
ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್‌ನಂತಹ ಬ್ರಿಟಿಷ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಹಿಂತಿರುಗಿ ದೇಶವನ್ನು ಬಲಿಷ್ಠಗೊಳಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮಂಗಳವಾರ ಮನವಿ ಮಾಡಿದರು.
ಆಕ್ಸ್‌ಫರ್ಡ್‌ನ ಟ್ರಿನಿಟಿ ಕಾಲೇಜಿನಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು "ನಿಮ್ಮಲ್ಲಿ ಮಾಡುವ ಒಂದೇ ಮನವಿ ಏನೆಂದರೆ, ಅಧ್ಯಯನ ಪೂರ್ಣಗೊಳಿಸಿದ ನಂತರ, ನೀವು ಇಲ್ಲಿಯೇ ಉಳಿಯಬಾರದು. ಭಾರತಕ್ಕೆ ಹಿಂತಿರುಗಿ, ನಮ್ಮ ದೇಶವನ್ನು ಬಲಿಷ್ಠಗೊಳಿಸಲು ಮತ್ತು ಇಡೀ ಜಗತ್ತಿನ ಪ್ರಮುಖ ಶಕ್ತಿಗಳಲ್ಲಿ ಒಂದನ್ನಾಗಿ ಮಾಡಲು ನಿಮ್ಮ ಸೇವೆ ಸಲ್ಲಿಸಿ. ಭಾರತಕ್ಕೆ ನಿಮ್ಮ ಅವಶ್ಯಕತೆ ಇದೆ, ಆ ಅಗತ್ಯಕ್ಕೆ ಸ್ಪಂದಿಸಿ" ಎಂದರು. ಇದಕ್ಕೂ ಮುನ್ನ ಅವರು ಕೇಂಬ್ರಿಜ್ ವಿವಿಗೆ ಭೇಟಿ ನೀಡಿದ್ದರು.
"ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್‌ನ ಅನೇಕ ಹಳೆಯ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ... ವಿವಿಧ ವಿಷಯಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದು ನನಗೆ ನಿಜಕ್ಕೂ ಖುಷಿ ಕೊಟ್ಟಿತು. ಒಬ್ಬ ಯುವಕ ಧಾರ್ಮಿಕ ಸಾಂಸ್ಥಿಕ ರಚನೆಗಳ ವಿಚಾರದಲ್ಲಿ ಪ್ರಾಚೀನ ಗ್ರಂಥಗಳಲ್ಲಿ ಕಂಡುಬರುವ ಸಮಾನತೆಯ ಕುರಿತು ಪುಸ್ತಕ ಮತ್ತು ಸಂಶೋಧನಾ ಬರಹವನ್ನು ನೀಡಿದ. ಅಂತಹ ಪರಿಕಲ್ಪನೆಯೂ ಇರುವುದು ತಿಳಿದು ನನಗೆ ಆಶ್ಚರ್ಯವಾಯಿತು. ನಾನು ಹೇಳಬಲ್ಲೆ, ವಿದ್ಯಾರ್ಥಿಗಳು ದೇಶದ ಭವಿಷ್ಯ, ಭಾರತಕ್ಕೆ ಅವರ ಅಗತ್ಯವಿದೆ" ಎಂದು ಅವರು ಹೇಳಿದರು.