ಯವಾದಷ್ಟೂ ಉತ್ತಮ ರೀತಿಯಲ್ಲಿ ನಿರ್ವಹಿಸಲು ಉದ್ದೇಶಿಸಿರುವುದಾಗಿ ತಿಳಿಸಿದರು.