ಸುದ್ದಿಗಳು

ಸಂವಿಧಾನ ಮತ್ತು ನಾಗರಿಕರ ರಕ್ಷಕನಾಗಿ ನ್ಯಾಯಾಂಗ ಕಾರ್ಯನಿರ್ವಹಿಸಿದೆ: ಸಿಜೆಐ ಗವಾಯಿ

ಯುವ ಪೀಳಿಗೆಯ ವಕೀಲರು ಕಾನೂನು ವೃತ್ತಿಯ ಸವಾಲುಗಳನ್ನು ನಿಭಾಯಿಸಲು ಉತ್ತಮ ರೀತಿಯಲ್ಲಿ ಸನ್ನದ್ಧರಾಗಿದ್ದಾರೆ ಎಂದು ಅವರು ಹೇಳಿದರು.

Bar & Bench

ಜನರ ಹಕ್ಕುಗಳ ಮತ್ತು ಸಂವಿಧಾನದ ರಕ್ಷಕರಾಗಿ ದೇಶದ ಸಾಂವಿಧಾನಿಕ ನ್ಯಾಯಾಲಯಗಳು ಕಾರ್ಯನಿರ್ವಹಿಸಿವೆ ಎಂದು  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೆಮ್ಮೆ ವ್ಯಕ್ತಪಡಿಸಿದರು.

ಈಚೆಗೆ ಸ್ಕಾಟ್‌ಲೆಂಡ್‌ನ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದಲ್ಲಿ ಅವರು ಮಾತನಾಡಿದರು. ಸಂವಿಧಾನವನ್ನು ಉಲ್ಲಂಘಿಸಿದ ಕಾನೂನುಗಳನ್ನಷ್ಟೇ ನ್ಯಾಯಾಲಯಗಳು ಬದಿಗಿಟ್ಟಿಲ್ಲ ಜೊತೆಗೆ ಜನರನ್ನು ರಕ್ಷಿಸಲು ಕಾರ್ಯಾಂಗ ಅಥವಾ ಶಾಸಕಾಂಗ ವಿಫಲವಾದಾಗ ಅವು ಮಧ್ಯಪ್ರವೇಶಿಸಿವೆ ಎಂದರು.

ಸಂವಿಧಾನಕ್ಕೆ ಮಾಡಲಾದ ತಿದ್ದಪಡಿ ಅದರ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ಕಂಡು ಬಂದಾಗಲೆಲ್ಲಾ ಸುಪ್ರೀಂ ಕೋರ್ಟ್‌ ಅಂತಹ ತಿದ್ದುಪಡಿಗಳನ್ನು ರದ್ದುಗೊಳಿಸಿದೆ. ರಾಜ್ಯ ಶಾಸಕಾಂಗ ಮತ್ತು ಸಂಸತ್ತು ಜಾರಿಗೆ ತಂದ ಯಾವುದೇ ಕಾನೂನು ಸಂವಿಧಾನ ಅನುಮತಿಸುವ ಎಲ್ಲೆಯನ್ನು ಮೀರಿದೆ ಎಂದು ಕಂಡುಬಂದಾಗಲೆಲ್ಲಾ ಅಂತಹ ಕಾನೂನುಗಳನ್ನು ಸುಪ್ರೀಂ ಕೋರ್ಟ್‌ ಹಾಗೂ ದೇಶದ ಸಾಂವಿಧಾನಿಕ ನ್ಯಾಯಾಲಯಗಳು ರದ್ದುಗೊಳಿಸಿವೆ. ಅಧಿಕಾರವನ್ನು ಬಹಳ ಸೀಮಿತ ರೀತಿಯಲ್ಲಿ ಮತ್ತು ಅಪರೂಪದ ಸಂದರ್ಭಗಳಲ್ಲಿ ಚಲಾಯಿಸಬೇಕಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ವಿವರಿಸಿದರು.

ತಂತ್ರಜ್ಞಾನದಲ್ಲಿ ಪಳಗುವ ಮೂಲಕ ಹಾಗೂ ಸಂಶೋಧನೆಯಲ್ಲಿ ಆಳವಾಗಿ ತೊಡಗುವ ಮೂಲಕ ಯುವ ಪೀಳಿಗೆಯ ವಕೀಲರು ಕಾನೂನು ವೃತ್ತಿಯ ಸವಾಲುಗಳನ್ನು ನಿಭಾಯಿಸಲು ಉತ್ತಮ ರೀತಿಯಲ್ಲಿ ಸನ್ನದ್ದಾರಾಗಿದ್ದಾರೆ ಎಂದು ಅವರು ಇದೇ ವೇಳೆ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿಕ್ರಮ್ ನಾಥ್ ವೈಯಕ್ತಿಕ ಹಕ್ಕುಗಳು ನಿಜವಾಗಿಯೂ ಅರ್ಥಪೂರ್ಣವಾಗುವಂತೆ ಸಂವಿಧಾನದ ಲಿಖಿತ ಪದಗಳ ವ್ಯಾಪ್ತಿ ವಿಸ್ತರಿಸಲಾಗಿದೆ. ವೈಯಕ್ತಿಕ ಹಕ್ಕನ್ನು ಕೆಲ ಅಕ್ಷರಗಳಿಗೆ ಅಥವಾ ನಿರ್ಬಂಧಿತ ವ್ಯಾಖ್ಯಾನಗಳಿಗೆ ಸೀಮಿತಗೊಳಿಸಲಾಗದು ಎಂದರು.

ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯದ ವಿಷಯದ ಕುರಿತು ಮಾತನಾಡಿದ ಅವರು, ನ್ಯಾಯಾಂಗ ಸೇವೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅವರ ಪ್ರಾತಿನಿಧ್ಯ ಶೀಘ್ರದಲ್ಲೇ ಸುಧಾರಿತ ಮಟ್ಟಕ್ಕೆ ಏರಲಿದೆ ಎಂದು ಹೇಳಿದರು.