ಸುದ್ದಿಗಳು

ವಿವಾದ ಇತ್ಯರ್ಥಕ್ಕೆ ಕಕ್ಷಿದಾರರಿಗೆ ಸಲಹೆ ನೀಡುವ ಮೂಲಕ ವಕೀಲರು ಬಾಕಿ ಪ್ರಕರಣಗಳ ಸಂಖ್ಯೆ ಕಡಿತಗೊಳಿಸಬಹುದು: ನ್ಯಾ. ರಮಣ

ಕಾನೂನು ಶಿಕ್ಷಣದ ಗುಣಮಟ್ಟ ಕುಸಿದಿರುವುದೂ ದೇಶದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಇದನ್ನು ಸರಿಪಡಿಸಲು ನ್ಯಾಯಾಂಗ ಪ್ರಯತ್ನಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹೇಳಿದರು.

Bar & Bench

ದಾವೆ ಹೂಡುವುದಕ್ಕೂ ಮುನ್ನ ವಿವಾದ ಬಗೆಹರಿಸಿಕೊಳ್ಳುವಂತೆ ಕಕ್ಷಿದಾರರಿಗೆ ಸಲಹೆ ನೀಡುವ ಮೂಲಕ ವಕೀಲರು ಬಾಕಿ ಪ್ರಕರಣಗಳ ಸಂಖ್ಯೆ ಕಡಿತಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್‌ನಿಯೋಜಿತ ಮುಖ್ಯ ನ್ಯಾ. ಎನ್‌ ವಿ ರಮಣ ಹೇಳಿದ್ದಾರೆ.

ವಿಶಾಖಪಟ್ಟಣಂನಲ್ಲಿರುವ ದಾಮೋದರಂ ಸಂಜೀವಯ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಡಿಎಸ್‌ಎನ್‌ಎಲ್‌ಯು) ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳದೇ ತಮ್ಮ ಹಕ್ಕುಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ವಕೀಲರು ಸರಿಯಾದ ರೀತಿಯ ಸಲಹೆಗಳನ್ನು ತಮ್ಮ ಕಕ್ಷಿದಾರರಿಗೆ ನೀಡಬೇಕು. ಹೀಗೆ ಮಾಡುವುದು ತಮ್ಮ ಕಕ್ಷಿದಾರರಿಗೆ ವಕೀಲರು ನಿರ್ವಹಿಸುವ ಕರ್ತವ್ಯವಷ್ಟೇ ಅಲ್ಲ, ಈ ಮೂಲಕ ಅವರು ನ್ಯಾಯಾಲಯ, ಸಮಾಜ ಹಾಗೂ ಕಾನೂನಿಗೆ ತೋರುವ ಗೌರವವೂ ಆಗಿರುತ್ತದೆ ಎಂದು ನ್ಯಾ. ರಮಣ ಹೇಳಿದ್ದಾರೆ.

ಜನರನ್ನು ಒಂದಾಗಿಸುವ ಮಹತ್ತರ ಜವಾಬ್ದಾರಿ ನಿಭಾಯಿಸುವ ವಕೀಲರ ನೈಜ ಕರ್ತವ್ಯದ ಬಗ್ಗೆ ಕಾನೂನು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಬೇಕಿದೆ ಎಂದಿರುವ ನ್ಯಾ. ರಮಣ ಅವರು ಕಾನೂನು ಶಿಕ್ಷಣದ ಗುಣಮಟ್ಟ ಕಳಪೆಯಾಗಿರುವುದೂ ಪ್ರಕರಣಗಳು ಅಪಾರ ಸಂಖ್ಯೆಯಲ್ಲಿ ಬಾಕಿ ಉಳಿಯಲು ಕಾರಣವಾಗಿದೆ. ದೇಶದಲ್ಲಿನ ಬಹುತೇಕ ಕಾಲೇಜುಗಳಲ್ಲಿನ ಕಾನೂನು ಶಿಕ್ಷಣದ ಗುಣಮಟ್ಟವು ಕೆಳದರ್ಜೆಯಲ್ಲಿದೆ. ಇದನ್ನು ಸರಿಪಡಿಸುವ ಕೆಲಸವನ್ನೂ ನ್ಯಾಯಾಂಗ ಮಾಡುತ್ತಿದೆ ಎಂದು ಹೇಳಿದ್ದಾರೆ.

“ದೇಶದಲ್ಲಿ 1,500ಕ್ಕೂ ಅಧಿಕ ಕಾನೂನು ಕಾಲೇಜುಗಳು ಹಾಗೂ ಕಾನೂನು ಶಾಲೆಗಳಿವೆ. 23 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳೂ ಒಳಗೊಂಡಂತೆ ಪ್ರತಿವರ್ಷ ಸುಮಾರು 1.50 ಲಕ್ಷ ವಿದ್ಯಾರ್ಥಿಗಳು ಇಲ್ಲಿಂದ ಪದವೀಧರರಾಗಿ ಹೊರಬರುತ್ತಿದ್ದಾರೆ. ಇದು ನಿಜಕ್ಕೂ ಬೆರಗುಗೊಳಿಸುವ ಸಂಖ್ಯೆ. ದುರಂತವೆಂದರೆ ಕಾಲೇಜಿನಿಂದ ಹೊರಬರುವ ಈ ಪದವೀಧರರ ಪೈಕಿ ಎಷ್ಟು ಮಂದಿ ವೃತ್ತಿ ಬೇಡಿಕೆಗೆ ಸಿದ್ಧರಾಗಿರುತ್ತಾರೆ? ನನ್ನ ಪ್ರಕಾರ ಅದು ಶೇ. 25ಕ್ಕಿಂತಲೂ ಕಡಿಮೆ” ಎಂದಿದ್ದಾರೆ.

ನನ್ನ ಹೇಳಿಕೆಯನ್ನು ಪದವೀಧರರ ಬಗೆಗಿನ ಪ್ರತಿಕ್ರಿಯೆಯಾಗಿ ಭಾವಿಸಬಾರದು ಎಂದು ಸ್ಪಷ್ಟಪಡಿಸಿರುವ ನ್ಯಾ. ರಮಣ ಅವರು ಪದವೀಧರರು ಯಶಸ್ವಿ ವಕೀಲರಾಗಲುಬೇಕಾದ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದಾರೆ ಎಂದು ಹೇಳಿದ್ದಾರೆ. “ನಾಮಕಾವಸ್ಥೆಗೆ ಇರುವ ಕಳಪೆ ಕಾನೂನು ಶಿಕ್ಷಣ ನೀಡುವ ಬಹುದೊಡ್ಡ ಸಂಖ್ಯೆಯಲ್ಲಿರುವ ಸಂಸ್ಥೆಗಳಿಗೆ ನನ್ನ ಹೇಳಿಕೆ ಸೀಮಿತವಾಗಿದೆ. ಹಲವಾರು ಕೆಳದರ್ಜೆಯ ಕಾನೂನು ಕಾಲೇಜುಗಳು ದೇಶದಲ್ಲಿದ್ದು, ಅದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ನ್ಯಾಯಾಂಗವು ಗಂಭೀರವಾಗಿ ಪರಿಗಣಿಸಿದ್ದು, ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಸರ್ಕಾರ ಅಥವಾ ಸಮಾಜಘಾತಕ ಶಕ್ತಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ತುತ್ತಾಗಿರುವವರಿಗೆ ನೆರವಾಗಲು ತಮ್ಮ ಕಾನೂನು ತಿಳಿವಳಿಕೆ, ಶಕ್ತಿ, ಸಾಮರ್ಥ್ಯವನ್ನು ವಿನಿಯೋಗಿಸುವಂತೆ ಕಾನೂನು ವಿದ್ಯಾರ್ಥಿಗಳಿಗೆ ನ್ಯಾ. ರಮಣ ಸಲಹೆ ನೀಡಿದರು. “ಕಾನೂನಿನ ಮೂಲಕ ಅದನ್ನು ಬಲವಾಗಿ ವಿರೋಧಿಸುವ ಸ್ಥಾನದಲ್ಲಿ ಯುವ ವಕೀಲರಾದ ನೀವು ಇದ್ದೀರಿ. ನೀವು ದೇಶದ ಆತ್ಮಸಾಕ್ಷಿಯನ್ನು ಕಾಯುವಂತವರಾಗಬೇಕು. ತಮ್ಮ ಹಕ್ಕುಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿ, ನಿಮಗೆ ಸಾಧ್ಯವಿರುವಾಗ ಅವರಿಗೆ ಕಾನೂನು ಮಾರ್ಗದರ್ಶನ ಮಾಡಿ. ಈ ಜವಾಬ್ದಾರಿಯನ್ನು ನಿಭಾಯಿಸುವುದು ಸುಲಭ ಸಾಧ್ಯವಲ್ಲ. ಆದರೆ, ಇದನ್ನು ಜವಾಬ್ದಾರಿಯನ್ನು ನೀವು ಸಮರ್ಥರಾಗಿ ನಿಭಾಯಿಸುತ್ತೀರಿ ಎಂದು ನಾನು ಬಲವಾಗಿ ನಂಬಿದ್ದೇನೆ” ಎಂದಿದ್ದಾರೆ.

ವಕೀಲರು ಈ ರಾಷ್ಟ್ರದ ಉಸ್ತುವಾರಿಗಳು ಮತ್ತು ಅತ್ಯಂತ ಶ್ರೀಮಂತ ಸಂಪ್ರದಾಯದ ಪಾಲಕರಾಗಿದ್ದಾರೆ. “ನೆನಪಿಟ್ಟುಕೊಳ್ಳಿ, ನಿಮ್ಮ ದನಿ ಬಹಳ ಮುಖ್ಯ” ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.