

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ (ಎನ್‌ಸಿಎಂ) ಅಧ್ಯಕ್ಷ ಹುದ್ದೆಗೆ ಇಸ್ಲಾಂ ಮತ್ತು ಸಿಖ್ ಧರ್ಮವನ್ನು ಹೊರತುಪಡಿಸಿ ಉಳಿದ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರನ್ನು ನೇಮಿಸಲು ನಿರ್ದೇಶನ ನೀಡುವುದಕ್ಕೆ ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ [ಶ್ರೀ ಸಲೇಕ್ ಚಂದ್ ಜೈನ್ ಮತ್ತು ಭಾರತ ಒಕ್ಕೂಟದ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].
ಅರ್ಜಿದಾರರು ಕೇಂದ್ರ ಸರ್ಕಾರಕ್ಕೆ ಮನವಿ ನೀಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
"ಈ ಮನವಿಯನ್ನು ಅರ್ಜಿದಾರರು ಕೇಂದ್ರ ಸರ್ಕಾರ ಸಂಪರ್ಕಿಸುವ ಸ್ವಾತಂತ್ರ್ಯದೊಂದಿಗೆ ವಿಲೇವಾರಿ ಮಾಡಲಾಗಿದೆ. ಪತ್ರ ಬರೆದರೆ (ಕೇಂದ್ರ ಸರ್ಕಾರ) ಅದನ್ನು ಆಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು" ಎಂದು ನ್ಯಾಯಾಲಯ ಆದೇಶಿಸಿತು.
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿ ಇದುವರೆಗೆ ನೇಮಕಗೊಂಡ 16 ಜನರಲ್ಲಿ 14 ಮಂದಿ ಮುಸ್ಲಿಮರು ಮತ್ತು ಇಬ್ಬರು ಸಿಖ್ಖರು ಎಂದು ಸಲೇಕ್ ಚಾನ್ ಜೈನ್ ಎಂಬುವವರು ಸಲ್ಲಿಸಿರುವ ಪಿಐಎಲ್‌ನಲ್ಲಿ ತಿಳಿಸಲಾಗಿದೆ.
ಸಲೇಕ್ ಚಾನ್ ಜೈನ್ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ (ಪಿಐಎಲ್) ಅಲ್ಪಸಂಖ್ಯಾತ ಆಯೋಗದ 16 ಅಧ್ಯಕ್ಷರು ಕಾರ್ಯನಿರ್ವಹಿಸಿದ್ದು ಅವರಲ್ಲಿ 14 ಮಂದಿ ಮುಸ್ಲಿಮರಾಗಿದ್ದರೆ, ಇಬ್ಬರು ಸಿಖ್ಖರು ಎಂದು ತಿಳಿಸಲಾಗಿದೆ.
ಕ್ರೈಸ್ತರು, ಬೌದ್ಧರು, ಜೈನರು ಮತ್ತುಯಹೂದಿ ಇನ್ನಿತರ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರನ್ನು ಕೂಡ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಬೇಕೆಂದು ನಿರ್ದೇಶನ ಕೋರುತ್ತಿರುವುದಾಗಿ ವಕೀಲರು ಹೇಳಿದರು.
ಆದರೆ, 1992ರ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯಿದೆಯ ಸೆಕ್ಷನ್ 3 ಪ್ರಕಾರ ಆಯೋಗ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಸದಸ್ಯರನ್ನು ಒಳಗೊಂಡಿರಬೇಕು ಎಂದು ಹೇಳುವುದಿಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.
"ಅಧ್ಯಕ್ಷರು ಸೇರಿದಂತೆ ಐವರು ಸದಸ್ಯರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಎಂಬುದು ಒಂದೇ ನಿಬಂಧನೆ. ಅಧ್ಯಕ್ಷರ ಸದಸ್ಯರು ಯಾವುದೇ ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಎಂದು ನಿಬಂಧನೆ ಹೇಳುವುದಿಲ್ಲ" ಎಂದು ನ್ಯಾಯಾಲಯ ದಾಖಲಿಸಿದೆ.
ಅಂತಿಮವಾಗಿ, ಅರ್ಜಿ ವಿಲೇವಾರಿ ಮಾಡಿದ ಅದು, ಅರ್ಜಿದಾರರು ಕೇಂದ್ರ ಸರ್ಕಾರವನ್ನು ಸಂಪರ್ಕಿಸುವ ಸ್ವಾತಂತ್ರ್ಯ ನೀಡಿತು.