ಸುದ್ದಿಗಳು

ಚೆನ್ನೈ ಪೊಲೀಸರಿಂದ ನಿವೃತ್ತ ನ್ಯಾಯಮೂರ್ತಿ ಸಿ ಎಸ್‌ ಕರ್ಣನ್‌ ಬಂಧನ

Bar & Bench

ಮಹಿಳೆಯರು ಮತ್ತು ನ್ಯಾಯಾಂಗದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ವೀಡಿಯೊಗಳನ್ನು ಹರಿಬಿಟ್ಟ ಆರೋಪದ ಮೇರೆಗೆ ಮದ್ರಾಸ್ ಮತ್ತು ಕೊಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಿ. ಎಸ್. ಕರ್ಣನ್ ಅವರನ್ನು ಬುಧವಾರ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ.

ʼಬಾರ್‌ ಅಂಡ್‌ ಬೆಂಚ್‌ʼಗೆ ಪ್ರತಿಕ್ರಿಯೆ ನೀಡಿದ ನ್ಯಾ. ಕರ್ಣನ್‌ ಪರ ವಕೀಲ ಪೀಟರ್‌ ರಮೇಶ್‌ ಕುಮಾರ್‌, “ತಮ್ಮ ರಾಜಕೀಯ ಪಕ್ಷ ಆಂಟಿ ಕರಪ್ಷನ್‌ ಡೈನಾಮಿಕ್‌ ಪಕ್ಷದ ಮುಖ್ಯಕಚೇರಿಯಿಂದ ಅವರನ್ನು ಬಂಧಿಸಲಾಗಿದೆ. ಕರ್ಣನ್ ಅವರನ್ನು ಎಗ್ಮೋರ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರುಪಡಿಸಲಾಗುತ್ತದೆ. ಬಳಿಕ ಅವರನ್ನು ಪುಳಲ್‌ ಕಾರಾಗೃಹಕ್ಕೆ ಕರೆದೊಯ್ಯುವ ಸಾಧ್ಯತೆಗಳಿವೆ.

ಕರ್ಣನ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಮಿಳುನಾಡು ಮತ್ತು ಪುದುಚೆರಿ ವಕೀಲರ ಪರಿಷತ್‌ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಡಿಸೆಂಬರ್ 7 ರಂದು ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಆಯುಕ್ತರು ಹಾಜರಿರಬೇಕೆಂದು ಮದ್ರಾಸ್‌ ಹೈಕೋರ್ಟ್‌ ಕೆಲ ದಿನಗಳ ಹಿಂದೆ ಸೂಚಿಸಿತ್ತು.

ಕರ್ಣನ್ ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಿಂದ ನಿರ್ಬಂಧಿಸಬೇಕೆಂದು ನವೆಂಬರ್ 10 ರಂದು ಮದ್ರಾಸ್‌ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಕಳೆದ ಸೋಮವಾರ, ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದ ನಂತರ ಕರ್ಣನ್‌ ಅವರನ್ನು ಎರಡು ಬಾರಿ ವಿಚಾರಣೆ ನಡೆಸಲಾಗಿದೆ ಎಂದು ಚೆನ್ನೈ ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದರು.