ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಚುನಾಯಿತರಾಗಿರುವುದನ್ನು ಪ್ರಶ್ನಿಸಿ ತಾವು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ವರ್ಚುವಲ್ ವಿಧಾನದ ಮೂಲಕ ಕಲ್ಕತಾ ಹೈಕೋರ್ಟ್‌ಗೆ ಹಾಜರಾದರು.
1951ರ ಜನಪ್ರತಿನಿಧಿ ಕಾಯಿದೆಯ ಅಗತ್ಯದಂತೆ ಮುಖ್ಯಮಂತ್ರಿ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಬ್ಯಾನರ್ಜಿ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಮೂರ್ತಿ ಕೌಶಿಕ್ ಚಂದಾ ಅವರಿಂದ ಪ್ರಕರಣವನ್ನು ಹಿಂಪಡೆಯಬೇಕೆಂದು ಕೋರಿದರು.
ಆದರೆ, ಪ್ರಕರಣವನ್ನು ಮೊದಲು ಆಲಿಸಲಾದ ಜೂನ್ 18ರ ದಿನವೇ ಹಿಂಪಡೆಯುವಿಕೆ ಅರ್ಜಿಯನ್ನು ಏಕೆ ಸಲ್ಲಿಸಲಿಲ್ಲ ಎಂದು ನ್ಯಾಯಾಲಯ ಕೇಳಿತು. ಆಡಳಿತಾತ್ಮಕ ನೆಲೆಯಿಂದ ಬಾಕಿ ಇರುವ ಅರ್ಜಿಯನ್ನು ನ್ಯಾಯಾಂಗದ ಕಡೆಯಿಂದ ವಿಚಾರಣೆ ಮುಂದುವರೆಸಬೇಕೆ ಎಂದು ನ್ಯಾ. ಚಂದಾ ಅಚ್ಚರಿ ವ್ಯಕ್ತಪಡಿಸಿದರು.
ಆಗ ಸಿಂಘ್ವಿ ಅವರು “ತಮ್ಮ ಅಧಿಕಾರ ಬಳಸಿ ತಾವೇ ಸ್ವತಃ ವಿಚಾರಣೆಯಿಂದ ಹಿಂದೆ ಸರಿಯಬಹುದು” ಎಂದು ಕೋರಿದರು. ಹಿಂಪಡೆಯುವಿಕೆ ಅರ್ಜಿಯಲ್ಲಿ ನ್ಯಾ. ಚಂದಾ ಅವರ ನ್ಯಾಯಾಂಗ ನಿರ್ಧಾರ ಅವಶ್ಯಕ ಎಂದು ಕೂಡ ಅವರು ಹೇಳಿದರು. ನ್ಯಾ. ಚಂದಾ ಅವರು ಬಿಜೆಪಿಯಂದಿಗೆ ಸೈದ್ಧಾಂತಿಕ, ಆರ್ಥಿಕ, ವೈಯಕ್ತಿಕ ಹಾಗೂ ವೃತ್ತಿಪರ ನಂಟು ಹೊಂದಿದ್ದಾರೆ ಎಂದು ಆರೋಪಿಸಿರುವ ಹಿಂಪಡೆಯುವಿಕೆ ಅರ್ಜಿಯ ಅಂಶಗಳನ್ನು ಸಿಂಘ್ವಿ ಓದಿದರು.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ನಂದಿಗ್ರಾಮದಿಂದ ಚುನಾಯಿತರಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾ. ಚಂದಾ ಅವರ ಪೀಠದಿಂದ ಮರುನಿಯೋಜಿಸಬೇಕು ಎಂದು ಕಳೆದ ವಾರ ಕಲ್ಕತ್ತಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದರು. ನ್ಯಾ. ಚಂದಾ ಅವರು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದರು. ಇದು ವಿಚಾರಣೆ ವೇಳೆ ಪಕ್ಷಪಾತಕ್ಕೆ ಕಾರಣವಾಗಬಹುದು ಎಂದು ಪತ್ರದಲ್ಲಿ ತಿಳಿಸಲಾಗಿತ್ತು.