ದೆಹಲಿ ಗಡಿಯಲ್ಲಿ ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಮೇಶ್ವರ ಸಿಂಗ್ ಮಲಿಕ್ ಬೆಂಬಲ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ; ಪ್ರಸ್ತುತ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ನ್ಯಾಯವಾದಿಯಾಗಿ ಅಭ್ಯಾಸನಿರತರಾದ ಮಲಿಕ್ ಕೇಂದ್ರ ಸರ್ಕಾರ ಅಂಗೀಕರಿಸಿದ ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ರೈತರು ಮತ್ತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ʼಟಿವಿ ಪಂಜಾಬ್ʼ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನ್ಯಾ. ಮಲಿಕ್ ಅವರು ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು. ಕೃಷಿ ಕಾನೂನುಗಳ ಜಾರಿ ತಡೆಯುವ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ತಮ್ಮ ಅಭಿಪ್ರಾಯ ಕೇಳಿದಾಗ, ನ್ಯಾ. ಮಲೀಕ್ “ಈ ನಿರ್ಧಾರ ಅಂತಿಮವಲ್ಲ. ಇದು ಮಧ್ಯಂತರ ಆದೇಶ. ಅವರು ಸಮಿತಿ ರಚಿಸಿದ್ದಾರೆ... ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಪ್ರತಿಕೂಲ ಪ್ರತಿಕ್ರಿಯೆ ನೀಡುವುದು ಸರಿಯಲ್ಲ” ಎಂದರು.
ರೈತರ ಅಗತ್ಯಗಳನ್ನು ಪರಿಗಣಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ ನ್ಯಾಯಮೂರ್ತಿ ಮಲಿಕ್, "ನನ್ನ ವಿನಮ್ರ ಮನವಿ ಎಂದರೆ : ಸುಪ್ರೀಂಕೋರ್ಟ್ ಸಮಿತಿಯಲ್ಲಿ ಕೃಷಿ ಹೇಗೆ ಮಾಡಲಾಗುತ್ತದೆ ಮತ್ತು ರೈತರು ಯಾವ ತೊಂದರೆ ಎದುರಿಸುತ್ತಾರೆ ಎಂಬ ನೆಲದ ವಾಸ್ತವತೆ ತಿಳಿದಿರುವ ಒಬ್ಬ ಸದಸ್ಯನಾದರೂ ಇರಬೇಕು” ಎಂದರು. ಈಗಿನಂತೆ ಮುಂದೆಯೂ ಪ್ರತಿಭಟನೆ ಶಾಂತಿಯುತವಾಗಿ ನಡೆಯಬೇಕು. . ರೈತರ ಬೇಡಿಕೆಗಳನ್ನು ಸರ್ಕಾರ ಮುಕ್ತ ಮನಸ್ಸಿನಿಂದ ಚರ್ಚಿಸಿ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಯಾವುದೇ ನಿರ್ದಿಷ್ಟ ಪಾತ್ರಕ್ಕಾಗಿ ನಾನು ನಿಮ್ಮೊಂದಿಗೆ ಇಲ್ಲ, ಆದರೆ ತಾನೊಬ್ಬ ರೈತನ ಮಗನಾಗಿ ಹಾಗೂ ಕೃಷಿಕರ ನಡುವೆ ಎದ್ದಿರುವ ಆತಂಕಗಳೊಂದಿಗೆ ಸಂಬಂಧ ಇರುವ ವ್ಯವಸಾಯಗಾರನಾಗಿ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದೇನೆ ಎಂದು ವಿವರಿಸಿದರು. 2011ರ ಸೆಪ್ಟೆಂಬರ್ನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಮಲಿಕ್ ಅವರಿಗೆ ಪದೋನ್ನತಿ ನೀಡಲಾಯಿತು. 2017 ರ ಅಕ್ಟೋಬರ್‌ನಲ್ಲಿ ಅವರು ಹುದ್ದೆಯಿಂದ ನಿವೃತ್ತರಾದರು.
ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ವಿವಾದಾತ್ಮಕ ಕೃಷಿ ಕಾಯಿದೆಗಳಿಗೆ ತಡೆ ನೀಡಿದೆ. ಕಳೆದ ನವೆಂಬರ್‌ನಿಂದಲೂ ಪಂಜಾಬ್ ಮತ್ತು ಹರಿಯಾಣದ ರೈತರು ದೆಹಲಿಯ ಗಡಿ ಪ್ರದೇಶದಲ್ಲಿ ಕಾಯಿದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸಮಸ್ಯೆ ಇತ್ಯರ್ಥಪಡಿಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ಪೀಠ ನಾಲ್ವರು ಸದಸ್ಯರ ಸಮಿತಿ ರಚಿಸುವಂತೆ ಆದೇಶಿಸಿತ್ತು. ಸಮಿತಿ ರಚನೆ ವಿವಾದಕ್ಕೀಡಾಗಿ ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ಮತ್ತು ಸಮಿತಿಯ ಒಬ್ಬ ಸದಸ್ಯರು ಸಮಿತಿಯಿಂದ ಹೊರನಡೆದಿದ್ದರು.