ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಿರುವ ಹೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಪತ್ರ ಬರೆದಿದ್ದು, ಘಟನೆಯ ಗಂಭೀರತೆ ಪರಿಗಣಿಸುವಂತೆ ಮನವಿ ಮಾಡಿದೆ.
ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆಗೆ ಆಗ್ರಹಿಸಿರುವ ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು “ಆರೋಪಿಗಳಿಗೆ ಕಠಿಣ ಮತ್ತು ತುರ್ತು ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ” ಕೋರಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 14ರಂದು 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಯುವತಿಯ ಶವವನ್ನು ತವರಿಗೆ ತಂದ ಬಳಿಕ ಮಧ್ಯರಾತ್ರಿಯಲ್ಲಿ ಉತ್ತರ ಪ್ರದೇಶ ಆಡಳಿತ ಮತ್ತು ಪೊಲೀಸರು ಆಕೆಯ ಪೋಷಕರ ಒಪ್ಪಿಗೆ ಪಡೆಯದೇ ಮತ್ತು ಅವರ ಸಮ್ಮುಖದಲ್ಲಿ ಶವ ಸಂಸ್ಕಾರ ನಡೆಸದೇ ಏಕಾಏಕಿ ಚಿತೆಗೆ ಹಾಕಿದ್ದಾರೆ.
ಪ್ರಕರಣವನ್ನು ಮುಚ್ಚಿಹಾಕಲು ಗ್ರಾಮಗಳ ನಡುವಿನ ವಿವಾದ ಎಂದು ಪೊಲೀಸರು ಮತ್ತು ಸ್ಥಳೀಯ ಆಡಳಿತ ಪ್ರಯತ್ನಿಸುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸರು ಮತ್ತು ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡುವ ಮೂಲಕ ಕಠಿಣ ಕ್ರಮ ಜರುಗಿಸಬೇಕು ಎಂದು ಡಿಸಿಡಬ್ಲ್ಯು ಮನವಿ ಮಾಡಿದೆ.
“ಯುವತಿಯ ಬದುಕು ಮತ್ತು ಸಾವಿನಲ್ಲಿ ಉತ್ತರ ಪ್ರದೇಶ ಸರ್ಕಾರವೂ ಎಲ್ಲಾ ರೀತಿಯ ಮೂಲಭೂತ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ” ಎಂದು ಹೇಳಿದೆ.
ಮಹಿಳೆಯರ ಬಗ್ಗೆ ವ್ಯವಸ್ಥೆಯ ಅಗೌರವ ಮತ್ತು ನಿರಾಸಕ್ತಿ ಸದರಿ ಪ್ರಕರಣದಲ್ಲಿ ಬಟಾಬಯಲಾಗಿದೆ. ಯುವತಿ ಗಂಭೀರವಾಗಿ ಗಾಯಗೊಂಡು ಬಹಿರಂಗವಾಗಿ ಬಿದ್ದಿದ್ದರೂ ಉತ್ತರ ಪ್ರದೇಶ ಪೊಲೀಸರು ಐದು ದಿನಗಳವರೆಗೆ ಎಫ್‌ಐಆರ್ ದಾಖಲಿಸಿಲ್ಲ ಎಂದೂ ಹೇಳಲಾಗಿದೆ.
ಇದರ ಜೊತೆಗೆ ಉತ್ತರ ಪ್ರದೇಶ ಸರ್ಕಾರವು ಯುವತಿ ಕೊನೆ ಉಸಿರೆಳೆಯುವ ದಿನವಾದ ಸೆಪ್ಟೆಂಬರ್ 28ರ ವರೆಗೆ ಸಂತ್ರಸ್ತೆಯನ್ನು ದೆಹಲಿ ಆಸ್ಪತ್ರೆಗೆ ವರ್ಗಾಯಿಸಲು ವಿಫಲವಾಗಿತ್ತು ಎಂದು ವಿವರಿಸಲಾಗಿದೆ. ಸಂತ್ರಸ್ತೆ ಹೇಳಿಕೆ ದಾಖಲಿಸಲು ಅವಕಾಶವಾಗಬಾರದು ಎಂದು ಆಕೆಯ ನಾಲಿಗೆಯನ್ನೂ ನಾಲ್ವರು ಆರೋಪಿಗಳು ತುಂಡರಿಸಿದ್ದಾರೆ. ಸಂತ್ರಸ್ತೆಯ ಕುಟುಂಬ ಸದಸ್ಯರೂ ಹೇಳಿಕೆ ನೀಡಬಾರದು ಎಂದು ಆರೋಪಿಗಳು ಅವರನ್ನು ಬೆದರಿಸಿದ್ದಾರೆ ಎಂದು ಮಲಿವಾಲ್ ಪತ್ರದಲ್ಲಿ ವಿವರಿಸಿದ್ದಾರೆ.
ಆರೋಪಿಗಳು, ಪೊಲೀಸರು ಮತ್ತು ಆಡಳಿತದ ವಿರುದ್ಧದ ಆರೋಪಗಳನ್ನು ಉಲ್ಲೇಖಿಸಿರುವ ಡಿಸಿಬ್ಲ್ಯು ಪ್ರಕರಣದೆಡೆಗೆ ಗಂಭೀರವಾಗಿ ಗಮನಹರಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.