ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರ ನಿರ್ಬಂಧಿಸಿ ಸುಪ್ರೀಂ ಕೋರ್ಟ್‌ನ 1973ರಲ್ಲಿ ನೀಡಿದ್ದ ಕೇಶವಾನಂದ ಭಾರತಿ ತೀರ್ಪು ಪ್ರಮಾದದಿಂದ ಕೂಡಿದ್ದು ತಪ್ಪು ಪರಂಪರೆಯನ್ನು ಹುಟ್ಟುಹಾಕಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಬುಧವಾರ ನಡೆದ 83ನೇ ಅಖಿಲ ಭಾರತ ಸ್ಪೀಕರ್‌ಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ತೀರ್ಪು ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು ಆದರೆ ಸಂವಿಧಾನದ ಮೂಲ ರಚನೆಯನ್ನಲ್ಲ ಎಂದು ಹೇಳುತ್ತದೆ. ಆದರೆ ಹೀಗಾಗುವುದು ಸಾಧ್ಯವಿಲ್ಲ ಎಂದರು.
ಜಗದೀಪ್ ಧನಕರ್ ಭಾಷಣದ ಪ್ರಮುಖ ಅಂಶಗಳು
(ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಧನಕರ್ ಅವರು ಈ ಹಿಂದೆ ನೀಡಿದ್ದ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಅವಲೋಕನಗಳ ಕುರಿತು ಪ್ರತಿಕ್ರಿಯಿಸುತ್ತಾ) ಸಂವಿಧಾನದ ಅಂಗಸಂಸ್ಥೆಗಳಿಗೆ ತಾವು ಹೇಗೆ ನಡೆದುಕೊಳ್ಳಬೇಕು ಎಂಬ ಅರಿವಿರಬೇಕು. ಸಾರ್ವಜನಿಕ ಬಳಕೆಗೆ ಇವು ವೇದಿಕೆಯಾದರೆ… ಸಾಂವಿಧಾನಿಕ ಪ್ರಾಧಿಕಾರಿಗೆ ತಿಳಿಹೇಳಿ ಎಂದು ಅಟಾರ್ನಿ ಜನರಲ್ ಅವರಿಗೆ ಸುಪ್ರೀಂ ಕೋರ್ಟ್ ಹೇಳುವುದು ಅಚ್ಚರಿ ಉಂಟು ಮಾಡುವಂಥದ್ದು. ಈ ಕಾರಣಕ್ಕೇ ನಾನು ಅಟಾರ್ನಿ ಜನರಲ್ ಹುದ್ದೆ ಅರಸಿಬಂದಾಗ ಅದನ್ನು ಒಪ್ಪಿಕೊಳ್ಳಲಿಲ್ಲ.
ಸಾರ್ವಜನಿಕ ವೇದಿಕೆಗಳ ಮೂಲಕ ಸಂಭಾಷಣೆ ನಡೆಸುವುದು ಸಂವಹನದ ಆರೋಗ್ಯಕರ ವಿಧಾನವಲ್ಲ ಎಂದು ನ್ಯಾಯಾಂಗಕ್ಕೆ ನಾನು ಮನವಿ ಮಾಡುತ್ತೇನೆ.
ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಪ್ರಜಾಪ್ರಭುತ್ವ ವಿಕಸನಗೊಳ್ಳುತ್ತದೆ ಮತ್ತು ಉಳಿಯುತ್ತದೆ.
ಶಾಸಕಾಂಗ ಹೇಗೆ ನ್ಯಾಯಾಲಯದ ತೀರ್ಪು ನೀಡಲು ಸಾಧ್ಯವಿಲ್ಲವೋ ಅದೇ ರೀತಿ ನ್ಯಾಯಾಲಯ ಕೂಡ ಶಾಸನ ರೂಪಿಸಲು ಸಾಧ್ಯವಿಲ್ಲ. ಇದು ಉಳಿದೆಲ್ಲಕ್ಕಿಂತಲೂ ಸುಸ್ಪಷ್ಟ.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯಿದೆಯನ್ನು ಸುಪ್ರೀಂಕೋರ್ಟ್ 2015ರಲ್ಲಿ ರದ್ದುಗೊಳಿಸಿದ್ದು ವಿಶ್ವದ ಬೇರಾವುದೇ ಪ್ರಜಾಪ್ರಭುತ್ವದಲ್ಲಿ ಇಂತಹುದು ನಡೆದಿಲ್ಲ.
ಸಂಸದೀಯ ಸಾರ್ವಭೌಮತ್ವ ಮತ್ತು ಸ್ವಾಯತ್ತತೆಯು ಪ್ರಜಾಪ್ರಭುತ್ವದ ಉಳಿವಿಗೆ ಅತ್ಯಗತ್ಯವಾಗಿದ್ದು ಅವು ದುರ್ಬಲಗೊಳ್ಳಲು ಇಲ್ಲವೇ ರಾಜಿ ಮಾಡಿಕೊಳ್ಳಲು ಕಾರ್ಯಾಂಗ ಅಥವಾ ನ್ಯಾಯಾಂಗಕ್ಕೆ ಅನುಮತಿಸಲಾಗದು.
ಭಾಷಣದ ವೀಡಿಯೊ ತುಣುಕು ಇಲ್ಲಿದೆ: