ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರು ಸೋಮವಾರ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಪ್ರಮಾಣ ವಚನ ಬೋಧಿಸಿದರು.
ನ್ಯಾಯಮೂರ್ತಿ ಬಾಗ್ಚಿಯವರ ನೇಮಕಾತಿಯೊಂದಿಗೆ, 34 ನ್ಯಾಯಮೂರ್ತಿಗಳ ಅನುಮೋದಿತ ಬಲ ಹೊಂದಿರುವ ಸುಪ್ರೀಂ ಕೋರ್ಟ್‌ನಲ್ಲಿ 33 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಒಂದು ಹುದ್ದೆ ಖಾಲಿ ಉಳಿದಿದೆ.
ನ್ಯಾಯಮೂರ್ತಿ ಬಾಗ್ಚಿ ಅವರ ಹೆಸರನ್ನು ಮಾರ್ಚ್ 6ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಪದೋನ್ನತಿಗೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಮಾರ್ಚ್ 10 ರಂದು ಅದನ್ನು ಅನುಮೋದಿಸಿತ್ತು.
ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರನ್ನು ಜೂನ್ 27, 2011ರಂದು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಯಿತು. ಜನವರಿ 4, 2021ರಂದು ಆಂಧ್ರಪ್ರದೇಶದ ಹೈಕೋರ್ಟ್‌ಗೆ ವರ್ಗಾವಣೆಗೊಂಡ ಅವರು ನವೆಂಬರ್ 8, 2021ರಂದು ಕಲ್ಕತ್ತಾ ಹೈಕೋರ್ಟ್‌ಗೆ ಮರುವರ್ಗವಾದರು. ಅಂದಿನಿಂದ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದರು. ಅವರು 13 ವರ್ಷಗಳಿಗೂ ಹೆಚ್ಚು ಕಾಲ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ, ನ್ಯಾಯಮೂರ್ತಿ ಬಾಗ್ಚಿ ಅವರು 6 ವರ್ಷಗಳಿಗೂ ಹೆಚ್ಚು ಸುದೀರ್ಘ ಅಧಿಕಾರಾವಧಿ ಹೊಂದಿರಲಿದ್ದು ನ್ಯಾ. ಕೆ ವಿ ವಿಶ್ವನಾಥನ್ ಅವರ ನಿವೃತ್ತಿಯ ನಂತರ ಮೇ 2031ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಲಿದ್ದಾರೆ.
ಆದರೆ ಅವರು ಅದೇ ವರ್ಷ ಅವರು ಅಕ್ಟೋಬರ್‌ನಲ್ಲಿ ನಿವೃತ್ತರಾಗುವುದರಿಂದ ತುಲನಾತ್ಮಕವಾಗಿ ಕಡಿಮೆ ಅವಧಿಗೆ ಮಾತ್ರ ಸಿಜೆಐ ಆಗಿ ಸೇವೆ ಸಲ್ಲಿಸಲಿದ್ದಾರೆ.