ಕೊಲಿಜಿಯಂ ಕುರಿತಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ

ಸರ್ಕಾರದಲ್ಲಿ ಅಧಿಕಾರದಲ್ಲಿರುವವರ ಹೇಳಿಕೆಗಳು ಸ್ವೀಕಾರ ಯೋಗ್ಯವಲ್ಲ ಎಂದ ನ್ಯಾಯಾಲಯ ಅಂತಹ ಅಧಿಕಾರಸ್ಥರಿಗೆ ಸಲಹೆ ನೀಡಬೇಕು ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ಸೂಚಿಸಿತು.
Vice President Jagdeep Dhankar and Supreme courtFacebook
Vice President Jagdeep Dhankar and Supreme courtFacebook

ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಸರ್ಕಾರದಲ್ಲಿ ಅಧಿಕಾರಸ್ಥರು ನೀಡಿದ ಹೇಳಿಕೆಗಳ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರದಲ್ಲಿ ಅಧಿಕಾರದಲ್ಲಿರುವವರು ತನ್ನ ಹೇಳಿಕೆಗಳನ್ನು ಸ್ವೀಕಾರಾರ್ಹವಾಗಿಲ್ಲ ಎಂದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ವಿಕ್ರಮ್ ನಾಥ್ ಹಾಗೂ ಅಭಯ್ ಎಸ್ ಓಕಾ ಅವರಿದ್ದ ಪೀಠ ಅಂತಹ ಅಧಿಕಾರಸ್ಥರಿಗೆ ಸೂಕ್ತ ಸಲಹೆ ನೀಡುವಂತೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ತಾಕೀತು ಮಾಡಿತು.

Also Read
ಸರ್ಕಾರ ಕೊಲಿಜಿಯಂ ಕಡತಗಳ ತಡೆ ಹಿಡಿದಿಲ್ಲ, ಹಾಗೆ ಹೇಳುವುದಾದರೆ ನೀವೇ ನ್ಯಾಯಮೂರ್ತಿಗಳನ್ನು ನೇಮಿಸಿಕೊಳ್ಳಿ: ರಿಜಿಜು

ಸಂವಿಧಾನದಲ್ಲಿ ನಿಗದಿಪಡಿಸಿರುವಂತೆ ಸಂಸತ್ತಿಗೆ ಕಾನೂನನ್ನು ಜಾರಿಗೊಳಿಸುವ ಅಧಿಕಾರವಿದ್ದರೂ, ಅಂತಹ ಕಾನೂನನ್ನು ಪರಿಶೀಲಿಸುವ ಅಧಿಕಾರ ನ್ಯಾಯಾಲಯಗಳಿಗೆ ಇದೆ ಎಂದು ನ್ಯಾಯಾಲಯ ಹೇಳಿತು.

"ನಮ್ಮ ಸಂವಿಧಾನದ ರೂಪುರೇಷೆಯು ನಮ್ಮ ನ್ಯಾಯಾಲಯ ಕಾನೂನಿನ ಅಂತಿಮ ತೀರ್ಪುಗಾರರಾಗಿರಬೇಕು ಎಂದು ಬಯಸುತ್ತದೆ. ಸಂಸತ್ತಿಗೆ ಕಾನೂನನ್ನು ಜಾರಿಗೊಳಿಸುವ ಹಕ್ಕಿದೆ ಆದರೆ ಅದನ್ನು ಪರಿಶೀಲಿಸುವ ಅಧಿಕಾರ ನ್ಯಾಯಾಲಯಕ್ಕಿದೆ. ಈ ನ್ಯಾಯಾಲಯವು ರೂಪಿಸಿದ ಕಾನೂನನ್ನು ಪಾಲಿಸಬೇಕು. ಇಲ್ಲದಿದ್ದರೆ ಜನ ತಮಗೆ ಸರಿ ಎಂದು ತೋಚುವ ರೀತಿಯಲ್ಲಿ ಕಾನೂನನ್ನು ಪಾಲಿಸತೊಡಗುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.

ಸಂಸತ್ತು ಸಂವಿಧಾನಕ್ಕೆ ಮಾಡಿದ ಬದಲಾವಣೆಗಳನ್ನು ಸಾಂವಿಧಾನಿಕ ನ್ಯಾಯಾಲಯಗಳು ರದ್ದುಗೊಳಿಸುವುದು ಬೇರೆ ಯಾವುದೇ ಪ್ರಜಾಪ್ರಭುತ್ವದಲ್ಲಿಯೂ ನಡೆಯುವುದಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಅವರು ಇತ್ತೀಚಿಗೆ ನೀಡಿದ್ದ ಹೇಳಿಕೆಗಳ  ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅದರಲ್ಲಿಯೂ ಧನಕರ್‌ ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕೃತವಾಗಿದ್ದ ನ್ಯಾಯಾಂಗ ನೇಮಕಾತಿ ಆಯೋಗ ಕಾಯಿದೆಯನ್ನು ಪ್ರಸ್ತಾಪಿಸಿದ್ದರು. ಅದನ್ನು ಸುಪ್ರೀಂ ಕೋರ್ಟ್‌ ಈ ಹಿಂದೆ ರದ್ದುಗೊಳಿಸಿತ್ತು.

“ಕೊಲಿಜಿಯಂ ವ್ಯವಸ್ಥೆಸಂವಿಧಾನಕ್ಕೆ ಅನ್ಯವಾದುದಾಗಿದೆ. ಈ ವ್ಯವಸ್ಥೆಗೆ ಸಂವಿಧಾನದ ಯಾವ ನಿಯಮದಡಿ ಅವಕಾಶ ನೀಡಿದೆ ಎಂಬುದನ್ನು ನೀವು ತಿಳಿಸಿ. ಸುಪ್ರೀಂ ಕೋರ್ಟ್ ತನ್ನ ವಿವೇಕದಿಂದ ನ್ಯಾಯಾಲಯದ ರೂಲಿಂಗ್‌ ಅಥವಾ ತೀರ್ಪಿನ ಮೂಲಕ ಹೆಸರುಗಳನನು ಶಿಫಾರಸು ಮಾಡುವ, ಸರ್ಕಾರ ಅದನ್ನು ಪರಿಶೀಲಿಸುವ ಕೊಲಿಜಿಯಂ ವ್ಯವಸ್ಥೆ ರಚಿಸಿಕೊಂಡಿದೆ” ಎಂದು ನವೆಂಬರ್ 28, 2022 ರಂದು, ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಪ್ರತಿಕ್ರಿಯಿಸಿದ್ದರು.

ಆ ಹೇಳಿಕೆ ಕುರಿತಂತೆಯೂ ಸುಪ್ರೀಂ ಕೋರ್ಟ್‌ ಕಿಡಿಕಾರಿತ್ತು. ಕೊಲಿಜಿಯಂ ವ್ಯವಸ್ಥೆ ವಿರುದ್ಧವಾಗಿ ಕೆಲ ನ್ಯಾಯಮೂರ್ತಿಗಳು ನೀಡಿದ್ದ ಅಭಿಪ್ರಾಯವನ್ನೇ ಮುಂದುಮಾಡಿ ತಾನು ಕೊಲಿಜಿಯಂ ಶಿಫಾರಸುಗಳನ್ನು ವಿಳಂಬಗೊಳಿಸಲು ಇದೇ ಕಾರಣ ಎಂದು ಕೇಂದ್ರ ಸರ್ಕಾರ ಸಬೂಬು ಹೇಳುವಂತಿಲ್ಲ ಎಂದು ಅದು ಹೇಳಿತ್ತು.

Related Stories

No stories found.
Kannada Bar & Bench
kannada.barandbench.com