Judge 
ಸುದ್ದಿಗಳು

ನ್ಯಾಯಾಂಗದ ಮೇಲೆ ಭೌತಿಕವಾಗಿ, ಮಾನಸಿಕವಾಗಿ ಕೋವಿಡ್‌ ತೀವ್ರ ಪರಿಣಾಮ ಬೀರಿದೆ: ಸಿಜೆಐ ರಮಣ

ಈವರೆಗೆ, 2,768 ನ್ಯಾಯಾಂಗ ಅಧಿಕಾರಿಗಳು ಮತ್ತು ಹೈಕೋರ್ಟ್‌ನ 106 ನ್ಯಾಯಮೂರ್ತಿಗಳಿಗೆ ಕೋವಿಡ್‌ ದೃಢಪಟ್ಟಿದ್ದು 34 ನ್ಯಾಯಾಂಗ ಅಧಿಕಾರಿಗಳು ಮತ್ತು ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳು ಕೋವಿಡ್‌ಗೆ ಬಲಿಯಾಗಿದ್ದಾರೆ.

Bar & Bench

ಕೋವಿಡ್‌ ಸಾಂಕ್ರಾಮಿಕ ರೋಗ ನ್ಯಾಯಾಂಗ, ನ್ಯಾಯಾಧೀಶರು ಹಾಗೂ ನ್ಯಾಯಾಲಯ ಸಿಬ್ಬಂದಿ ಮೇಲೆ ತೀವ್ರ ಪರಿಣಾಮ ಬೀರಿದ್ದು ಅವರೆಲ್ಲ ವೈರಾಣುವಿನಿಂದ ದೈಹಿಕವಾಗಿ, ಮಾನಸಿಕವಾಗಿ ತೀವ್ರ ತೊಂದರೆಗೆ ತುತ್ತಾಗಿದ್ದಾರೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹೇಳಿದ್ದಾರೆ.

2,768 ನ್ಯಾಯಾಂಗ ಅಧಿಕಾರಿಗಳು ಮತ್ತು ಹೈಕೋರ್ಟ್‌ನ 106 ನ್ಯಾಯಮೂರ್ತಿಗಳಿಗೆ ಕೋವಿಡ್‌ ದೃಢಪಟ್ಟಿದ್ದು 34 ನ್ಯಾಯಾಂಗ ಅಧಿಕಾರಿಗಳು ಮತ್ತು ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳು ವೈರಸ್ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಇತ್ತೀಚೆಗೆ ವಿವರಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ಗೆ ಭೇಟಿ ನೀಡದೇ ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡಲು ಪತ್ರಕರ್ತರಿಗೆ ಅನುಕೂಲ ಕಲ್ಪಿಸುವ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದ ವೇಳೆ ಅವರು ಈ ಮಾಹಿತಿ ನೀಡಿದರು.

“ಸುಪ್ರೀಂಕೋರ್ಟ್‌ನ ನನ್ನ ಸಹೋದರ ಮತ್ತು ಸಹೋದರಿ ನ್ಯಾಯಾಧೀಶರು ಸೇರಿದಂತೆ ಪ್ರತಿಯೊಬ್ಬರೂ ಈ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ತೊಂದರೆಗೀಡಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ, ರಿಜಿಸ್ಟ್ರಾರ್‌ಗಳು, ಸರ್ವೋಚ್ಚ ನ್ಯಾಯಾಲಯದ ಬಹುತೇಕ ಸಿಬ್ಬಂದಿ ಮತ್ತು ಅವರ ಕುಟುಂಬಗಳು ತೊಂದರೆ ಅನುಭವಿಸಿದ್ದಾರೆ. ಈ ಸಾಂಕ್ರಾಮಿಕದಿಂದ ದೈಹಿಕ ಪರಿಣಾಮ ಮಾತ್ರವಲ್ಲದೆ, ಭೀಕರವಾದ ಮಾನಸಿಕ ಮತ್ತು ಬೌದ್ಧಿಕ ಒತ್ತಡ ಉಂಟಾಗುತ್ತಿದೆ”ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ ಸುಪ್ರೀಂಕೋರ್ಟ್‌ ರಿಜಿಸ್ಟ್ರಿಯ ಉದ್ಯೋಗಿಯೊಬ್ಬರಿಗೆ ಏಪ್ರಿಲ್‌ 27, 2020 ರಂದು ಮೊದಲು ಕೋವಿಡ್‌ ಸೋಂಕು ತಗುಲಿತ್ತು.

"ಇಲ್ಲಿಯವರೆಗೆ, ಸುಮಾರು 800 ರಿಜಿಸ್ಟ್ರಿ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದೆ. ನಮ್ಮ ಆರು ರಿಜಿಸ್ಟ್ರಾರ್‌ಗಳು ಮತ್ತು10 ಹೆಚ್ಚುವರಿ ರಿಜಿಸ್ಟ್ರಾರ್‌ಗಳಿಗೆ ಬೇರೆ ಬೇರೆ ಸಮಯದಲ್ಲಿ ಸೋಂಕು ತಗುಲಿದೆ. ಸುಪ್ರೀಂಕೋರ್ಟ್‌ನ ಮೂವರು ಅಧಿಕಾರಿಗಳು ವೈರಸ್‌ಗೆ ಜೀವ ತೆತ್ತಿದ್ದಾರೆ. ಸಾಂಕ್ರಾಮಿಕ ರೋಗದಿಂದ ಪ್ರಾಣ ಅರ್ಪಿಸಿದವರ ಕುಟುಂಬಗಳು ಮತ್ತು ಪ್ರೀತಿ ಪಾತ್ರರಿಗೆ ನನ್ನ ಹೃದಯ ಮಿಡಿಯುತ್ತದೆ” ಎಂದು ಅವರು ವಿವರಿಸಿದರು.