'ರೈತರ ಪ್ರತಿಭಟನೆ ಶೀಘ್ರದಲ್ಲೇ ರಾಷ್ಟ್ರೀಯ ಸಮಸ್ಯೆಯಾಗಬಹುದು': ಸಮಿತಿ ರಚನೆಗೆ ಮುಂದಾದ ಸುಪ್ರೀಂಕೋರ್ಟ್

"ರೈತ ಸಂಘಟನೆಗಳನ್ನು ಕೂಡ ಸಮಿತಿಯ ಭಾಗವಾಗುವಂತೆ ನಾವು ಕೇಳುತ್ತೇವೆ ಏಕೆಂದರೆ ಇದು ಶೀಘ್ರದಲ್ಲಿಯೇ ರಾಷ್ಟ್ರೀಯ ಸಮಸ್ಯೆಯಾಗಲಿದೆ" ಎಂದು ಸಿಜೆಐ ಬೊಬ್ಡೆ ತಿಳಿಸಿದರು.
Supreme Court
Supreme Court

ದೆಹಲಿ ಮತ್ತು ಸುತ್ತಮುತ್ತಲಿನ ರೈತರ ಪ್ರತಿಭಟನೆ ಶೀಘ್ರದಲ್ಲೇ ರಾಷ್ಟ್ರೀಯ ಸಮಸ್ಯೆಯಾಗಬಹುದು ಎಂದು ಸುಪ್ರೀ ಕೋರ್ಟ್ ಬುಧವಾರ ಹೇಳಿದ್ದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸಮಿತಿಯೊಂದನ್ನು ರಚಿಸಲು ಅದು ಮುಂದಾಗಿದೆ.

ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ನಡುವಿನ ಮಾತುಕತೆ ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ ಎಂದು ಕೂಡ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ , ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ ಬುಧವಾರ ಅಭಿಪ್ರಾಯಪಟ್ಟಿದೆ.

" ಮೆಹ್ತಾ (ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ) ನಾವು ಏನು ಮಾಡಲು ಯೋಜನೆ ರೂಪಿಸುತ್ತಿದ್ದೇವೆ ಎಂಬುದನ್ನು ನಿಮಗೆ ತಿಳಿಸುತ್ತೇವೆ. ವಿವಾದ ಬಗೆಹರಿಸಲು ನಾವೊಂದು ಸಮಿತಿ ರಚಿಸಲಿದ್ದೇವೆ. ಇದರಲ್ಲಿ ಭಾರತೀಯ ಕಿಸಾನ್ ಯೂನಿಯನ್, ಕೇಂದ್ರ ಸರ್ಕಾರ ಮತ್ತಿತರ ರೈತ ಸಂಘಟನೆಗಳ ಸದಸ್ಯರು ಇರುತ್ತಾರೆ. ನಾವು ರೈತ ಸಂಘಟನೆಗಳನ್ನು ಸಹ ಸಮಿತಿಯ ಭಾಗವಾಗುವಂತೆ ಕೇಳಿಕೊಳ್ಳುತ್ತಿದ್ದೇವೆ. ಏಕೆಂದರೆ ಅದು ಶೀಘ್ರದಲ್ಲೇ ರಾಷ್ಟ್ರೀಯ ಸಮಸ್ಯೆಯಾಗಲಿದೆ," ಎಂದು ಸಿಜೆಐ ಬೊಬ್ಡೆ ಹೇಳಿದರು.

ಕಾಯಿದೆ ʼರದ್ದುಪಡಿಸುತ್ತೀರೋ ಅಥವಾ ಇಲ್ಲವೋʼ ಎಂದು ಹೌದು ಅಥವಾ ಇಲ್ಲ ಎನ್ನುವ ಉತ್ತರ ಬಯುಸುತ್ತಿರುವ ಕಾರಣಕ್ಕೆ ಪ್ರತಿಭಟನಕಾರರೊಂದಿಗಿನ ಮಾತುಕತೆ ಫಲಪ್ರದವಾಗಿಲ್ಲ. ಕೃಷಿ ಸಚಿವರು, ಗೃಹಸಚಿವರು ಅವರೊಂದಿಗೆ ಮಾತುಕತೆಗೆ ಮುಂದಾದರೂ ಅವರು ನಮ್ಮತ್ತ ಬೆನ್ನು ತಿರುಗಿಸಿದರು” ಎಂದು ಕೇಂದ್ರ ಸರ್ಕಾರ ಪೀಠಕ್ಕೆ ತಿಳಿಸಿತು. ಆಂದೋಲನದ ನಾಯಕರು ಯಾರು ಎಂಬ ನ್ಯಾಯಾಲಯದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಮೆಹ್ತಾ ರೈತರ ನಡೆಯ ಬಗ್ಗೆ ಮೇಲಿನಂತೆ ಹೇಳಿದರು.

ಮುಂದುವರೆದು, “ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಯಾವುದನ್ನೂ ಕೇಂದ್ರ ಸರ್ಕಾರ ಮಾಡುವುದಿಲ್ಲ” ಎಂದು ಒತ್ತಿಹೇಳಿದರು. “ಈಗಾಗಲೇ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳುತ್ತಿರುವಾಗ ನೀವು ಹೀಗೆ ಹೇಳುವುದರ ಅರ್ಥವೇನು,” ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.

“ಅವರಿಗೆ ಹೌದು ಅಥವಾ ಇಲ್ಲವೇ ಎಂಬ ಉತ್ತರವಷ್ಟೇ ಬೇಕಿದೆ” ಎಂದು ಮೆಹ್ತಾ ಪ್ರತಿಕ್ರಿಯಿಸಿದರು. ಆಗ ನ್ಯಾ. ಬೊಬ್ಡೆ, “ಅವರು ಒಪ್ಪದ ಕಾರಣ ನಿಮ್ಮ ಮಾತುಕತೆ ಮತ್ತೆ ವಿಫಲಗೊಳ್ಳುತ್ತದೆ. ಪ್ರತಿಭಟನೆಯಲ್ಲಿ ತೊಡಗಿರುವ ಅವರನ್ನು ಪ್ರತಿನಿಧಿಸಬಹುದಾದ ಸಂಘಸಂಸ್ಥೆಗಳ ಹೆಸರನ್ನು ನಮಗೆ ನೀಡಿ” ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.

ಇದೇ ವೇಳೆ, ತಮ್ಮ ಮುಂದಿರುವ ಅರ್ಜಿಗಳು ತಪ್ಪು ಗ್ರಹಿಕೆಯಿಂದ ಕೂಡಿದ್ದರೂ ಜನರ ಮುಕ್ತ ಚಲನೆಯ ಸ್ವಾತಂತ್ರ್ಯದ ಪ್ರಶ್ನೆಯನ್ನು ಅದು ಹುಟ್ಟುಹಾಕುತ್ತದೆ ಮತ್ತು ರೈತರು ನಗರಕ್ಕೆ ಪ್ರವೇಶಿಸುವುದನ್ನು ತಡೆಯಲು ಕೇಂದ್ರ ಸರ್ಕಾರವೇ ರಸ್ತೆಗಳನ್ನು ಪ್ರತಿಬಂಧಿಸಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ನಂತರ ಪೀಠವು ಕೇಂದ್ರ ಸರ್ಕಾರ, ಹರಿಯಾಣ, ಉತ್ತರ ಪ್ರದೇಶ, ದೆಹಲಿ ಹಾಗೂ ಪಂಜಾಬ್ ಸರ್ಕಾರಗಳಿಗೆ ನೋಟಿಸ್ ನೀಡಲು ಮುಂದಾಯಿತು ಮತ್ತು ಪ್ರತಿಭಟನಾ ನಿರತ ರೈತರನ್ನು ಮತ್ತು ಅವರನ್ನು ಪ್ರತಿನಿಧಿಸುವ ಸಂಘಗಳು ಮತ್ತು ಒಕ್ಕೂಟಗಳನ್ನು ಕೂಡ ಪಕ್ಷಕಾರರನ್ನಾಗಿ ಮಾಡುವ ಅವಕಾಶವನ್ನು ಅರ್ಜಿದಾರರಿಗೆ ನೀಡಿತು. ಪ್ರಕರಣದ ವಿಚಾರಣೆ ಮತ್ತೆ ಗುರುವಾರ ನಡೆಯಲಿದೆ.

ಕೋವಿಡ್‌ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ದೆಹಲಿ ರಸ್ತೆಗಳನ್ನು ಮುಚ್ಚಿರುವುದು ಮತ್ತು ತುರ್ತು/ವೈದ್ಯಕೀಯ ಸೇವೆಗಳಿಗೆ ಅಡ್ಡಿಪಡಿಸುತ್ತಿರುವುದರಿಂದ ಪ್ರತಿಭಟನಾ ನಿರತ ರೈತರನ್ನು ತೆರವುಗೊಳಿಸುವ ಅವಶ್ಯಕತೆ ಇದೆ. ವಿವಿಧ ರಾಜ್ಯಗಳ ಅನೇಕ ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ದೆಹಲಿಗೆ ಆಗಾಗ್ಗೆ ತೆರಳುವುದುಂಟು ಎಂದು ಕಾನೂನು ವಿದ್ಯಾರ್ಥಿ ರಿಷಬ್‌ ಶರ್ಮಾ ಅವರು ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com