ನಾನು ತೀರ್ಪು ಒಪ್ಪಿಕೊಳ್ಳುತ್ತೇನೆ ಎಂದರ್ಥವಲ್ಲ; ನ್ಯಾ. ಅರುಣ್ ಮಿಶ್ರಾ ಪೀಠ ನಿಂದನಾ ಪ್ರಕರಣ ಆಲಿಸಬಾರದಿತ್ತು: ಭೂಷಣ್

"ಸುಪ್ರೀಂ ಕೋರ್ಟ್‌ನ ಸಾಂಸ್ಥಿಕ ಪಾತ್ರದ‌ ಕುರಿತಾದ ಯಾವುದೇ ಮತ್ತು ಎಲ್ಲಾ ವಿಧದ ಟೀಕೆಯು ಕ್ರಿಮಿನಲ್ ನ್ಯಾಯಾಂಗ ನಿಂದನೆಯ ಅಪರಾಧ” ಎಂದು ಸರ್ವೋಚ್ಚ ನ್ಯಾಯಾಲಯ ಈ ತೀರ್ಪಿನ ಮೂಲಕ ಹೇಳಿದೆ ಎಂದು ಪ್ರಶಾಂತ್ ಭೂಷಣ್ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
Prashant Bhushan
Prashant Bhushan

ನ್ಯಾಯಾಂಗವನ್ನು ವಿಮರ್ಶಿಸಿ ಮಾಡಿದ್ದ ಟ್ವೀಟ್‌ಗಳಿಂದ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟು ₹1 ಜುಲ್ಮಾನೆ ಶಿಕ್ಷೆಗೆ ಒಳಗಾಗಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಇಂದು ಸುಪ್ರೀಂ ಕೋರ್ಟ್‌ ಗೆ ಜುಲ್ಮಾನೆಯನ್ನು ಒಳಗೊಂಡ ಕರಡು ಠೇವಣಿ ಸಲ್ಲಿಸಿದರು. ಇದರ ಜೊತೆಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟಿರುವ ಆಗಸ್ಟ್ 14ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಭೂಷಣ್ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲೆ ಕಾಮಿನಿ ಜೈಸ್ವಾಲ್ ಅವರು ಭೂಷಣ್ ಅವರನ್ನು ಪ್ರಕರಣದಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಹೊರಾಂಗಣದಲ್ಲಿ ಸುದ್ದಿಗೋಷ್ಠಿಯಯಲ್ಲಿ ಮಾತನಾಡಿದ ಭೂಷಣ್ ಅವರು ದಂಡ ಪಾವತಿಸಿದ ಮಾತ್ರಕ್ಕೆ‌ ತನ್ನ ವಿರುದ್ಧದ ತೀರ್ಪನ್ನು ಒಪ್ಪಿಕೊಂಡಿದ್ದೇನೆ ಎಂದರ್ಥವಲ್ಲ ಎಂದಿದ್ದಾರೆ.

“ನಾನು ತೀರ್ಪು ಒಪ್ಪಿಕೊಂಡಿದ್ದೇನೆ ಎಂದು ಹೇಳುತ್ತಿಲ್ಲ. ನಾವು ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತಿದ್ದೇವೆ. ಎರಡು ದಿನಗಳ ಹಿಂದೆ ಕ್ರಿಮಿನಲ್ ಅಪರಾಧದಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕಿನ ಕುರಿತು ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಸುವಂತೆ ರಿಟ್‌ ಅರ್ಜಿ ಸಲ್ಲಿಸಿದ್ದೇವೆ” ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಹಾಗೂ ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಭೂಷಣ್ ಕೋರಿದ್ದಾರೆ. ಕಾನೂನು ಮತ್ತು ಸತ್ಯಗಳ ದೃಷ್ಟಿಯಿಂದ ತೀರ್ಪಿನಲ್ಲಿ ಹಲವು ದೋಷಗಳು ಇರುವುದರಿಂದ ತೀರ್ಪು ಮರುಪರಿಶೀಲಿಸಬೇಕು. ಸುಪ್ರೀಂ ಕೋರ್ಟ್ ನಿಯಮಗಳು -2013ರ ಆದೇಶ 47, ನಿಯಮ 1ರ ಅಡಿ ಅರ್ಜಿ ಮಾನ್ಯ ಮಾಡಬೇಕಿದೆ ಎಂದಿದ್ದಾರೆ.

ಅಪರಾಧಿ ಎಂದು ಘೋಷಿಸುವುದು ಮತ್ತು ಶಿಕ್ಷೆ ಪ್ರಮಾಣ ಪ್ರಕಟಿಸುವುದು ಕ್ರಿಮಿನಲ್ ಪ್ರಕ್ರಿಯೆಯಲ್ಲಿ “ಪ್ರತ್ಯೇಕ ಮತ್ತು ಸ್ವತಂತ್ರ ಹಂತಗಳಾಗಿವೆ. ಪ್ರರಕಣದ ತೀರ್ಪು ಮತ್ತು ಶಿಕ್ಷೆಯ ತೀರ್ಪುಗಳೆರಡನ್ನೂ ಮರುಪರಿಶೀಲಿಸುವಂತೆ ಕೋರುವ ಹಕ್ಕು ತಮಗಿದೆ ಇದೆ" ಎಂದು ಭೂಷಣ್ ಹೇಳಿದ್ದಾರೆ.

“ಗೌರವಾನ್ವಿತ ನ್ಯಾಯಾಲಯದ ಪರಿಶೀಲನಾ ಅಧಿಕಾರಕ್ಕೆ ಅನ್ವಯವಾಗುವಂತೆ ಸಾಂವಿಧಾನಿಕ ಅಥವಾ ಶಾಸನಬದ್ಧ ಕಾನೂನಿನಲ್ಲಿ ಈ ಹಕ್ಕನ್ನು ಮಿತಿಗೊಳಿಸುವುದಿಲ್ಲ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ತೀರ್ಪು ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮುಕ್ತ ನ್ಯಾಯಾಲಯದಲ್ಲಿ ನಡೆಸುವಂತೆ ಕೋರಿರುವ ಭೂಷಣ್ ಅವರು ಹೀಗೆ ಹೇಳಿದ್ದಾರೆ.

“ಸಂವಿಧಾನದ ಪರಿಚ್ಛೇದ 129ರ ಅಡಿ ಕ್ರಿಮಿನಲ್ ನ್ಯಾಯಾಂಗ ನಿಂದನಾ ವಿಭಿನ್ನ ಪ್ರಕ್ರಿಯೆ ನಡೆಯಲಿದ್ದು, ಸದರಿ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ನಿಂದನೆ ಮಾಡಿಲ್ಲ. ಸದ್ಯದ ಅರ್ಜಿಯನ್ನು ಒಪ್ಪಿಕೊಳ್ಳುವುದು ಮತ್ತು ಅದರ ಅರ್ಹತೆಯ ಕುರಿತು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು”.

ತೀರ್ಪು ಮರುಪರಿಶೀಲನೆ ಕೋರಿರುವ ಭೂಷಣ್ ಅವರು ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ, ಶಿಕ್ಷೆ ವಿಧಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಸದರಿ ಪ್ರಕರಣದ ವಿಚಾರಣೆ ನಡೆಸಬಾರದಿತ್ತು. ನ್ಯಾ. ಮಿಶ್ರಾ ಅವರು ತಮ್ಮ ವಿರುದ್ಧ ಪಕ್ಷಪಾತದ ನಿಲುವು ಹೊಂದಿದ್ದರು ಎಂದು ಅಭಿಪ್ರಾಯಪಟ್ಟಿದ್ದು ಮನವಿಯಲ್ಲಿ ಹೀಗೆ ಹೇಳಿದ್ದಾರೆ.

“...ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ಹಲವು ಸಂದರ್ಭಗಳಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ತೀರ್ಪು ಮರುಪರಿಶೀಲನಾ ಅರ್ಜಿದಾರರನ್ನು ಮೌಖಿಕವಾಗಿ ನಿಂದಿಸಿದ್ದಾರೆ. ಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಡುವಂಥ ಇಂಥ ಪ್ರಕರಣಗಳ ವಿಚಾರಣೆ ನಡೆಸುವುದು ಸರಿಯಲ್ಲ.”

“ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನಾ ಪ್ರಕ್ರಿಯೆಯಲ್ಲಿ ಅಟಾರ್ನಿ ಜನರಲ್ ಅವರ ಪಾತ್ರ ಅತ್ಯಂತ ಮುಖ್ಯವಾಗಿದೆ. ಏಕೆಂದರೆ, ಅವರೊಬ್ಬರೇ ಈ ವಿಚಾರದಲ್ಲಿ ನ್ಯಾಯಾಂಗ ನಿಂದನೆಯಾಗಿದೆಯೇ ಇಲ್ಲವೇ ಎನ್ನುವ ಬಗ್ಗೆ ಬೆಳಕು ಚೆಲ್ಲುವ ಸ್ವತಂತ್ರ ವ್ಯಕ್ತಿಯಾಗಿರುತ್ತಾರೆ; ಇಲ್ಲಿ ನ್ಯಾಯಾಲಯವು ನೋವಿಗೀಡಾಗಿರುವ ಪಕ್ಷಕಾರನಾಗಿದೆ ಹಾಗೂ ತೀರ್ಪನ್ನು ನೀಡುವ ಸ್ಥಾನವನ್ನೂ ಹೊಂದಿದೆ, ಅದೇ ರೀತಿ ನಿಂದನಾದೋಷಿಯು ಇಲ್ಲಿ ಪ್ರತಿವಾದಿಯೂ ಆಗಿರುತ್ತಾರೆ," ಎಂದು ಮನವಿಯಲ್ಲಿ ಹೇಳಲಾಗಿದೆ.

Also Read
ಭ್ರಷ್ಟಾಚಾರದ ಬಗ್ಗೆ ಚರ್ಚಿಸದಿದ್ದರೆ, ನ್ಯಾಯಾಂಗದಲ್ಲಿ ಸುಧಾರಣೆ ತರುವುದು ಹೇಗೆ? ಪ್ರಶಾಂತ್ ಭೂಷಣ್

ನ್ಯಾಯಾಂಗವನ್ನು ವಿಮರ್ಶಿಸಿ ಮಾಡಲಾದ ಪ್ರಶ್ನಾರ್ಹವಾದ ಟ್ವೀಟ್‌ಗಳು ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆಗೆ ಒಳಪಡುವುದಿಲ್ಲ ಮತ್ತು ಭೂಷಣ್ ಅವರ ಪ್ರತಿವಾದವನ್ನು ಆಲಿಸಿಲ್ಲ. “ಸುಪ್ರೀಂ ಕೋರ್ಟ್‌ನ ಸಾಂಸ್ಥಿಕ ಪಾತ್ರದ‌ ಕುರಿತಾದ ಯಾವುದೇ ಮತ್ತು ಎಲ್ಲಾ ವಿಧದ ಟೀಕೆಯು ಕ್ರಿಮಿನಲ್ ನ್ಯಾಯಾಂಗ ನಿಂದನೆಯ ಅಪರಾಧ” ಎಂದು ಸುಪ್ರೀಂ ಕೋರ್ಟ್ ಈ ತೀರ್ಪಿನ ಮೂಲಕ ಹೇಳಿದೆ ಎನ್ನುವ ಅಂಶಗಳನ್ನು ಮನವಿಯಲ್ಲಿ ಪ್ರಮುಖವಾಗಿ ಎತ್ತಲಾಗಿದೆ.

Kannada Bar & Bench
kannada.barandbench.com