ಸುದ್ದಿಗಳು

ಪ್ರಕರಣದಿಂದ ಹಿಂಸರಿದರೆ ನಾನು ಮಾಧ್ಯಮ ವಿಚಾರಣೆಗೆ ಒಳಗಾಗುವುದಿಲ್ಲವೇ? ಮಮತಾ ಅರ್ಜಿ ಆದೇಶ ಕಾಯ್ದಿರಿಸಿದ ನ್ಯಾ. ಚಂದಾ

Bar & Bench

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಚುನಾಯಿತರಾಗಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದರೆ ತಾವು ಮಾಧ್ಯಮ ವಿಚಾರಣೆಗೆ ಒಳಗಾಗಬೇಕಾಗುತ್ತದೆ ಎಂದು ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಕೌಶಿಕ್‌ ಚಂದಾ ಅಭಿಪ್ರಾಯಪಟ್ಟಿದ್ದಾರೆ. ಈ ಅವಲೋಕನದೊಂದಿಗೆ ಅವರು ಅರ್ಜಿಗೆ ಸಂಬಂಧಿಸಿದ ಆದೇಶ ಕಾಯ್ದಿರಿಸಿದರು.

ಮಮತಾ ಪರ ಹಾಜರಾದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ತಾವು ಹಿಂದೆ ಸರಿಯುವಿಕೆ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ನ್ಯಾ ಚಂದಾ ಅವರನ್ನು ಗುರುವಾರ ಬೆಳಿಗ್ಗೆ ಕೋರಿದ್ದರು. ಆಡಳಿತಾತ್ಮಕ ಕಡೆಯಿಂದ ಸಲ್ಲಿಸಲಾದ ಹಿಂಸರಿಯುವಿಕೆ ಅರ್ಜಿಗೆ ಸಂಬಂಧಿಸಿದಂತೆ ಇನ್ನೂ ಆದೇಶ ಹೊರಬೀಳಬೇಕಿದೆ.

ಕಳೆದ ವಾರ ಕಲ್ಕತ್ತಾ ಹೈಕೋರ್ಟ್‌ನಿಂದ ಪದೋನ್ನತಿ ಹೊಂದಿದ್ದ ಇಬ್ಬರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿಸಿದ ಸಿಂಘ್ವಿ ಅವರು ಪ್ರಕರಣದಿಂದ ಹಿಂದೆ ಸರಿಯದಿದ್ದಾಗ ಮಾತ್ರ ನ್ಯಾ. ಚಂದಾ ಹೆಚ್ಚಿನ ಟೀಕೆಗೆ ಒಳಗಾಗುತ್ತಾರೆ ಎಂದು ತಿಳಿಸಿದರು.

ಈ ಹಂತದಲ್ಲಿ ನ್ಯಾಯಮೂರ್ತಿಗಳು “ಕಾಂಗ್ರೆಸ್‌ನೊಂದಿಗೆ ನಂಟು ಹೊಂದಿರುವ ಸಿಂಘ್ವಿ ಮತ್ತು ಬಿಜೆಪಿಯ ಜೊತೆ ಸಂಪರ್ಕದಲ್ಲಿರುವ ಮತ್ತೊಬ್ಬ ವಕೀಲರು ಈ ಪ್ರಕರಣದಲ್ಲಿ ಮುಖ್ಯಮಂತ್ರಿ (ಮಮತಾ ಬ್ಯಾನರ್ಜಿ) ಪರ ವಾದ ಮಂಡಿಸುತ್ತಿದ್ದಾರೆ” ಎಂದು ಬೊಟ್ಟು ಮಾಡಿದರು.

ಆಗ ಸಿಂಘ್ವಿ ಅವರು "ನ್ಯಾಯಮೂರ್ತಿಗಳು ಅದಕ್ಕಿಂತಲೂ ಎತ್ತರದ ಸ್ಥಾನದಲ್ಲಿದ್ದಾರೆ" ಎಂದು ಪ್ರತಿಕ್ರಿಯಿಸಿದರು. “ಬಿಜೆಪಿಯೊಂದಿಗೆ ಆಳ ಒಡನಾಟ ಹೊಂದಿರುವ ನ್ಯಾಯಮೂರ್ತಿಗಳ ವಿರುದ್ದ ಸ್ಪಷ್ಟ ಗ್ರಹಿಕೆ ಮೂಡುತ್ತದೆ” ಎಂದರು. ಬಳಿಕ ನ್ಯಾ. ಚಂದಾ ಅವರು ಹಿಂಸರಿಯುವಿಕೆ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿದರು.