A1
ಸುದ್ದಿಗಳು

ಜುಹು ಬಂಗಲೆ ಪ್ರಕರಣ: ಕೇಂದ್ರ ಸಚಿವ ರಾಣೆಗೆ ಮಧ್ಯಂತರ ರಕ್ಷಣೆ ನೀಡಿದ ಬಾಂಬೆ ಹೈಕೋರ್ಟ್

ಅರ್ಜಿದಾರರು ಬಿಎಂಸಿಯ ಮುಂದೆ ಕಟ್ಟಡದ ಸಕ್ರಮವನ್ನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಮೊದಲು ನಿರ್ಧರಿಸುವಂತೆ ನ್ಯಾಯಾಲಯವು ಸೂಚಿಸಿದ್ದು, ಅಲ್ಲಿಯವರಗೆ ಯಾವುದೇ ಕ್ರಮಕ್ಕೆ ಮುಂದಾಗದಂತೆ ನಿರ್ದೇಶಿಸಿದೆ.

Bar & Bench

ಮುಂಬೈನ ಜುಹುದಲ್ಲಿರುವ ಆದಿಶ್ ಬಂಗಲೆಗೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೆ ಕೇಂದ್ರ ಸಚಿವ ನಾರಾಯಣ ರಾಣೆ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಬಾಂಬೆ ಹೈಕೋರ್ಟ್‌ ನಿರ್ದೇಶನ ನೀಡಿದೆ [ಕಾಲ್ಕಾ ರಿಯಲ್ ಎಸ್ಟೇಟ್ಸ್ ಪ್ರೈ. ಲಿಮಿಟೆಡ್ ಮತ್ತು ಮುನ್ಸಿಪಲ್ ಕಾರ್ಪೋರೇಶನ್ ಆಫ್ ಗ್ರೇಟರ್ ಮುಂಬೈ ಮತ್ತಿತರರ ನಡುವಣ ಪ್ರಕರಣ].

ಬಂಗಲೆಯ ನಿವೇಶನವನ್ನು ಸಕ್ರಮಗೊಳಿಸುವಂತೆ ಕೋರಿ ರಾಣೆ ಮತ್ತವರ ಕುಟುಂಬ ಷೇರುಗಳನ್ನು ಹೊಂದಿರುವ ಕಾಲ್ಕಾ ರಿಯಲ್ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ ಎ ಸಯೀದ್ ಮತ್ತು ಅಭಯ್ ಅಹುಜಾ ಅವರಿದ್ದ ಪೀಠವು ಅರ್ಜಿದಾರರು ಬಿಎಂಸಿಯ ಮುಂದೆ ಕಟ್ಟಡದ ಸಕ್ರಮವನ್ನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಮೊದಲು ನಿರ್ಧರಿಸಬೇಕು. ಅಲ್ಲಿಯವರಗೆ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಬಿಎಂಸಿಗೆ ನಿರ್ದೇಶಿಸಿದೆ.

ಇದೇ ವೇಳೆ, ಒಮ್ಮೆ ಅರ್ಜಿಯ ಕುರಿತು ಬಿಎಂಸಿಯು ಅಂತಿಮ ನಿರ್ಣಯ ಕೈಗೊಂಡ ನಂತರವೂ ಸಹ ಮೂರು ವಾರದವರೆಗೂ ಯಾವುದೇ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಸೂಚಿಸಿದೆ.

ಆರ್ಟ್‌ಲೈನ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿ ಬಿಎಂಸಿ ನೋಟಿಸ್‌ ನೀಡಿದ್ದು ಕಂಪೆನಿ ಈಗಾಗಲೇ ಕಾಲ್ಕಾದೊಂದಿಗೆ ವಿಲೀನಗೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮಧ್ಯಂತರ ರಕ್ಷಣೆ ನೀಡಿದ ಬಳಿಕ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.