Muslim man and women Image for representative purpose
ಸುದ್ದಿಗಳು

ಮೊದಲ ಪತ್ನಿ ಆಕ್ಷೇಪಿಸಿದರೆ ಮುಸ್ಲಿಂ ಪುರುಷ ಎರಡನೇ ವಿವಾಹ ನೊಂದಾಯಿಸುವಂತಿಲ್ಲ: ಹೈಕೋರ್ಟ್

ಮೊದಲ ಪತ್ನಿಯಿಂದ ಆಕ್ಷೇಪಣೆ ಬಂದರೆ, ರಿಜಿಸ್ಟ್ರಾರ್ ವಿವಾಹ ಪ್ರಕರಣ ಮುಂದುವರೆಸದೆ. ವೈಯಕ್ತಿಕ ಕಾನೂನಿನ ಅಡಿಯಲ್ಲಿ ವಿವಾಹದ ಸಿಂಧುತ್ವ ಸಾಬೀತಿಗಾಗಿ ಸಕ್ಷಮ ಸಿವಿಲ್ ನ್ಯಾಯಾಲಯಕ್ಕೆ ಪಕ್ಷಕಾರರನ್ನು ಕಳುಹಿಸಬೇಕು ಎಂದ ಪೀಠ.

Bar & Bench

ಕೇರಳ ವಿವಾಹ ನೋಂದಣಿ (ಸಾಮಾನ್ಯ) ನಿಯಮಾವಳಿ- 2008ರ ಪ್ರಕಾರ ಮುಸ್ಲಿಂ ಪುರುಷ ತನ್ನ ಎರಡನೇ ವಿವಾಹವನ್ನು ಮೊದಲ ಪತ್ನಿಗೆ ತಿಳಿಸದೆ ಮತ್ತು ವಿಚಾರಣೆ ನಡೆಸದೆ ನೋಂದಾಯಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ಈಚೆಗೆ ತೀರ್ಪು ನೀಡಿದೆ [ಹೆಸರು ಬಹಿರಂಗವಾಗದ ಕಕ್ಷಿದಾರರು ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮುಸ್ಲಿಂ ವೈಯಕ್ತಿಕ ಕಾನೂನು ಪುರುಷನಿಗೆ ಬಹು ಪತ್ನಿತ್ವಕ್ಕೆ ಅವಕಾಶ ನೀಡುತ್ತದೆಯಾದರೂ    ಅಂತಹ ಹಕ್ಕು ಸಮಾನತೆ ಮತ್ತು ನ್ಯಾಯಯುತ ವಿಚಾರಣೆಯ ಸಾಂವಿಧಾನಿಕ ತತ್ವಗಳನ್ನು ಅತಿಕ್ರಮಿಸುವಂತಿಲ್ಲ ಎಂದು ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್ ತಿಳಿಸಿದರು.

ವಿವಾಹ ನೋಂದಣಿ ಕಾನೂನುಬದ್ಧ ಅವಶ್ಯಕತೆಯಾಗಿದ್ದು, 2008 ರ ಕಾಯಿದೆ ಪ್ರಕಾರ, ಮೊದಲ ಪತ್ನಿಯ ವಿವಾಹ ಮುಂದುವರಿದಿದ್ದರೆ, ಆಕೆಯ ಪತಿ ತನ್ನ ಎರಡನೇ ವಿವಾಹದ ನೋಂದಣಿಗೆ ಮೊದಲು ಆಕೆಗೆ ತಾನು ವಿವಾಹವಾಗುತ್ತಿರುವ ಬಗ್ಗೆ ನೋಟಿಸ್ ನೀಡಬೇಕು ಎಂದು ನ್ಯಾಯಾಧೀಶರು ತಿಳಿಸಿದರು.

ಜಾರಿಯಲ್ಲಿರುವ 2008ರ ನಿಯಮಾವಳಿ ಪ್ರಕಾರ ಪುರುಷ ಮದುವೆ ನೋಂದಾಯಿಸಲು ಬಯಸಿದಾಗ ಸಾಂವಿಧಾನಿಕ ಆದೇಶಗಳನ್ನು ಗೌರವಿಸಬೇಕು. 2008ರ ನಿಯಮಾವಳಿ ಪ್ರಕಾರ ತನ್ನ ಮೊದಲ ಹೆಂಡತಿಯೊಂದಿಗಿನ ವೈವಾಹಿಕ ಸಂಬಂಧ ಅಸ್ತಿತ್ವದಲ್ಲಿದ್ದಾಗ, ಮುಸ್ಲಿಂ ಪುರುಷ ಮೊದಲ ಹೆಂಡತಿಗೆ ಸೂಚನೆ ನೀಡದೆ, ತನ್ನ ಎರಡನೇ ಮದುವೆಯನ್ನು ನೋಂದಾಯಿಸುವಂತಿಲ್ಲ ಎಂದು ನ್ಯಾಯಾಲಯ ನುಡಿದಿದೆ

ಒಂದು ವೇಳೆ ಮೊದಲ ಹೆಂಡತಿ ಎರಡನೇ ಮದುವೆ ಮಾನ್ಯವಲ್ಲ ಎಂದು ಆಕ್ಷೇಪಿಸಿದರೆ ರಿಜಿಸ್ಟ್ರಾರ್ ವಿವಾಹ ಪ್ರಕರಣ ಮುಂದುವರೆಸದಂತೆ ತಡೆಯಬೇಕು. ವೈಯಕ್ತಿಕ ಕಾನೂನಿನ ಅಡಿಯಲ್ಲಿ ವಿವಾಹದ ಸಿಂಧುತ್ವ ಸಾಬೀತಿಗಾಗಿ ಸಕ್ಷಮ ಸಿವಿಲ್ ನ್ಯಾಯಾಲಯಕ್ಕೆ ಪಕ್ಷಕಾರರನ್ನು ಕಳಿಸಿಕೊಡಬೇಕು ಎಂದು ಪೀಠ ಹೇಳಿದೆ.

"ಪತಿ ಮೊದಲ ಹೆಂಡತಿಯನ್ನು ನಿರ್ಲಕ್ಷ್ಯಮಾಡಿದ್ದರೆ ಇಲ್ಲವೇ ಪಾಲನೆ ಮಾಡದಿದ್ದರೆ, ಅಥವಾ ಆಕೆಯೊಂದಿಗೆ ಕ್ರೂರವಾಗಿ ನಡೆದುಕೊಂಡು ನಂತರ ತನ್ನ ವೈಯಕ್ತಿಕ ಕಾನೂನನ್ನು ನೆಪವಾಗಿಸಿ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಪರಿಸ್ಥಿತಿಯಲ್ಲಿ, 2008ರ ನಿಯಮಗಳ ಪ್ರಕಾರ  ಮೊದಲ ಹೆಂಡತಿಯ ವಾದ ಆಲಿಸಲು ಅವಕಾಶ ನೀಡುವುದು ಆಕೆಗೆ ಉಪಯುಕ್ತವಾಗುತ್ತದೆ" ಎಂದು ಅದು ವಿವರಿಸಿದೆೆ.

ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಸಾಂವಿಧಾನಿಕ ಹಕ್ಕುಗಳನ್ನು ನಿರ್ಲಕ್ಷಿಸಲಾಗದು ಎಂದು ಕೂಡ ನ್ಯಾಯಾಲಯ ತಿಳಿಸಿದೆ.

"ಲಿಂಗ ಸಮಾನತೆ ಎಂಬುದು ಪ್ರತಿ ನಾಗರಿಕನ ಸಂವಿಧಾನ ಹಕ್ಕು. ಪುರುಷ ಮಹಿಳೆಗಿಂತ ಶ್ರೇಷ್ಠನಲ್ಲ. ಲಿಂಗ ಸಮಾನತೆ ಮಹಿಳೆಯರ ವಿಚಾರವಲ್ಲ, ಅದು ಮಾನವೀಯ ಹಕ್ಕಿನ ವಿಚಾರ. ಈಗಾಗಲೇ ಹೇಳಿದಂತೆ, ಕುರ್‌ಆನ್ ಮತ್ತು ಹದೀಸ್‌ಗಳಲ್ಲಿ ದಾಂಪತ್ಯ ಜೀವನದಲ್ಲಿ ನ್ಯಾಯ, ಸಮಾನತೆ, ಪಾರದರ್ಶಕತೆ ಮುಖ್ಯ. ಆದ್ದರಿಂದ ಮೊದಲ ವಿವಾಹ ಸಕ್ರಿಯವಾಗಿರುವಾಗ ಮೊದಲ ಹೆಂಡತಿ ಜೀವಂತ ಇರುವಾಗ, 2008ರ ನಿಯಮಗಳ ಪ್ರಕಾರ ಒಬ್ಬ ಮುಸ್ಲಿಂ ಪುರುಷನು ತನ್ನ ಎರಡನೇ ಮದುವೆ ನೋಂದಣಿಗೆ ಮುಂದಾದರೆ ಆಗ ಮೊದಲ ಹೆಂಡತಿಯ ವಾದ ಆಲಿಸಲು ಅವಕಾಶ ನೀಡಬೇಕು ಎಂದು ಪೀಠ ವಿವರಿಸಿದೆ.

ಆದರೆ, ಮೊದಲ ಪತ್ನಿಗೆ ತಲಾಖ್ ಹೇಳಿದ ನಂತರ ಎರಡನೇ ಮದುವೆಯಾದರೆ, ಮೊದಲ ಪತ್ನಿಗೆ ನೋಟಿಸ್ ನೀಡುವ ಪ್ರಶ್ನೆಯೇ ಇಲ್ಲ ಎಂದು ಅದು ತಿಳಿಸಿತು.

ಲಿಂಗ ಸಮಾನತೆ ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕು. ಪುರುಷರು ಮಹಿಳೆಯರಿಗಿಂತ ಮೇಲಲ್ಲ. ಲಿಂಗ ಸಮಾನತೆ ಮಹಿಳೆಯರಿಗೆ ಸಂಬಂಧಿಸಿದ ವಿಚಾರವಲ್ಲ ಬದಲಿಗೆ ಅದು ಮಾನವ ಹಕ್ಕಿಗೆ ಸಂಬಂಧಿಸಿದ ಸಂಗತಿ.
ಕೇರಳ ಹೈಕೋರ್ಟ್

ತ್ರಿಕ್ಕರಿಪುರ ಗ್ರಾಮ ಪಂಚಾಯತ್ ತಮ್ಮ ವಿವಾಹವನ್ನು ನೋಂದಾಯಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಮುಸ್ಲಿಂ ಪುರುಷ ಮತ್ತು ಆತನ ಎರಡನೇ ಪತ್ನಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು  ಆಲಿಸಿದ ನ್ಯಾಯಾಲಯ ಈ ವಿಚಾರ ತಿಳಿಸಿದೆ. ಮೊದಲ ಪತ್ನಿಯಿಂದ ಇಬ್ಬರು ಮಕ್ಕಳು ಎರಡನೇ ಪತ್ನಿಯಿಂದ ಇಬ್ಬರು ಮಕ್ಕಳನ್ನು ಪಡೆದಿದ್ದ ವ್ಯಕ್ತಿ ಪಂಚಾಯತ್‌ನಲ್ಲಿ ಎರಡನೇ ಮದುವೆಯ ನೋಂದಣಿ ಕೋರಿದಾಗ ಮದುವೆಗೆ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪುರುಷ ಮತ್ತು ಆತನ ಎರಡನೇ ಪತ್ನಿ ಹೈಕೋರ್ಟ್‌ ಮೊರೆ ಹೋಗಿದ್ದರು. ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ, ಒಬ್ಬ ಮುಸ್ಲಿಂ ಪುರುಷ ಏಕಕಾಲದಲ್ಲಿ ನಾಲ್ಕು ಪತ್ನಿಯರನ್ನು ಹೊಂದಲು ಅರ್ಹತೆ ಇದೆ. ಆದ್ದರಿಂದ, ರಿಜಿಸ್ಟ್ರಾರ್ ಎರಡನೇ ಮದುವೆಯನ್ನು ನೋಂದಾಯಿಸಿಕೊಡಬೇಕು ಎಂದು ಅವರು ವಾದಿಸಿದ್ದರು.

ವಾದ ಆಲಿಸಿದ ಹೈಕೋರ್ಟ್‌, ಕುರ್‌ಆನ್‌ ಪ್ರಕಾರ, ಪುರುಷ ಎರಡನೇ ಮದುವೆ ಮಾಡುವಾಗ ಮೊದಲ ಹೆಂಡತಿಯ ಅನುಮತಿ ಕಡ್ಡಾಯ ಎಂದು ಸ್ಪಷ್ಟವಾಗಿ ಬರೆಯಲಾಗಿಲ್ಲ. ಆದರೆ, ಮೊದಲ ಹೆಂಡತಿಯ ಸಮ್ಮತಿ ಪಡೆಯುವುದು ಅಥವಾ ಕನಿಷ್ಠ ಆಕೆಗೆ ಮಾಹಿತಿ ನೀಡುವುದು ಸಂವಿಧಾನ ಮತ್ತು ಧರ್ಮಗಳೆರಡರ ತತ್ವಗಳ ಕೇಂದ್ರಬಿಂದುಗಳಾಗಿರುವ  ನ್ಯಾಯ, ಸಮಾನತೆ ಮತ್ತು ಪಾರದರ್ಶಕತೆ ಎಂಬ ಮೌಲ್ಯಗಳಿಗೆ ಅನುಗುಣವಾಗಿರುತ್ತದೆ ಎಂದಿದೆ.

ಹೀಗೆ ಮಾಹಿತಿ ನೀಡುವುದು ಔಪಚಾರಿಕತೆ ಮಾತ್ರವಲ್ಲ ಮಹಿಳೆಯರಿಗೆ ಆಗುವ ಅನ್ಯಾಯವನ್ನು ತಡೆಯುವ ಕ್ರಮ ಕೂಡ ಎಂದು ನ್ಯಾಯಾಲಯ ಹೇಳಿದೆ.

ಅಂತೆಯೇ ಮೊದಲ ಹೆಂಡತಿಯನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿಲ್ಲದ ಕಾರಣ ಅರ್ಜಿಯನ್ನು ಅದು ಬದಿಗೆ ಸರಿಸಿತು. ಆದರೆ ಮೊದಲ ಹೆಂಡತಿಗೆ ನೋಟಿಸ್‌ ನೀಡಿ ನಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಿತು.  

"ಮುಸ್ಲಿಂ ಮಹಿಳೆಯರು ತಮ್ಮ ಗಂಡಂದಿರು ಮರುಮದುವೆಯಾದಾಗ, ಕನಿಷ್ಠ ಎರಡನೇ ವಿವಾಹವನ್ನು ನೋಂದಾಯಿಸುವ ಹಂತದಲ್ಲಾದರೂ ವಿಚಾರಣೆಗೆ ಅವಕಾಶ ಪಡೆಯಲಿ " ಎಂದು ನ್ಯಾಯಾಲಯದ ತೀರ್ಪು ತಿಳಿಸಿದೆ.