ಕೋವಿಡ್ ಸಾಂಕ್ರಾಮಿಕತೆಯನ್ನು ಮುಂದು ಮಾಡಿ ಸೆಪ್ಟೆಂಬರ್ 2ರಂದು ನಿವೃತ್ತರಾಗಲಿರುವ ಹಿರಿಯ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಸುಪ್ರೀಂ ಕೋರ್ಟ್ ವಕೀಲರ ಪರಿಷತ್ತು (ಎಸ್‌ಸಿಬಿಎ) ಹಾಗೂ ಭಾರತೀಯ ವಕೀಲರ ಒಕ್ಕೂಟ (ಸಿಐಬಿ) ನೀಡಿದ್ದ ವಿದಾಯ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ಎಸ್‌ಸಿಬಿಎ ಮತ್ತು ಸಿಐಬಿಗೆ ಬರೆದಿರುವ ಪತ್ರದಲ್ಲಿ ಪರಿಷತ್ತು “ನ್ಯಾಯಾಂಗದ ತಾಯಿ” ಎಂದು ಬಣ್ಣಿಸಿರುವ ನ್ಯಾ. ಮಿಶ್ರಾ ಅವರು ವಿದಾಯ ಸಮಾರಂಭದಲ್ಲಿ ಭಾಗವಹಿಸುವುದು ಸಂತೋಷದ ವಿಚಾರವಾಗಿತ್ತು ಎಂದಿದ್ದಾರೆ.
“ಕೋವಿಡ್ ಸಾಂಕ್ರಾಮಿಕತೆಯಿಂದ ತಲೆದೋರಿರುವ ಪರಿಸ್ಥಿತಿ ಮತ್ತು ಜಗತ್ತಿನಾದ್ಯಂತದ ಕಾಣುತ್ತಿರುವ ನೋವಿನಿಂದ” ಸಮಾರಂಭದಲ್ಲಿ ಭಾಗವಹಿಸಲು ತಮ್ಮ ಆತ್ಮಸಾಕ್ಷಿಯು ಒಪ್ಪುತ್ತಿಲ್ಲ ಎಂದಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಪರಿಷತ್ತಿಗೆ ಭೇಟಿ ನೀಡಿ ತಮ್ಮ ಗೌರವ ಸಲ್ಲಿಸುವುದಾಗಿ ನ್ಯಾ. ಮಿಶ್ರಾ ಹೇಳಿದ್ದಾರೆ.
ನ್ಯಾ. ಮಿಶ್ರಾ ಅವರಿಗೆ ಯಾವುದೇ ತೆರನಾದ ವಿದಾಯ ಸಮಾರಂಭ ಆಯೋಜಿಸಬಾರದು ಎಂಬ ಎಸ್‌ಸಿಬಿಎನ ಕಾರ್ಯಕಾರಿ ಸಮಿತಿಯದು ಎನ್ನಲಾದ ಹೇಳಿಕೆಯೊಂದು ಚರ್ಚೆಗೆ ನಾಂದಿ ಹಾಡಿತ್ತು.
ಆದರೆ, ಇದನ್ನು ಎಸ್‌ಸಿಬಿಎ ಅಧ್ಯಕ್ಷ ದುಷ್ಯಂತ್ ಧವೆ ಅವರು ತಳ್ಳಿಹಾಕಿದ್ದಲ್ಲದೇ ಹೀಗೆ ಹೇಳಿದ್ದರು:
“ಮೇಲೆ ತಿಳಿಸಲಾದ ಮಾಹಿತಿ ಸುಳ್ಳು ಮತ್ತು ತಪ್ಪಿನಿಂದ ಕೂಡಿದ್ದಾಗಿದೆ. ಅಂಥ ಯಾವುದೇ ಹೇಳಿಕೆಯನ್ನು ಕಾರ್ಯಕಾರಿ ಸಮಿತಿ ಬಿಡುಗಡೆ ಮಾಡಿಲ್ಲ. ಅಲ್ಲದೇ ಯಾವುದೇ ಸಭೆಯಲ್ಲಿ ಈ ವಿಚಾರವನ್ನು ಕಾರ್ಯಕಾರಿ ಸಮಿತಿ ಪರಿಗಣಿಸುವುದಿಲ್ಲ. ಕಾರ್ಯಕಾರಿ ಸಮಿತಿಯದು ಎಂದು ಹೇಳಲಾಗುತ್ತಿರುವ ಮಾಧ್ಯಮ ಪ್ರಕಟಣೆಯು ನೈಜವಾದುದ್ದಲ್ಲ ಮತ್ತು ಇದನ್ನು ಕಾರ್ಯಕಾರಿ ಸಮಿತಿಯ ಪರವಾಗಿ ನಾನು ಅಲ್ಲಗಳೆಯುತ್ತೇನೆ. ಎಸ್‌ಸಿಬಿಎಗೆ ಕೆಡುಕುಂಟು ಮಾಡುವ ಈ ಕುತಂತ್ರದ ನಡೆಯನ್ನು ಗಂಭೀರವಾಗಿ ಅಲ್ಲಗಳೆಯುತ್ತೇನೆ”.
ಕೊಲ್ಕತ್ತಾ ಮತ್ತು ರಾಜಸ್ಥಾನ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಅರುಣ್ ಮಿಶ್ರಾ ಕರ್ತವ್ಯ ನಿರ್ವಹಿಸಿದ್ದಾರೆ. ರಾಜಸ್ಥಾನ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಮಿಶ್ರಾ ಸೇವೆ ಸಲ್ಲಿಸಿದ್ದಾರೆ.
ಮೂಲತಃ ಮಧ್ಯಪ್ರದೇಶ ಹೈಕೋರ್ಟ್‌ನವರಾದ ನ್ಯಾ. ಮಿಶ್ರಾ ಅವರ ತಂದೆ ದಿವಂಗತ ಹರಗೋವಿಂದ್ ಮಿಶ್ರಾ ಅವರೂ ಸಹ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದರು.
ನ್ಯಾ. ಮಿಶ್ರಾ ಅವರು 1986-1993ರ ವರೆಗೆ ಅರೆಕಾಲಿಕ ಕಾನೂನು ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಗ್ವಾಲಿಯರ್‌ನ ಜಿವಾಜಿ ವಿಶ್ವವಿದ್ಯಾಲಯದಲ್ಲಿ 1991-1996ರವರೆಗೆ ಕಾನೂನು ಬೋಧಕರ ಗುಂಪಿನ ಸದಸ್ಯರಾಗಿದ್ದರು.