Justice MR Shah and Supreme Court
Justice MR Shah and Supreme Court 
ಸುದ್ದಿಗಳು

ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾ. ಎಂ ಆರ್ ಶಾ ನಕಾರ

Bar & Bench

ಗುಜರಾತ್‌ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ಸೋಮವಾರ ಹೇಳಿದ್ದಾರೆ [ಸಂಜೀವ್‌ಕುಮಾರ್ ರಾಜೇಂದ್ರಭಾಯ್ ಭಟ್ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಕಸ್ಟಡಿ ಸಾವಿನ ಪ್ರಕರಣದಲ್ಲಿ ತನಗೆ ವಿಧಿಸಲಾಗಿದ್ದ ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಭಟ್‌ ಅವರು ಗುಜರಾತ್ ಹೈಕೋರ್ಟ್‌ ಮುಂದೆ ಹೆಚ್ಚುವರಿ ಸಾಕ್ಷ್ಯಗಳನ್ನು ಸಲ್ಲಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ನ್ಯಾ. ಶಾ ಅವರು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ವೇಳೆ ಭಟ್‌ ಅವರಿಗೆ ಶಿಕ್ಷೆ ವಿಧಿಸಲಾಗಿದ್ದ ಪ್ರಕರಣವನ್ನು ಆಲಿಸಿದ್ದ ಹಿನ್ನೆಲೆಯಲ್ಲಿ ಶಾ ಅವರು ತಮ್ಮ ಪ್ರಸಕ್ತ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಭಟ್‌ ವಿನಂತಿಸಿದ್ದರು.

ಭಟ್‌ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆದೇಶ ನೀಡಿದ್ದು ಹತ್ತು ವರ್ಷಗಳ ಹಿಂದೆಯಾದ್ದರಿಂದ ಈಗ ಈ ಪ್ರಕರಣದ ವಿಚಾರಣೆ ನಿರಾಕರಿಸುವುದು ಅಷ್ಟು ಸೂಕ್ತವಾಗದು ಎಂದು ನ್ಯಾಯಮೂರ್ತಿಗಳಾದ ಶಾ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಹೇಳಿದೆ.  

“ಹತ್ತು ವರ್ಷದ ಹಿಂದೆ ಆದೇಶ ನೀಡಲಾಗಿದ್ದು ಇದು (ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು) ಆಧಾರವಾಗುತ್ತದೆಯೇ?” ಎಂದು ನ್ಯಾಯಾಲಯ ಪ್ರಶ್ನಿಸಿದೆ. ಪ್ರಕರಣದ ಅರ್ಹತೆಯ ಆಧಾರದಲ್ಲಿ ಇಂದು ವಿಚಾರಣೆ ಮುಂದುವರೆಯಲಿದೆ.

ಗುಜರಾತ್‌ನ ಜಾಮ್‌ನಗರ ಸೆಷನ್ಸ್ ನ್ಯಾಯಾಲಯ 1990 ರ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್‌ ಅಧಿಕಾರಿಯಾಗಿದ್ದ ಭಟ್‌ ಅವರನ್ನು 2019ರಲ್ಲಿ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 2011ರಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಲು ಅಂದಿನ ಹೈಕೋರ್ಟ್‌ ನ್ಯಾಯಮೂರ್ತಿ ಶಾ ನಿರಾಕರಿಸಿದ್ದರು.

ಈಗ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದು ತಾನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವಿಶೇಷ ಅನುಮತಿಯನ್ನು ಅದೇ ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದರೆ ನ್ಯಾಯ ದೊರೆಯುವುದಿಲ್ಲ ಎಂಬುದು ಭಟ್‌ ಅವರ ಆತಂಕವಾಗಿತ್ತು.

ಶಾ ಅವರು ಇದೇ ಪ್ರಕರಣದಲ್ಲಿ ನ್ಯಾಯಮೂರ್ತಿಯಾಗಿ ವಿಚಾರಣೆ ನಡೆಸಿದರೆ ಪಕ್ಷಪಾತ ಎಸಗಿದಂತಾಗುತ್ತದೆ ಎಂದು ಭಟ್ ಪರವಾಗಿ ಹಾಜರಾದ ಹಿರಿಯ ವಕೀಲ ದೇವದತ್‌ ಕಾಮತ್ ಅವರು ಜನವರಿಯಲ್ಲಿ, ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಭಟ್ ಅವರು ನರೇಂದ್ರ ಮೋದಿ ಸರ್ಕಾರದ  ಕಟು ಟೀಕಾಕಾರರಾಗಿದ್ದರು. ಗುಜರಾತ್ ಗಲಭೆಯಲ್ಲಿ ಮೋದಿ ನೇತೃತ್ವದ ರಾಜ್ಯ ಸರ್ಕಾರ ಶಾಮೀಲಾಗಿತ್ತು ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಸೇವೆಗೆ ಅನಧಿಕೃತವಾಗಿ ಗೈರುಹಾಜರಾದ ಕಾರಣಕ್ಕಾಗಿ 2015ರಲ್ಲಿ ಗೃಹ ಸಚಿವಾಲಯ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. 22 ವರ್ಷ ಹಳೆಯದಾದ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸದಂತೆಯೂ ಭಟ್‌ ಬಂಧನದಲ್ಲಿದ್ದಾರೆ.